ಜೇವರ್ಗಿ | ಕರ್ನಾಟಕ ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್‌ವಾದ) ಬಲಪಡಿಸಲು ಕರೆ

ಜೇವರ್ಗಿ: ಕರ್ನಾಟಕ ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್‌ವಾದ) ಸಂಘಟನೆಯನ್ನು ಮತ್ತಷ್ಟು ಬಲಪಡಿಸುವ ನಿಟ್ಟಿನಲ್ಲಿ ಮಂಗಳವಾರ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಮಹತ್ವದ ಸಭೆ ನಡೆಯಿತು.
ರಾಜ್ಯ ಕಾರ್ಯಕಾರಿಣಿ ಸದಸ್ಯ ನಾಗಣ್ಣ ಬಡಿಗೇರ ಅವರ ಅಧ್ಯಕ್ಷತೆಯಲ್ಲಿ ಹಾಗೂ ಜಿಲ್ಲಾ ಸಂಚಾಲಕ ಸಂಜೀವಕುಮಾರ್ ಜವಳಕರ್ ಅವರ ಮಾರ್ಗದರ್ಶನದಲ್ಲಿ ಸಭೆ ಆಯೋಜಿಸಲಾಗಿತ್ತು. ವಿಭಾಗೀಯ ಸಂಚಾಲಕ ಶ್ರೀನಿವಾಸ್ ಖೇಳಗಿ, ಸಂಘಟನಾ ಸಂಚಾಲಕರಾದ ಬಾಬುರಾವ್ ಶಳ್ಳಗಿ, ಶ್ರೀಹರಿ ಕರಕಳ್ಳಿ ಸೇರಿದಂತೆ ತಾಲೂಕಿನ ವಿವಿಧ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಭಾಗವಹಿಸಿದ್ದರು.
ಸಭೆಯಲ್ಲಿ ಸದಸ್ಯತ್ವ ಅಭಿಯಾನ ವಿಸ್ತರಣೆ, ಪದಾಧಿಕಾರಿಗಳು ಹಾಗೂ ಕಾರ್ಯಕರ್ತರ ಕುಂದುಕೊರತೆಗಳ ಪರಿಹಾರ, ವಿವಿಧ ಹಂತಗಳ ನಡುವೆ ಸಮನ್ವಯ ಹಾಗೂ ಗ್ರಾಮದಿಂದ ತಾಲೂಕು ಮಟ್ಟದವರೆಗೆ ಸಂಘಟನೆಯನ್ನು ಸದೃಢಗೊಳಿಸುವ ಕುರಿತು ಸಮಗ್ರ ಚರ್ಚೆ ನಡೆಯಿತು.
ಸಂಘಟನೆಯ ಬೆಳವಣಿಗೆಗೆ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಒಗ್ಗಟ್ಟಿನಿಂದ ಕಾರ್ಯನಿರ್ವಹಿಸಬೇಕು. ಸಂಘಟನೆಯ ಆಶಯಗಳನ್ನು ಜನರಿಗೆ ತಲುಪಿಸುವ ಜತೆಗೆ, ದಲಿತರು ಹಾಗೂ ಶೋಷಿತ ಸಮುದಾಯಗಳ ಸಮಸ್ಯೆಗಳಿಗೆ ಸ್ಪಂದಿಸಿ ಹೋರಾಟ ರೂಪಿಸಬೇಕು ಎಂದು ಸಭೆಯಲ್ಲಿ ಕರೆ ನೀಡಲಾಯಿತು.
ಸಭೆಯಲ್ಲಿ ತಾಲೂಕು ಸಂಚಾಲಕ ಸಿದ್ದು ಕೆರೂರ, ಸಂಘಟನಾ ಸಂಚಾಲಕರಾದ ರೇವಣಸಿದ್ಧ ಬೀರಾಳ, ಯಶವಂತರಾಯ ಬಡಿಗೇರ, ಜೈಭೀಮ್ ನರಿಬೋಳ, ಬಸವರಾಜ ವರ್ಚನಳ್ಳಿ, ಶರಣಬಸಪ್ಪ ಲಖಣಪುರ, ಬೀರಲಿಂಗ ಕೆಲ್ಲೂರು, ಸಚಿನ್ ಮಂದೇವಾಲ, ಖಲೀಪ್ ಮಂದ್ರವಾಡ, ಮಲ್ಲಿನಾಥ ಹೆಗಡೆ, ತಿಪ್ಪಣ್ಣ ಅಣಬಿ, ಯಡ್ರಾಮಿ ಸಂಚಾಲಕ ಮಾಡಿವಾಳ ಸಾಗರ, ಮೌನೇಶ ಅಂಬರಖೇಡ, ಯಲ್ಲಪ್ಪ ನೆದಲಗಿ ಸೇರಿದಂತೆ ಅನೇಕ ಕಾರ್ಯಕರ್ತರು ಉಪಸ್ಥಿತರಿದ್ದರು.






