ಜೇವರ್ಗಿ | ಮಹಿಳೆಯರ ವಿಮೋಚನೆಗೆ ಶಿಕ್ಷಣವೇ ಅಸ್ತ್ರ: ಮೀನಾಕ್ಷಿ ಬಾಳಿ

ಜೇವರ್ಗಿ: ವಿದ್ಯಾರ್ಥಿಗಳು ಅಂಕ ಗಳಿಕೆಯ ಜೊತೆಗೆ ಜೀವನ ಮೌಲ್ಯಗಳು ಮತ್ತು ಜ್ಞಾನ ಸಂಪಾದನೆಗೆ ಹೆಚ್ಚಿನ ಆದ್ಯತೆ ನೀಡಬೇಕು. ದೇವರು ಕೈಬಿಟ್ಟರೂ ಜ್ಞಾನ ಎಂದಿಗೂ ಕೈಬಿಡುವುದಿಲ್ಲ. ಮಹಿಳೆಯರ ವಿಮೋಚನೆ ಶಿಕ್ಷಣದಿಂದ ಮಾತ್ರ ಸಾಧ್ಯ ಎಂದು ಹಿರಿಯ ಸಾಹಿತಿ ಹಾಗೂ ಹೋರಾಟಗಾರ್ತಿ ಮೀನಾಕ್ಷಿ ಬಾಳಿ ಅಭಿಪ್ರಾಯಪಟ್ಟರು.
ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ 2026–27ನೇ ಶೈಕ್ಷಣಿಕ ಸಾಲಿನ ವಿವಿಧ ಪಠ್ಯೇತರ ಚಟುವಟಿಕೆಗಳ ಉದ್ಘಾಟನೆ ಹಾಗೂ ಪ್ರಥಮ ವರ್ಷದ ವಿದ್ಯಾರ್ಥಿಗಳ ಸ್ವಾಗತ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಕಾರ್ಯಕ್ರಮದ ಅತಿಥಿಯಾಗಿದ್ದ ಕರ್ನಾಟಕ ರಾಜ್ಯ ಪದವಿ ಪೂರ್ವ ಕಾಲೇಜುಗಳ ಉಪನ್ಯಾಸಕರ ಸಂಘದ ಅಧ್ಯಕ್ಷ ನರಸಪ್ಪ ಟಿ. ರಂಗೋಲಿ ಮಾತನಾಡಿ, ಬಡತನವು ವಿದ್ಯಾರ್ಥಿಗಳ ಶಿಕ್ಷಣಕ್ಕೆ ಎಂದಿಗೂ ಅಡ್ಡಿಯಾಗಬಾರದು. ದೈಹಿಕ ಅಂಗವೈಕಲ್ಯಕ್ಕಿಂತ ಮಾನಸಿಕ ದೌರ್ಬಲ್ಯವೇ ದೊಡ್ಡ ಅಡ್ಡಿ ಎಂದು ಮಾರ್ಮಿಕವಾಗಿ ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲೆ ಪ್ರೊ. ಶಾಂತಾ ಅಷ್ಟಗಿ ಮಾತನಾಡಿ, ವಿದ್ಯಾರ್ಥಿಗಳಿಗೆ ಪದವಿ ಪಡೆಯುವುದಷ್ಟೇ ಮುಖ್ಯವಲ್ಲ; ಬದುಕಿನಲ್ಲಿ ಮೌಲ್ಯಗಳನ್ನು ಅಳವಡಿಸಿಕೊಳ್ಳುವುದೂ ಅತ್ಯಂತ ಅಗತ್ಯ. ಕಾಟಾಚಾರಕ್ಕೆ ಓದದೆ, ಭವಿಷ್ಯವನ್ನು ರೂಪಿಸಿಕೊಳ್ಳುವ ಉದ್ದೇಶದಿಂದ ನಿಷ್ಠೆಯಿಂದ ಅಧ್ಯಯನ ಮಾಡಬೇಕು ಎಂದು ಸಲಹೆ ನೀಡಿದರು.
ಈ ಸಂದರ್ಭದಲ್ಲಿ ಡಾ. ಖಾಜಾವಲಿ ಈಚನಾಳ ಅವರ ಸಂಪಾದಕತ್ವದ ಕಾಲೇಜಿನ ವಾರ್ಷಿಕ ಸ್ಮರಣ ಸಂಚಿಕೆ ‘ಭೀಮೆಯ ಸಿರಿ’ಯನ್ನು ಬಿಡುಗಡೆ ಮಾಡಲಾಯಿತು.
