Jewargi | ಸಾಹಿತ್ಯವು ವರ್ತಮಾನದ ತಲ್ಲಣಗಳಿಗೆ ಸ್ಪಂದಿಸಬೇಕು: ಡಾ.ಖಾಜಾವಲಿ ಈಚನಾಳ
ಜೇವರ್ಗಿ ತಾಲೂಕು ಎಂಟನೇ ಸಾಹಿತ್ಯ ಸಮ್ಮೇಳನ

ಜೇವರ್ಗಿ: ಸಾಹಿತ್ಯ ಕೇವಲ ಸಮಾಜದ ಪ್ರತಿಬಿಂಬವಷ್ಟೇ ಅಲ್ಲ, ಸಮಾಜವನ್ನು ಬದಲಾಯಿಸುವ ಪ್ರೇರಕ ಶಕ್ತಿಯೂ ಆಗಿದೆ. ಸಾಹಿತ್ಯವು ವರ್ತಮಾನದ ತಲ್ಲಣಗಳಿಗೆ ಸ್ಪಂದಿಸಬೇಕು. ಶೋಷಿತರು, ದಮನಿತರು, ಮಹಿಳೆಯರು, ರೈತರು, ಕಾರ್ಮಿಕರು ಹಾಗೂ ಅಂಚಿನ ಸಮುದಾಯಗಳ ನೋವುಗಳಿಗೆ ಲೇಖಕರು ಧ್ವನಿಯಾಗಬೇಕು ಎಂದು ಸಾಹಿತಿ ಹಾಗೂ ಪ್ರಾಧ್ಯಾಪಕ ಡಾ. ಖಾಜಾವಲಿ ಈಚನಾಳ ಪ್ರತಿಪಾದಿಸಿದರು.
ಪಟ್ಟಣದಲ್ಲಿ ನಡೆದ ಜೇವರ್ಗಿ ತಾಲೂಕು ಎಂಟನೇ ಸಾಹಿತ್ಯ ಸಮ್ಮೇಳನದ ಮೊದಲ ಗೋಷ್ಠಿಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಮಾನವೀಯ ಮೌಲ್ಯಗಳು, ಸಾಮಾಜಿಕ ನ್ಯಾಯ, ಸಮಾನತೆ, ಸಹಬಾಳ್ವೆ ಹಾಗೂ ವೈಚಾರಿಕ ಪ್ರಜ್ಞೆಯನ್ನು ಸಾಹಿತಿಗಳು ತಮ್ಮ ಸಾಹಿತ್ಯದ ಮೂಲಕ ಸಮಾಜಕ್ಕೆ ಕಟ್ಟಿಕೊಡಬೇಕು. ಕನ್ನಡಿಗರ ದೀರ್ಘ ಹೋರಾಟದ ಫಲವಾಗಿ ಕರ್ನಾಟಕ ರಾಜ್ಯ ಉದಯವಾಯಿತು. ಏಕೀಕರಣದ ಉದ್ದೇಶ ಕೇವಲ ಕನ್ನಡ ಮಾತನಾಡುವ ಪ್ರದೇಶಗಳನ್ನು ಒಂದುಗೂಡಿಸುವುದಷ್ಟೇ ಆಗಿರಲಿಲ್ಲ. ಕನ್ನಡಿಗರಿಗೆ ಸಮಾನ ಅವಕಾಶ ಕಲ್ಪಿಸುವುದು, ಭಾಷಿಕ ಮತ್ತು ಸಾಂಸ್ಕೃತಿಕ ಅಸ್ಮಿತೆಯನ್ನು ಉಳಿಸುವುದು, ಪ್ರಾದೇಶಿಕ ಅಸಮಾನತೆ ನಿವಾರಿಸುವುದು ಹಾಗೂ ರಾಜ್ಯದ ಸಮಗ್ರ ಅಭಿವೃದ್ಧಿ ಸಾಧಿಸುವುದು ಅದರ ಪ್ರಮುಖ ಆಶಯಗಳಾಗಿದ್ದವು ಎಂದು ತಿಳಿಸಿದರು.
