ಜೇವರ್ಗಿ | ಭಾರೀ ಮಳೆ-ಗಾಳಿಗೆ ಮನೆ ಕುಸಿತ: ಮೂವರಿಗೆ ಗಂಭೀರ ಗಾಯ

ಜೇವರ್ಗಿ: ಸುರಿದ ಭಾರೀ ಮಳೆ ಹಾಗೂ ಬಿರುಗಾಳಿಯ ಅಬ್ಬರಕ್ಕೆ ಪಟ್ಟಣದ ಬಿಲಾಲ್ ಕಾಲೋನಿಯಲ್ಲಿ ಮನೆ ಕುಸಿದು ಬಿದ್ದ ಪರಿಣಾಮ ಮೂವರು ಗಂಭೀರವಾಗಿ ಗಾಯಗೊಂಡ ಘಟನೆ ರವಿವಾರ ನಡೆದಿದೆ.
ಗಾಯಾಳುಗಳನ್ನು ಸಲೇಹಾ ಬೇಗಂ (25), ಆಯಿಷಾ ಸಿದ್ದೀಕಿ (7) ಹಾಗೂ ಅಲಿಬಾ ಬೇಗಂ (6) ಎಂದು ಗುರುತಿಸಲಾಗಿದೆ.
ಘಟನೆ ವೇಳೆ ಮನೆಯೊಳಗಿದ್ದ ಇವರ ಮೇಲೆ ಗೋಡೆ ಹಾಗೂ ಮೇಲ್ಛಾವಣಿ ಕುಸಿದು ಬಿದ್ದ ಪರಿಣಾಮ ಗಂಭೀರ ಗಾಯಗಳಾಗಿವೆ ಎಂದು ತಿಳಿದುಬಂದಿದೆ.
ಸ್ಥಳೀಯರು ತಕ್ಷಣವೇ ರಕ್ಷಣಾ ಕಾರ್ಯಾಚರಣೆ ನಡೆಸಿ ಗಾಯಾಳುಗಳನ್ನು ಹೊರತೆಗೆದು ಆಸ್ಪತ್ರೆಗೆ ಸಾಗಿಸಿದರು. ಬಳಿಕ ಅವರನ್ನು ಹೆಚ್ಚಿನ ಚಿಕಿತ್ಸೆಗೆ ಕಲಬುರಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಭಾರೀ ಮಳೆ ಹಾಗೂ ಬಿರುಗಾಳಿಯಿಂದ ಪಟ್ಟಣದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದ್ದು, ಹಲವು ಕಡೆ ಮನೆಗಳಿಗೆ ಹಾಗೂ ವಿದ್ಯುತ್ ಸಂಪರ್ಕಕ್ಕೂ ಹಾನಿಯಾಗಿರುವ ಮಾಹಿತಿ ಲಭ್ಯವಾಗಿದೆ.
ಘಟನೆ ಹಿನ್ನೆಲೆಯಲ್ಲಿ ಸ್ಥಳೀಯರು ಹಾನಿಗೊಳಗಾದ ಕುಟುಂಬಕ್ಕೆ ತಕ್ಷಣ ಪರಿಹಾರ ನೀಡುವಂತೆ ಹಾಗೂ ಮಳೆ ಹಾನಿ ಪ್ರದೇಶಗಳಲ್ಲಿ ಅಗತ್ಯ ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳನ್ನು ಆಗ್ರಹಿಸಿದ್ದಾರೆ.




