Jewargi | ಪಿಎಂ ಕಿಸಾನ್ 24ನೇ ಕಂತು ಪಡೆಯಲು ಇ-ಕೆವೈಸಿ ಕಡ್ಡಾಯ : ಚಂದ್ರಕಾಂತ ಜೀವಣಗಿ

ಜೇವರ್ಗಿ: ಪ್ರಧಾನಮಂತ್ರಿ ಕಿಸಾನ್ ಸಮ್ಮಾನ ನಿಧಿ ಯೋಜನೆಯಡಿ ಸೆಪ್ಟೆಂಬರ್‌ನಲ್ಲಿ ಬಿಡುಗಡೆಯಾಗಲಿರುವ 24ನೇ ಕಂತಿನ 2,000 ರೂ. ನೆರವು ಪಡೆಯಲು ಫಲಾನುಭವಿ ರೈತರು ಕಡ್ಡಾಯವಾಗಿ ಬಯೋಮೆಟ್ರಿಕ್ ಅಥವಾ ಫೇಸ್ ಆಧಾರಿತ ಇ-ಕೆವೈಸಿ ಪೂರ್ಣಗೊಳಿಸಬೇಕು ಎಂದು ಸಹಾಯಕ ಕೃಷಿ ನಿರ್ದೇಶಕ ಚಂದ್ರಕಾಂತ ಜೀವಣಗಿ ತಿಳಿಸಿದ್ದಾರೆ.
ಈ ಕುರಿತು ಪತ್ರಿಕಾ ಪ್ರಕಟಣೆ ಹೊರಡಿಸಿರುವ ಅವರು, ಜೇವರ್ಗಿ ಹಾಗೂ ಯಡ್ರಾಮಿ ಅವಳಿ ತಾಲೂಕುಗಳಲ್ಲಿ ಒಟ್ಟು 36,555 ರೈತರು ಇ-ಕೆವೈಸಿ ಮಾಡಿಸಿಕೊಳ್ಳದೆ ಬಾಕಿ ಉಳಿದಿದ್ದಾರೆ. ಇ-ಕೆವೈಸಿ ಪೂರ್ಣಗೊಳಿಸದ ಫಲಾನುಭವಿಗಳ ಖಾತೆಗೆ ಮುಂದಿನ ಕಂತಿನ ಹಣ ಜಮೆಯಾಗುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ನಕಲಿ ಹಾಗೂ ಮೃತ ಫಲಾನುಭವಿಗಳ ಖಾತೆಗಳಿಗೆ ಹಣ ಜಮೆಯಾಗುವುದನ್ನು ತಡೆಯುವ ಉದ್ದೇಶದಿಂದ ಕೇಂದ್ರ ಸರ್ಕಾರ ಇ-ಕೆವೈಸಿ ವ್ಯವಸ್ಥೆಯನ್ನು ಕಟ್ಟುನಿಟ್ಟುಗೊಳಿಸಿದೆ. ಈ ಹಿಂದೆ ಇದ್ದ ಆಧಾರ್ ಒಟಿಪಿ ಆಧಾರಿತ ಇ-ಕೆವೈಸಿ ವ್ಯವಸ್ಥೆಯನ್ನು ಸ್ಥಗಿತಗೊಳಿಸಲಾಗಿದ್ದು, ಇದೀಗ ಬಯೋಮೆಟ್ರಿಕ್ ಅಥವಾ ಫೇಸ್ ದೃಢೀಕರಣದ ಮೂಲಕವೇ ಇ-ಕೆವೈಸಿ ಪೂರ್ಣಗೊಳಿಸಬೇಕಾಗಿದೆ ಎಂದು ತಿಳಿಸಿದ್ದಾರೆ.
ಅವಳಿ ತಾಲೂಕುಗಳಲ್ಲಿ ಜೇವರ್ಗಿ ತಾಲೂಕಿನ 21,056 ಹಾಗೂ ಯಡ್ರಾಮಿ ತಾಲೂಕಿನ 15,499 ರೈತರು ಸೇರಿದಂತೆ ಒಟ್ಟು 36,555 ರೈತರು ಇ-ಕೆವೈಸಿ ಬಾಕಿ ಉಳಿಸಿಕೊಂಡಿದ್ದಾರೆ.
ಬಯೋಮೆಟ್ರಿಕ್ ಮೂಲಕ ಇ-ಕೆವೈಸಿಯನ್ನು ಸಾಮಾನ್ಯ ಸೇವಾ ಕೇಂದ್ರಗಳಲ್ಲಿ ಮಾಡಿಸಿಕೊಳ್ಳಬಹುದು. ಬೆರಳಚ್ಚು ನೀಡಲು ಸಾಧ್ಯವಾಗದ ರೈತರು ಪಿಎಂ ಕಿಸಾನ್ ಮೊಬೈಲ್ ಆ್ಯಪ್ ಹಾಗೂ ಆಧಾರ್ ಫೇಸ್ ಆ್ಯಪ್ ಮೂಲಕ ಫೇಸ್ ದೃಢೀಕರಣ ಆಧಾರಿತ ಇ-ಕೆವೈಸಿ ಪೂರ್ಣಗೊಳಿಸಬಹುದು ಎಂದು ತಿಳಿಸಿದ್ದಾರೆ.
ಬ್ಯಾಂಕ್ ಖಾತೆಗೆ ಆಧಾರ್ ಸಂಖ್ಯೆ ಲಿಂಕ್ ಆಗಿದ್ದರೂ ಪಿಎಂ ಕಿಸಾನ್ ಯೋಜನೆಯಡಿ ಇ-ಕೆವೈಸಿ ಮಾಡಿಸುವುದು ಕಡ್ಡಾಯವಾಗಿದೆ. ಆದ್ದರಿಂದ ಇ-ಕೆವೈಸಿ ಬಾಕಿ ಉಳಿಸಿಕೊಂಡಿರುವ ಎಲ್ಲ ಫಲಾನುಭವಿ ರೈತರು ಕೂಡಲೇ ಪ್ರಕ್ರಿಯೆ ಪೂರ್ಣಗೊಳಿಸಿಕೊಳ್ಳಬೇಕು ಎಂದು ಚಂದ್ರಕಾಂತ ಜೀವಣಗಿ ಮನವಿ ಮಾಡಿದ್ದಾರೆ.






