Jewargi | ಪಡಿತರ ಚೀಟಿಗೆ ಹಣ ನೀಡಬೇಡಿ: ಮಧ್ಯವರ್ತಿಗಳ ವಿರುದ್ಧ ಆಹಾರ ಇಲಾಖೆ ಎಚ್ಚರಿಕೆ

ಸಾಂದರ್ಭಿಕ ಚಿತ್ರ
ಜೇವರ್ಗಿ: ಹೊಸ ಆದ್ಯತಾ ಪಡಿತರ ಚೀಟಿ (ಪಿಎಚ್ಹೆಚ್) ಹಾಗೂ ಜಿಎಸ್ಸಿ ಪಡೆಯಲು ಯಾವುದೇ ಆನ್ಲೈನ್ ಕೇಂದ್ರಗಳು ಅಥವಾ ಮಧ್ಯವರ್ತಿಗಳಿಗೆ ಹಣ ನೀಡಬಾರದು ಎಂದು ಆಹಾರ ಇಲಾಖೆ ಸಾರ್ವಜನಿಕರಿಗೆ ಎಚ್ಚರಿಕೆ ನೀಡಿದೆ.
ಈ ಕುರಿತು ಪ್ರಕಟಣೆ ಹೊರಡಿಸಿರುವ ಇಲಾಖೆ, ಜೇವರ್ಗಿ ಹಾಗೂ ಯಡ್ರಾಮಿ ತಾಲೂಕುಗಳ ಗ್ರಾಮೀಣ ಮತ್ತು ನಗರ ಪ್ರದೇಶಗಳಲ್ಲಿ ಕೆಲವು ಗ್ರಾಮ ಒನ್, ಕರ್ನಾಟಕ ಒನ್ ಹಾಗೂ ಇತರೆ ಆನ್ಲೈನ್ ಕೇಂದ್ರಗಳೊಂದಿಗೆ ಕೈಜೋಡಿಸಿರುವ ಮಧ್ಯವರ್ತಿಗಳು, ಹೊಸ ಪಡಿತರ ಚೀಟಿ ಮಾಡಿಸಿಕೊಡುವುದಾಗಿ ಹಾಗೂ ಪಡಿತರ ಚೀಟಿಯಲ್ಲಿ ತಿದ್ದುಪಡಿ ಮಾಡಿಕೊಡುವುದಾಗಿ ಹೇಳಿ ಸಾರ್ವಜನಿಕರಿಂದ ಹಣ ವಸೂಲಿ ಮಾಡುತ್ತಿರುವುದು ಗಮನಕ್ಕೆ ಬಂದಿದೆ ಎಂದು ತಿಳಿಸಿದೆ.
ಸಾರ್ವಜನಿಕರು ಇಂತಹ ಮಧ್ಯವರ್ತಿಗಳ ಬಗ್ಗೆ ಎಚ್ಚರಿಕೆಯಿಂದಿದ್ದು, ಯಾವುದೇ ಕಾರಣಕ್ಕೂ ಹಣ ನೀಡಬಾರದು. ಪಡಿತರ ಚೀಟಿ ಹಾಗೂ ತಿದ್ದುಪಡಿಗೆ ಸಂಬಂಧಿಸಿದಂತೆ ಅರ್ಜಿದಾರರು ನೇರವಾಗಿ ಆಹಾರ ಇಲಾಖೆಯ ಶಿರಸ್ತೇದಾರರು, ಆಹಾರ ನಿರೀಕ್ಷಕರು ಹಾಗೂ ಸಂಬಂಧಪಟ್ಟ ಅಧಿಕಾರಿಗಳನ್ನು ಸಂಪರ್ಕಿಸಿ ಮಾಹಿತಿ ಪಡೆದುಕೊಳ್ಳಬೇಕು. ಅಕ್ರಮವಾಗಿ ಹಣ ವಸೂಲಿ ಮಾಡುವವರ ವಿರುದ್ಧ ಇಲಾಖೆಗೆ ದೂರು ನೀಡಬಹುದು ಎಂದು ತಿಳಿಸಲಾಗಿದೆ.