ಗುಲ್ಬರ್ಗಾ ವಿಶ್ವವಿದ್ಯಾಲಯದಿಂದ ಪಿಎಚ್.ಡಿ. ಪದವಿ ಪಡೆದ ಡಾ. ರೂಪಾ ಕುಲಕರ್ಣಿ, ವಿಜಯನಗರದ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯದಿಂದ ಪಿಎಚ್.ಡಿ. ಪದವಿ ಪಡೆದ ಡಾ. ಹೊನ್ನೂರಸ್ವಾಮಿ, ಕಲಬುರಗಿ ಜಿಲ್ಲಾ ನೌಕರರ ಸಂಘದ ಉಪಾಧ್ಯಕ್ಷರಾಗಿ ಆಯ್ಕೆಯಾದ ಡಾ. ಶರಣಪ್ಪ ಗುಂಡಗುರ್ತಿ ಹಾಗೂ ಕಾಲೇಜಿನ ವಾರ್ಷಿಕ ಸ್ಮರಣ ಸಂಚಿಕೆಯ ಸಂಪಾದಕ ಡಾ. ಖಾಜಾವಲಿ ಈಚನಾಳ ಅವರನ್ನು ಕಾಲೇಜಿನ ವತಿಯಿಂದ ಸತ್ಕರಿಸಿ ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ಐಕ್ಯೂಎಸಿ ಸಂಯೋಜಕ ಡಾ. ಸಂದೀಪ ತಿವಾರಿ, ಸಿಬ್ಬಂದಿ ಕಾರ್ಯದರ್ಶಿ ಡಾ. ಸಂತೋಷಕುಮಾರ, ಹಿರಿಯ ಪ್ರಾಧ್ಯಾಪಕರಾದ ಪ್ರೊ. ರಾಬಿಯಾ ಬೇಗಂ, ಕನ್ನಡ ವಿಭಾಗದ ಮುಖ್ಯಸ್ಥ ಡಾ. ನಾಗಣ್ಣ ಕಿಲಾರಿ, ಡಾ. ಅಶೋಕ ಹೋಳ್ಕರ್, ಡಾ. ಖುತೇಜಾ ನಸ್ರಿನ್, ಡಾ. ಶಿಲ್ಪಾ, ಡಾ. ಎನ್.ಜಿ. ಶ್ರೀಧರ್, ಅಪರ್ಣಾ ಕಡಬಗಾಂವ್, ಡಾ. ರವೀಂದ್ರ, ಗ್ರಂಥಪಾಲಕ ತಿಪ್ಪಣ್ಣ ವಗ್ದಾಳ, ಭೀಮಣ್ಣ ಬೆಡ್ಕಪಳ್ಳಿ, ಡಾ. ಶಿವಕುಮಾರ್ ಭರಣಿ, ಡಾ. ಉತ್ತಮ ಬಾಳು ವಾಲೆ, ಮೋಹನ್ ಬೈಲಪತ್ತಾರ್, ಡಾ. ಹೊನ್ನೂರಸ್ವಾಮಿ, ವಿಕಾಸ್ ರಾಠೋಡ್, ರೂಪಾ ಕುಲಕರ್ಣಿ, ಡಾ. ವಿ.ಟಿ. ಮಂಜುಳಾ, ಡಾ. ನಾಗನಗೌಡ ಪಾಟೀಲ ಹಾಗೂ ಪತ್ರಾಂಕಿತ ಅಧಿಕಾರಿ ಫುಲಾಬಾಯಿ ಜಲ್ದೆ ಸೇರಿದಂತೆ ಇತರರು ಉಪಸ್ಥಿತರಿದ್ದರು.
ಕುಮಾರಿ ತೇಜಸ್ವಿನಿ ಪ್ರಾರ್ಥಿಸಿದರು. ಸಾಂಸ್ಕೃತಿಕ ಸಮಿತಿ ಸಂಚಾಲಕ ಡಾ. ಶರಣಪ್ಪ ಗುಂಡಗುರ್ತಿ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಡಾ. ರವೀಂದ್ರ ಬಿರಾದಾರ ಕಾರ್ಯಕ್ರಮ ನಿರೂಪಿಸಿದರು. ರಾಷ್ಟ್ರೀಯ ಸೇವಾ ಯೋಜನೆ (ಎನ್ಎಸ್ಎಸ್) ಅಧಿಕಾರಿ ಕುಪೇಂದ್ರ ರಾಠೋಡ ವಂದಿಸಿದರು.






