ಜೇವರ್ಗಿ| ಸಿಜೆಐ ಮೇಲೆ ಶೂ ಎಸೆದ ವಕೀಲ ರಾಕೇಶ್ ಕಿಶೋರ್ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹಿಸಿ ಮನವಿ ಸಲ್ಲಿಕೆ

ಕಲಬುರಗಿ: ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳ ಮೇಲೆ ಶೂ ಎಸೆದ ವಕೀಲ ರಾಕೇಶ್ ಕಿಶೋರ್ ವಿರುದ್ಧ ದೇಶದ್ರೋಹದ ಪ್ರಕರಣವನ್ನು ಸರ್ಕಾರ ಸ್ವಯಂ ಪ್ರೇರಿತವಾಗಿ ದಾಖಲಿಸಿ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕೆಂದು ಆದರ್ಶ್ ಗ್ರಾಮ ಸಮಿತಿ ಯಾಳವಾರ ಹಾಗೂ ಟಿಪ್ಪು ಸುಲ್ತಾನ್ ಸಮಿತಿಯ ಪದಾಧಿಕಾರಿಗಳು ಜೇವರ್ಗಿ ತಹಸೀಲ್ದಾರ್ ಮುಖಾಂತರ ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಸಿದರು.
ಮುಖ್ಯ ನ್ಯಾಯಮೂರ್ತಿಗಳ ಮೇಲೆ ಶೂ ಎಸೆದ ಘಟನೆ ಅತ್ಯಂತ ಖಂಡನೀಯವಾದದ್ದು. ಈ ಕೃತ್ಯವು ಕೇವಲ ವ್ಯಕ್ತಿಯ ವಿರುದ್ಧವಲ್ಲದೆ, ಇಡೀ ದೇಶದ ನ್ಯಾಯಾಂಗ ವ್ಯವಸ್ಥೆಯ ಗೌರವ, ಮತ್ತು ವಿಶ್ವಾಸಕ್ಕೆ ಧಕ್ಕೆ ಉಂಟುಮಾಡುತ್ತದೆ. ಇಂತಹ ಕೃತ್ಯ ಎಸಗಿದ ವಕೀಲ ರಾಕೇಶ್ ಕಿಶೋರ್ ವಿರುದ್ಧ ಸೂಕ್ತ ಕ್ರಮ ಜರುಗಿಸಬೇಕೆಂದು ಆಗ್ರಹಿಸಿದರು.
ಭಾರತೀಯ ಸಂವಿಧಾನವು ಪ್ರತಿಯೊಬ್ಬ ನಾಗರಿಕನಿಗೂ ನ್ಯಾಯಾಂಗದ ಮೇಲಿನ ನಂಬಿಕೆ ಮತ್ತು ಗೌರವವನ್ನು ಉಳಿಸಿಕೊಳ್ಳುವಂತೆ ಬೋಧಿಸುತ್ತದೆ. ಇಂತಹ ಅಸಭ್ಯ ಕೃತ್ಯಗಳು ದೇಶದ ಕಾನೂನು ಮತ್ತು ಸಂವಿಧಾನಾತ್ಮಕ ವ್ಯವಸ್ಥೆಯ ಮೇಲೆ ಜನರ ನಂಬಿಕೆಯನ್ನು ಕುಂದಿಸುತ್ತವೆ. ಇಂಥ ಹೇಯ ಕೃತ್ಯ ಎಸಗಿದ ವಕೀಲನ ವಿರುದ್ಧ ಸ್ವಯಂ ಪ್ರೇರಿತವಾಗಿ ಪ್ರಕರಣ ದಾಖಲಿಸಿ ಬಂಧಿಸಬೇಕೆಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಇಬ್ರಾಹಿಂ ಪಟೇಲ್, ರಾಜಾ ಪಟೇಲ್, ಬಿ.ಪಾಟೀಲ್, ಶಾಂತಯ್ಯ ಗುತ್ತೇದಾರ್, ಸಿದ್ರಾಮ ಪೂಜಾರಿ, ಎ.ಯಾಳವಾರ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.







