Jewargi | ಕಲ್ಯಾಣ ಕರ್ನಾಟಕ ಉತ್ಸವ ತ್ಯಾಗ ಮತ್ತು ಬಲಿದಾನದ ಪ್ರತೀಕ: ಅಂಜುಮ ತಬಸ್ಸುಮ್
ತಾಲೂಕು ಆಡಳಿತದಿಂದ ಕಲ್ಯಾಣ ಕರ್ನಾಟಕ ಉತ್ಸವ ದಿನಾಚರಣೆ, ವಿಶ್ವಕರ್ಮ ಜಯಂತಿ

ಜೇವರ್ಗಿ: ಇಡೀ ಭಾರತದಲ್ಲಿ ವರ್ಷಕ್ಕೊಮ್ಮೆ ಸ್ವಾತಂತ್ರ್ಯ ದಿನಾಚರಣೆ ಆಚರಿಸಿದರೆ, ಕಲ್ಯಾಣ ಕರ್ನಾಟಕದಲ್ಲಿ ಎರಡು ಬಾರಿ ಸ್ವಾತಂತ್ರ್ಯದ ಸಂಭ್ರಮ ಆಚರಿಸಲಾಗುತ್ತದೆ. ಕಲ್ಯಾಣ ಕರ್ನಾಟಕ ಉತ್ಸವ ತ್ಯಾಗ, ಬಲಿದಾನ ಮತ್ತು ವಿಮೋಚನಾ ಹೋರಾಟದ ಪ್ರತೀಕವಾಗಿದೆ ಎಂದು ತಾಲೂಕು ದಂಡಾಧಿಕಾರಿ ಅಂಜುಮ ತಬಸ್ಸುಮ್ ಹೇಳಿದರು.
ಪಟ್ಟಣದ ಮಿನಿ ವಿಧಾನಸೌಧ ಆವರಣದಲ್ಲಿ ತಾಲೂಕು ಆಡಳಿತದ ವತಿಯಿಂದ ಗುರುವಾರ ಕಲ್ಯಾಣ ಕರ್ನಾಟಕ ಉತ್ಸವ ದಿನಾಚರಣೆ ಹಾಗೂ ವಿಶ್ವಕರ್ಮ ಜಯಂತಿಯನ್ನು ಸರಳವಾಗಿ ಆಚರಿಸಲಾಯಿತು.
ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, 1947ರ ಆಗಸ್ಟ್ 15ರಂದು ಭಾರತ ದೇಶಕ್ಕೆ ಸ್ವಾತಂತ್ರ್ಯ ದೊರೆತರೂ, ಹೈದರಾಬಾದ್ ಕರ್ನಾಟಕ ಭಾಗಕ್ಕೆ, ಇಂದಿನ ಕಲ್ಯಾಣ ಕರ್ನಾಟಕಕ್ಕೆ 13 ತಿಂಗಳು 2 ದಿನಗಳ ಬಳಿಕ ಸ್ವಾತಂತ್ರ್ಯ ಲಭಿಸಿತು. ಬ್ರಿಟಿಷರ ಆಡಳಿತದ ಬಳಿಕ ನಿಜಾಮರ ದಬ್ಬಾಳಿಕೆಯನ್ನೂ ಈ ಭಾಗದ ಜನರು ಅನುಭವಿಸಬೇಕಾಯಿತು ಎಂದು ಹೇಳಿದರು.
ಉಕ್ಕಿನ ಮನುಷ್ಯ ಸರ್ದಾರ್ ವಲ್ಲಭಭಾಯಿ ಪಟೇಲ್ ಹಾಗೂ ಡಾ. ಬಿ.ಆರ್. ಅಂಬೇಡ್ಕರ್ ಅವರ ದೂರದೃಷ್ಟಿ ಮತ್ತು ನಾಯಕತ್ವದಿಂದ ಕಲ್ಯಾಣ ಕರ್ನಾಟಕ ಭಾಗ ನಿಜಾಮರ ಆಳ್ವಿಕೆಯಿಂದ ವಿಮೋಚನೆಗೊಂಡಿತು. ಅನೇಕ ಸ್ವಾತಂತ್ರ್ಯ ಹೋರಾಟಗಾರರ ತ್ಯಾಗ ಮತ್ತು ಬಲಿದಾನದ ಫಲವಾಗಿ ಈ ಭಾಗಕ್ಕೆ ಸ್ವಾತಂತ್ರ್ಯ ದೊರೆತಿದೆ ಎಂದು ಅವರು ಹೇಳಿದರು.
ಇಂದು ನಾವು ಸಂಭ್ರಮದಿಂದ ಕಲ್ಯಾಣ ಕರ್ನಾಟಕ ಉತ್ಸವ ಆಚರಿಸುತ್ತಿರುವುದಕ್ಕೆ ಅನೇಕರು ತಮ್ಮ ಪ್ರಾಣ ತ್ಯಾಗ ಮಾಡಿದ್ದಾರೆ. ಅವರ ತ್ಯಾಗವನ್ನು ಎಂದಿಗೂ ಮರೆಯಬಾರದು ಎಂದು ಅಂಜುಮ ತಬಸುಮ್ ಕರೆ ನೀಡಿದರು.
ಈ ಸಂದರ್ಭದಲ್ಲಿ ಅಧಿಕಾರಿಗಳಾದ ಸತೀಶಕುಮಾರ್ ಸಾಂಗನ್, ಡಾ. ಉಮೇಶ್ ಶರ್ಮಾ, ಈರಣ್ಣ ಕವಲಗಿ, ಭೀಮರಾಯ ಹೊಸಮನಿ, ವೀರಣ್ಣ ಬಮ್ಮನಹಳ್ಳಿ, ಡಾ. ಶೋಭಾ ಸಜ್ಜನ್, ಹುಲಿಕಂಠರಾಯ ಸುಂಬಡ, ಸುಮಂಗಲಾ ಹೂಗಾರ, ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ಪ್ರತಾಪ್ ಕಟ್ಟಿ, ದಾನಪ್ಪಗೌಡ ಹಳಿಮನಿ, ಜಗದೀಶ ವಿಶ್ವಕರ್ಮ, ಕರುಣಾ ಸಾಗರ, ಚಂದ್ರಕಾಂತ ಜೀವಣಗಿ, ಶರಣಗೌಡ ಹರನೂರು, ರವಿ ಕುಳಗೇರಿ, ಶ್ರೀಹರಿ ಕರಕಳ್ಳಿ, ಸಿದ್ದು ಕೇರೂರು, ಮಹೇಶ್ ಕೋಕಿಲೆ, ಶ್ರೀಮಂತ ಕಿಲೇದಾರ, ಭೀಮರಾಯ ಖಾದ್ಯಾಪುರ, ದೇವೇಂದ್ರ ಬಡಿಗೇರ, ವಿಶ್ವ ಆಳೂರು, ಸಂತೋಷ ಸಂಗಮ, ಗೌಡಪ್ಪಗೌಡ, ದಶರಥ, ಶರಣು ನಾಟೇಕರ್, ರಾಯಪ್ಪ, ಶ್ರೀನಿವಾಸ ಕುಲಕರ್ಣಿ ಸೇರಿದಂತೆ ಅನೇಕರು ಇದ್ದರು.






