Jewargi | ಹೆಸರು, ಉದ್ದು ಬೆಳೆಗಳ ಕ್ಷೇತ್ರೋತ್ಸವ ಯಶಸ್ವಿ

ಜೇವರ್ಗಿ: ರೈತರಿಗೆ ವೈಜ್ಞಾನಿಕ ಕೃಷಿ ತಂತ್ರಜ್ಞಾನಗಳ ಕುರಿತು ಅರಿವು ಮೂಡಿಸಿ, ಹೆಸರು ಮತ್ತು ಉದ್ದು ಬೆಳೆಗಳಲ್ಲಿ ಹೆಚ್ಚಿನ ಉತ್ಪಾದನೆ ಹಾಗೂ ಆದಾಯ ಪಡೆಯಲು ಉತ್ತೇಜಿಸುವ ಉದ್ದೇಶದಿಂದ ರಾಷ್ಟ್ರೀಯ ಆಹಾರ ಭದ್ರತೆ ಮತ್ತು ಪೌಷ್ಟಿಕ ಅಭಿಯಾನದಡಿ ಕೃಷಿ ವಿಜ್ಞಾನ ಕೇಂದ್ರ, ರದ್ದೇವಾಡಗಿ ವತಿಯಿಂದ ಹೆಸರು ಮತ್ತು ಉದ್ದು ಬೆಳೆಗಳ ಕ್ಷೇತ್ರೋತ್ಸವವನ್ನು ಬುಧವಾರ ಆಯೋಜಿಸಲಾಗಿತ್ತು.
ಬಾಪುನಗರ ಗ್ರಾಮದ ಪ್ರಗತಿಪರ ರೈತ ಅನೀಲಕುಮಾರ ಅವರ ಜಮೀನಿನಲ್ಲಿ ನಡೆದ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥ ಡಾ. ಪಿ. ವಾಸುದೇವ ನಾಯ್ಕ್ ಮಾತನಾಡಿ, ರೈತರು ಹೆಸರು ಮತ್ತು ಉದ್ದು ಬೆಳೆಗಳಲ್ಲಿ ವೈಜ್ಞಾನಿಕ ಕೃಷಿ ಪದ್ಧತಿಗಳನ್ನು ಅಳವಡಿಸಿಕೊಂಡು ಉತ್ಪಾದಕತೆ ಹೆಚ್ಚಿಸುವುದರ ಜೊತೆಗೆ ಉತ್ಪಾದನಾ ವೆಚ್ಚ ಕಡಿಮೆ ಮಾಡಿ ಆದಾಯ ಹೆಚ್ಚಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ರೈತರ ಸಮಸ್ಯೆಗಳಿಗೆ ವೈಜ್ಞಾನಿಕ ಪರಿಹಾರ ಒದಗಿಸುವುದರೊಂದಿಗೆ ಕ್ಷೇತ್ರಮಟ್ಟದಲ್ಲಿ ಹೊಸ ತಂತ್ರಜ್ಞಾನಗಳ ಪ್ರಾತ್ಯಕ್ಷಿಕೆ ಮೂಲಕ ಅವುಗಳನ್ನು ರೈತರಿಗೆ ತಲುಪಿಸುವ ಕಾರ್ಯವನ್ನು ಕೃಷಿ ವಿಜ್ಞಾನ ಕೇಂದ್ರ ನಿರಂತರವಾಗಿ ಮಾಡುತ್ತಿದೆ ಎಂದರು.
ಬೇಳೆ ಬೆಳೆಗಳಲ್ಲಿ ಸಾರಜನಕ ಸ್ಥಿರೀಕರಣದ ಪ್ರಯೋಜನ ಪಡೆಯಲು ರೈಜೋಬಿಯಂ ಹಾಗೂ ಇತರೆ ಸೂಕ್ಷ್ಮ ಜೈವಿಕ ಗೊಬ್ಬರಗಳ ಬಳಕೆ, ಮಣ್ಣಿನ ಪರೀಕ್ಷೆ ಆಧಾರಿತ ಪೋಷಕಾಂಶ ನಿರ್ವಹಣೆ ಹಾಗೂ ನಿರ್ಣಾಯಕ ಹಂತಗಳಲ್ಲಿ ಅಗತ್ಯ ಪೋಷಕಾಂಶಗಳ ಪೂರೈಕೆ ಕುರಿತು ರೈತರಿಗೆ ತಾಂತ್ರಿಕ ಮಾಹಿತಿ ನೀಡಲಾಯಿತು.
ಸಂಪನ್ಮೂಲ ವ್ಯಕ್ತಿ ಡಾ. ಆರ್.ಎಲ್. ಜಾಧವ್ ಅವರು ಹೆಸರು ಮತ್ತು ಉದ್ದು ಬೆಳೆಗಳ ಸುಧಾರಿತ ಬೇಸಾಯ ಪದ್ಧತಿ, ಗುಣಮಟ್ಟದ ಬೀಜ ಬಳಕೆ, ಸೂಕ್ತ ಬಿತ್ತನೆ ಹಾಗೂ ಇಳುವರಿ ಹೆಚ್ಚಿಸುವ ಕ್ರಮಗಳ ಕುರಿತು ಮಾಹಿತಿ ನೀಡಿದರು. ಹೆಸರು ಬೆಳೆಯ ಕಟಾವಿನ ನಂತರ ಉಳಿಯುವ ತ್ಯಾಜ್ಯವನ್ನು ಸುಡದೆ ಭೂಮಿಗೆ ಸೇರಿಸುವುದರಿಂದ ಮಣ್ಣಿನ ಫಲವತ್ತತೆ ಹೆಚ್ಚಿಸಿ ಹಿಂಗಾರು ಬೆಳೆಗಳಲ್ಲಿ ಉತ್ತಮ ಇಳುವರಿ ಪಡೆಯಬಹುದು ಎಂದು ತಿಳಿಸಿದರು.
ಪ್ರಗತಿಪರ ರೈತ ಅನೀಲಕುಮಾರ ತಮ್ಮ ಕೃಷಿ ಅನುಭವ ಹಂಚಿಕೊಂಡರು. ಕೃಷಿ ವಿಜ್ಞಾನ ಕೇಂದ್ರದ ಮಾರ್ಗದರ್ಶನ, ಗುಣಮಟ್ಟದ ಬೀಜ ಹಾಗೂ ಕಾಲಕಾಲಕ್ಕೆ ದೊರೆತ ಸೂಕ್ತ ಸಲಹೆಯಿಂದ ಉತ್ತಮ ಇಳುವರಿ ಪಡೆಯಲು ಸಾಧ್ಯವಾಗಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ 40ಕ್ಕೂ ಹೆಚ್ಚು ರೈತರು ಭಾಗವಹಿಸಿ ಕ್ಷೇತ್ರೋತ್ಸವದ ಪ್ರಯೋಜನ ಪಡೆದರು.