ಆದರೆ, ಇಂದಿಗೂ ಕಲ್ಯಾಣ ಕರ್ನಾಟಕ ಪ್ರದೇಶವು ಶಿಕ್ಷಣ, ಆರೋಗ್ಯ, ಉದ್ಯೋಗ, ಕೃಷಿ, ನೀರಾವರಿ ಹಾಗೂ ಮೂಲಸೌಕರ್ಯ ಕ್ಷೇತ್ರಗಳಲ್ಲಿ ಹಿಂದುಳಿದಿದೆ. ಈ ಅಸಮಾನತೆಗಳನ್ನು ನಿವಾರಿಸುವ ಉದ್ದೇಶದಿಂದ ಸಂವಿಧಾನದ 371(ಜೆ) ವಿಧಿಯನ್ನು ಜಾರಿಗೆ ತಂದಿದ್ದರೂ, ಅದು ಇನ್ನೂ ಪರಿಣಾಮಕಾರಿಯಾಗಿ ಅನುಷ್ಠಾನಗೊಂಡಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಗೋಷ್ಠಿಯಲ್ಲಿ ಡಾ. ಕಾವ್ಯಶ್ರೀ ಮಹಾಗಾಂವಕರ್ ಅವರು ಜೇವರ್ಗಿ ತಾಲೂಕಿನ ಸಾಹಿತ್ಯದ ಕುರಿತು, ವಿಜಯಕುಮಾರ್ ರೋಣದ ಅವರು ಕರ್ನಾಟಕ ಏಕೀಕರಣದ ಕುರಿತು ಹಾಗೂ ಡಾ. ಶ್ರೀನಿವಾಸ ವಸಂತ ಕುಷ್ಟಗಿ ಅವರು ಸಮ್ಮೇಳನದ ಸರ್ವಾಧ್ಯಕ್ಷ ಡಾ. ಗೋವಿಂದರಾಜ ಅಲ್ದಾಳ ಅವರ ‘ಬದುಕು-ಬರಹ’ ಕುರಿತು ಉಪನ್ಯಾಸ ನೀಡಿದರು.
ಮುಖ್ಯ ಅತಿಥಿಗಳಾಗಿ ಶಿವನಗೌಡ ಪಾಟೀಲ ಹಂಗರಗಿ, ಷಣ್ಮುಖಗೌಡ ಮಾಲಿ ಪಾಟೀಲ, ಚಂದ್ರಶೇಖರ ಪಾಟೀಲ ಹರವಾಳ, ರವೀಂದ್ರ ಕೋಳಕೂರ, ಭಗವಂತರಾಯ ಬೆಣ್ಣೂರ, ಜಗದೀಶ ವಿಶ್ವಕರ್ಮ, ಅಮೃತ ದೊಡ್ಡಮನಿ, ಮಲ್ಲಶೆಟ್ಟೆಪ್ಪ ಹಿರೇಗೌಡ್ರು ಹಾಗೂ ಈಶ್ವರ ಹಿಪ್ಪರಗಿ ಉಪಸ್ಥಿತರಿದ್ದರು.
ಕನ್ನಡ ಸಾಹಿತ್ಯ ಪರಿಷತ್ತಿನ ತಾಲೂಕು ಅಧ್ಯಕ್ಷ ಎಸ್.ಕೆ. ಬಿರಾದಾರ್, ಸಮ್ಮೇಳನದ ಸರ್ವಾಧ್ಯಕ್ಷ ಡಾ. ಗೋವಿಂದರಾಜ ಅಲ್ದಾಳ ಸೇರಿದಂತೆ ಹಲವರು ಭಾಗವಹಿಸಿದ್ದರು.
ಎ.ಸಿ. ತಾರಿವಾಳ ಮತ್ತು ಸುರೇಶ ಹಿರೇಮಠ ನಿರೂಪಿಸಿದರು. ರಾಜು ಮುದ್ದಡಗಿ ಕಾರ್ಯಕ್ರಮ ನಿರ್ವಹಿಸಿದರು. ಮಹೇಶ ಚಿಂತನಪಲ್ಲಿ ವಂದಿಸಿದರು.






