Jewargi | ಮೂಲಸೌಲಭ್ಯ, ಸರ್ಕಾರಿ ಯೋಜನೆಗಳ ಅನುಷ್ಠಾನಕ್ಕೆ ಆಗ್ರಹಿಸಿ ಯಾಳವಾರದಲ್ಲಿ ಧರಣಿ

ಜೇವರ್ಗಿ : ಗ್ರಾಮದ ಮೂಲಸೌಲಭ್ಯಗಳ ಅಭಿವೃದ್ಧಿ ಹಾಗೂ ಸರ್ಕಾರಿ ಯೋಜನೆಗಳ ಸಮರ್ಪಕ ಅನುಷ್ಠಾನಕ್ಕೆ ಆಗ್ರಹಿಸಿ ಆದರ್ಶ ಗ್ರಾಮ ಸಮಿತಿ ಯಾಳವಾರ ವತಿಯಿಂದ ಬುಧವಾರ ಯಾಳವಾರ ಗ್ರಾಮ ಪಂಚಾಯಿತಿ ಕಚೇರಿ ಎದುರು ಧರಣಿ ಸತ್ಯಾಗ್ರಹ ನಡೆಸಲಾಯಿತು.
ಸಮಿತಿ ಅಧ್ಯಕ್ಷ ಇಬ್ರಾಹಿಂ ಪಟೇಲ್ ನೇತೃತ್ವದಲ್ಲಿ ಬೆಳಿಗ್ಗೆ 11.30ಕ್ಕೆ ಆರಂಭವಾದ ಪ್ರತಿಭಟನೆಯಲ್ಲಿ ಗ್ರಾಮಸ್ಥರು ವಿವಿಧ ಬೇಡಿಕೆಗಳನ್ನು ಮುಂದಿಟ್ಟು ಅಧಿಕಾರಿಗಳ ಗಮನ ಸೆಳೆದರು.
ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ಗ್ರಾಮಸ್ಥರಿಗೆ 100 ದಿನಗಳ ಉದ್ಯೋಗ ಒದಗಿಸುವ ಕೆಲಸಗಳಿಗೆ ತಕ್ಷಣ ಚಾಲನೆ ನೀಡಬೇಕು. ಪ್ರಧಾನಮಂತ್ರಿ ಆವಾಸ್ ಯೋಜನೆಯಡಿ ಈಗಾಗಲೇ ಮಂಜೂರಾಗಿರುವ ಮನೆಗಳ ಬಾಕಿ ಅನುದಾನವನ್ನು ಫಲಾನುಭವಿಗಳಿಗೆ ಕೂಡಲೇ ಬಿಡುಗಡೆ ಮಾಡಬೇಕು. ಗ್ರಾಮದ ವಿವಿಧ ಮೂಲಭೂತ ಸಮಸ್ಯೆಗಳನ್ನು ಪರಿಹರಿಸಿ ಅಗತ್ಯ ಸೌಲಭ್ಯಗಳನ್ನು ಕಲ್ಪಿಸಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.
ಗ್ರಾಮದ ಅಭಿವೃದ್ಧಿ ಹಾಗೂ ಬಡ ಕುಟುಂಬಗಳ ಸಮಸ್ಯೆಗಳಿಗೆ ಸಂಬಂಧಿಸಿದ ಬೇಡಿಕೆಗಳನ್ನು ಅಧಿಕಾರಿಗಳು ಗಂಭೀರವಾಗಿ ಪರಿಗಣಿಸಿ ಶೀಘ್ರ ಈಡೇರಿಸಬೇಕು. ಇಲ್ಲದಿದ್ದರೆ ಹೋರಾಟವನ್ನು ಮುಂದುವರಿಸಲಾಗುವುದು ಎಂದು ಸಮಿತಿ ಎಚ್ಚರಿಕೆ ನೀಡಿತು.
ಪ್ರತಿಭಟನೆಯಲ್ಲಿ ಮಹೇಶ್ ರಾಠೋಡ್, ರಾಜಾ ಪಟೇಲ್, ಟಿಪ್ಪು ಸಿಗರ್ಥಳ್ಳಿ, ಮುಹಮ್ಮದ್ ಸಾಬ್ ಚೌಧರಿ, ದಾವೂದ್ ಹರನೂರು, ಸದ್ದಾಂ ಪಟೇಲ್, ಶಾಂತ್ಯ ಗುತ್ತೇದಾರ್, ದೇವೇಂದ್ರ ದಾವರಿ, ದೇವಕಿ ಯಾಳವಾರ, ಅಖಿಲ್ ಪಾಷಾ, ಶಂಕರ್ ಕಟ್ಟಿ ಸಂಗಾವಿ, ಗುರುನಾಥ್ ಸಾಹು ಸೇರಿದಂತೆ ನೂರಾರು ಗ್ರಾಮಸ್ಥರು, ರೈತರು ಹಾಗೂ ಕಾರ್ಮಿಕರು ಪಾಲ್ಗೊಂಡಿದ್ದರು.






