ಜೇವರ್ಗಿ | ದ್ವಿತೀಯ ಪಿಯುಸಿ ಸೂಕ್ಷ್ಮತೆಯಿಂದ ನಡೆಸಿ: ರವೀಂದ್ರಕುಮಾರ ಬಟಗೇರಿ

ಜೇವರ್ಗಿ: ಫೆ.28ರಂದು ಜರುಗಲಿರುವ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯನ್ನು ಅತ್ಯಂತ ಸೂಕ್ಷ್ಮತೆ ಮತ್ತು ಜವಾಬ್ದಾರಿತನದಿಂದ ನಡೆಸಬೇಕು ಎಂದು ಪರೀಕ್ಷಾ ಕೇಂದ್ರದ ಮುಖ್ಯ ಅಧಿಕ್ಷಕ ರವೀಂದ್ರಕುಮಾರ ಸಿ. ಬಟಗೇರಿ ಹೇಳಿದರು.
ಪಟ್ಟಣದ ಬಸವೇಶ್ವರ ವೃತ್ತದ ಸಮೀಪದ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಶುಕ್ರವಾರ ಆಯೋಜಿಸಲಾದ ಪರೀಕ್ಷಾ ಪೂರ್ವ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ದ್ವಿತೀಯ ಪಿಯುಸಿ ಪರೀಕ್ಷೆ ವಿದ್ಯಾರ್ಥಿಗಳ ಭವಿಷ್ಯ ನಿರ್ಧರಿಸುವ ಮಹತ್ವದ ಘಟ್ಟವಾಗಿದ್ದು, ಯಾವುದೇ ನಿರ್ಲಕ್ಷ್ಯಕ್ಕೆ ಅವಕಾಶ ನೀಡಬಾರದು ಎಂದರು.
ಪರೀಕ್ಷಾ ನಿಯಮಾವಳಿಗಳನ್ನು ಕಟ್ಟುನಿಟ್ಟಾಗಿ ಪಾಲಿಸಿ, ಪಾರದರ್ಶಕ ಹಾಗೂ ಶಾಂತಿಯುತ ವಾತಾವರಣದಲ್ಲಿ ಪರೀಕ್ಷೆ ನಡೆಯುವಂತೆ ಎಲ್ಲಾ ಸಿಬ್ಬಂದಿ ಸಮನ್ವಯದಿಂದ ಕಾರ್ಯನಿರ್ವಹಿಸಬೇಕು ಎಂದು ಸೂಚಿಸಿದರು.
ಪರೀಕ್ಷಾ ಕೇಂದ್ರದ ಓಎಸ್ ಮಲ್ಲಿಕಾರ್ಜುನ ದೊಡ್ಡಮನಿ, ಮಾರ್ಗದರ್ಶಕ ಶಂಕ್ರೆಪ್ಪ ಹೊಸದೊಡ್ಡಿ ಹಾಗೂ ಎಪಿಸಿ ಎಚ್.ಬಿ. ಪಾಟೀಲ ಅವರು ಪರೀಕ್ಷಾ ಕ್ರಮ, ಪ್ರಶ್ನೆಪತ್ರಿಕೆ ವಿತರಣೆ, ಭದ್ರತಾ ಕ್ರಮಗಳು ಹಾಗೂ ಕೊಠಡಿ ಮೇಲ್ವಿಚಾರಕರ ಕರ್ತವ್ಯಗಳ ಕುರಿತು ವಿವರವಾದ ಮಾಹಿತಿ ನೀಡಿದರು.
ಜಂಟಿ ಮುಖ್ಯ ಅಧಿಕ್ಷಕಿ ಶ್ವೇತಾ, ಹೆಚ್ಚುವರಿ ಮುಖ್ಯ ಅಧಿಕ್ಷಕಿ ಸುವರ್ಣಲತಾ ಭಂಡಾರಿ, ಕಾಲೇಜಿನ ಉಪನ್ಯಾಸಕರು ಹಾಗೂ ನಿಯೋಜಿತ ಕೊಠಡಿ ಮೇಲ್ವಿಚಾರಕರು ಸಭೆಯಲ್ಲಿ ಭಾಗವಹಿಸಿ ತಮ್ಮ ಜವಾಬ್ದಾರಿಗಳನ್ನು ಸ್ಪಷ್ಟವಾಗಿ ತಿಳಿದುಕೊಂಡರು.
ಪರೀಕ್ಷಾ ಕೇಂದ್ರದಲ್ಲಿ ಸಿಸಿಟಿವಿ ನಿಗಾವ್ಯವಸ್ಥೆ, ಪ್ರಶ್ನೆಪತ್ರಿಕೆ ಭದ್ರತೆ ಮತ್ತು ವಿದ್ಯಾರ್ಥಿಗಳಿಗೆ ಅಗತ್ಯ ಮೂಲಸೌಕರ್ಯಗಳ ಸಿದ್ಧತೆ ಪೂರ್ಣಗೊಂಡಿದ್ದು, ಪರೀಕ್ಷೆಯನ್ನು ಯಶಸ್ವಿಯಾಗಿ ನಡೆಸಲು ಎಲ್ಲಾ ರೀತಿಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದರು.