ಕಳೆದ 6ರಿಂದ 12 ತಿಂಗಳಿನಿಂದ ಪಡಿತರ ಪಡೆಯದ ಪಡಿತರ ಚೀಟಿಗಳನ್ನು ಗುರುತಿಸಿ, ಮೃತ ವ್ಯಕ್ತಿಗಳ ಹೆಸರಿನಲ್ಲಿರುವ ಅಥವಾ ಏಕ ಸದಸ್ಯರ ಹೆಸರಿನಲ್ಲಿರುವ ಪಡಿತರ ಚೀಟಿಗಳಿಗೆ ಬೇರೆಯವರ ಹೆಸರುಗಳನ್ನು ಅಕ್ರಮವಾಗಿ ಸೇರ್ಪಡೆ ಮಾಡಿ ಹೊಸ ಪಡಿತರ ಚೀಟಿ ಮಾಡಿಸಿಕೊಡಲಾಗುತ್ತಿದೆ ಎಂಬುದು ಇಲಾಖೆಯ ಗಮನಕ್ಕೆ ಬಂದಿದೆ. ಇಂತಹ ಪಡಿತರ ಚೀಟಿಗಳನ್ನು ಪಡೆದವರು ಕೂಡಲೇ ಇಲಾಖೆಗೆ ಮರಳಿಸಬೇಕು. ಇಲ್ಲವಾದಲ್ಲಿ ಪಡಿತರ ಚೀಟಿ ಪಡೆದವರು ಹಾಗೂ ಮಾಡಿಸಿಕೊಟ್ಟವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಲಾಗಿದೆ.
ಗ್ರಾಮ ಒನ್ ಮತ್ತು ಕರ್ನಾಟಕ ಒನ್ ಕೇಂದ್ರಗಳ ಲಾಗಿನ್ಗಳನ್ನು ನಕಲು ಮಾಡಿಕೊಂಡು ಅಕ್ರಮ ನಡೆಸುತ್ತಿರುವುದು ಸಹ ಇಲಾಖೆಯ ಗಮನಕ್ಕೆ ಬಂದಿದೆ. ಇಂತಹ ಅಕ್ರಮಗಳಿಗೆ ಸಹಕರಿಸುವ ಕೇಂದ್ರಗಳ ವಿರುದ್ಧವೂ ಕ್ರಮ ಕೈಗೊಳ್ಳುವಂತೆ ಜಿಲ್ಲಾ ಅಧಿಕಾರಿಗಳಿಗೆ ದೂರು ಸಲ್ಲಿಸಲಾಗಿದೆ. ಸಂಬಂಧಪಟ್ಟ ಕೇಂದ್ರಗಳ ಐಡಿ ಹಾಗೂ ಪಾಸ್ವರ್ಡ್ಗಳನ್ನು ನಿಷ್ಕ್ರಿಯಗೊಳಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಇಲಾಖೆ ತಿಳಿಸಿದೆ.
ಆದ್ಯತಾ ಪಡಿತರ ಚೀಟಿ ಪಡೆಯಲು ಹಾಗೂ ಪಡಿತರ ಚೀಟಿಯಲ್ಲಿ ತಿದ್ದುಪಡಿ ಮಾಡಿಸಲು ಯಾವುದೇ ಶುಲ್ಕವಿಲ್ಲ. ಆದ್ದರಿಂದ ಅರ್ಜಿದಾರರು ಮಧ್ಯವರ್ತಿಗಳನ್ನು ಆಶ್ರಯಿಸದೆ ನೇರವಾಗಿ ಆಹಾರ ಇಲಾಖೆಯ ಕಚೇರಿಯನ್ನು ಸಂಪರ್ಕಿಸಿ ಅಗತ್ಯ ದಾಖಲೆಗಳನ್ನು ಸಲ್ಲಿಸಿ ಉಚಿತವಾಗಿ ಸೇವೆ ಪಡೆಯುವಂತೆ ಇಲಾಖೆ ಮನವಿ ಮಾಡಿದೆ.






