ಜೇವರ್ಗಿ | ನದಿ ಪ್ರವಾಹ ಭೀತಿ ಪ್ರದೇಶದ ಜನರ ಸಮಸ್ಯೆಗಳಿಗೆ ಸ್ಪಂದಿಸಿ : ಶಾಸಕ ಡಾ.ಅಜಯ್ ಸಿಂಗ್

ಕಲಬುರಗಿ: ಅಪಾರವಾದ ಮಳೆ ಹಾಗೂ ಮಹಾರಾಷ್ಟ್ರದಿಂದ ನೀರು ಹರಿದು ಬರುತ್ತಿರುವುದರಿಂದ ತಾಲೂಕಿನಲ್ಲಿ ಪ್ರವಾಹ ಹೆಚ್ಚಾಗಿದ್ದು, ಈ ಪ್ರವಾಹದಿಂದ ಜನರಿಗೆ ಅನೇಕ ಸಮಸ್ಯೆಗಳಾಗಿವೆ. ತಾಲೂಕು ಅಧಿಕಾರಿಗಳು ಜನರ ಸಮಸ್ಯೆಗಳನ್ನು ಆಲಿಸಿ ಸೂಕ್ತ ಪರಿಹಾರ ನೀಡಬೇಕೆಂದು ಕೆಕೆಆರ್‌ಡಿಬಿ ಅಧ್ಯಕ್ಷ ಹಾಗೂ ಶಾಸಕ ಡಾ.ಅಜಯ್ ಸಿಂಗ್ ಅಧಿಕಾರಿಗಳಿಗೆ ಸೂಚಿಸಿದರು.
ಜೇವರ್ಗಿ ತಾಲೂಕಿನ ವಿವಿಧ ಗ್ರಾಮಗಳಿಗೆ ಅಧಿಕಾರಿಗಳೊಂದಿಗೆ ಶಾಸಕ ಡಾ.ಅಜಯ್ ಸಿಂಗ್ ಶನಿವಾರ ಭೇಟಿ ನೀಡಿ ಅಧಿಕಾರಿಗಳಿಗೆ ಜನರ ಸಮಸ್ಯೆಗಳಿಗೆ ಸ್ಪಂದಿಸಲು ಸೂಚಿಸಿದರು.
ನೆರೆಯ ರಾಜ್ಯ ಮಹಾರಾಷ್ಟ್ರದಿಂದ ನೀರು ಭೀಮಾ ನದಿಗೆ ಹರಿದು ಬರುತ್ತಿದ್ದು, ನದಿ ದಂಡೆಯ ಅನೇಕ ಗ್ರಾಮಗಳು ಜಲಾವೃತಗೊಂಡಿವೆ. ಮಳೆಯಿಂದ ಹೊಲಗಳಲ್ಲಿ ನೀರು ನುಗ್ಗಿ ಬೆಳೆ ಹಾನಿಯಾಗಿತ್ತು. ಅದರ ಜೊತೆಗೆ ಪ್ರವಾಹದಿಂದ ಮತ್ತಷ್ಟು ಹೊಲಗಳಿಗೆ ನೀರು ನುಗ್ಗಿ ಹಾನಿಯಾಗಿದೆ. ಕೆಲವು ಹಳ್ಳಿಗಳು ಜಲಾವೃತವಾಗಿವೆ. ಜನರನ್ನು ಸೂಕ್ತ ಪ್ರದೇಶದಲ್ಲಿ ಗಂಜಿ ಕೇಂದ್ರ ತೆರೆಯುವುದ ಮುಖಾಂತರ ಆಶ್ರಯ ನೀಡಬೇಕು ಎಂದರು.
ಮಳೆ ಮತ್ತು ಪ್ರವಾಹದಿಂದ ಹಾನಿಗೊಳಗಾದ ನಾಗರಿಕರಿಗೆ ಸೂಕ್ತ ವ್ಯವಸ್ಥೆ ಕಲ್ಪಿಸಲು ಮತ್ತು ಹಾನಿಗೊಳಗಾದ ಬೆಳೆಗಳ ಬಗ್ಗೆ ಮಾಹಿತಿ ನೀಡಲು ಹಾಗು ಪರಿಹಾರದ ಬಗ್ಗೆ ಕ್ರಮ ವಹಿಸಲು ಅಧಿಕಾರಿಗಳು ಗಮನಹರಿಸಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ತಾಲೂಕು ದಂಡಾಧಿಕಾರಿ ಮಲ್ಲಣ್ಣ ಯಲಗೋಡ, ರವಿಚಂದ್ರನ್ ರೆಡ್ಡಿ, ಮಾಜಿ ಜಿಲ್ಲಾ ಪಂಚಾಯತ್ ಸದಸ್ಯರಾದ ಚಂದ್ರಶೇಖರ್ ಹರನಾಳ, ಶಾಂತಪ್ಪ ಕೂಡಲಗಿ, ಮುಖಂಡರಾದ ರಾಜಶೇಖರ್ ಸಾವು ಸಿರಿ, ಪಿ ಎಲ್ ಡಿ ಬ್ಯಾಂಕಿನ ಅಧ್ಯಕ್ಷ ಪ್ರತಾಪ್ ಕಟ್ಟಿ, ಕಾಶಿರಾಯ ಗೌಡ ಯಲಗೋಡ, ವಿಜಯ್ ಕುಮಾರ್ ಹಿರೇಮಠ್, ರುಕುಂ ಪಟೇಲ್ ಇಜೇರಿ, ಶೌಕತ್ ಅಲಿ ಆಲೂರ್, ವಿಜಯಕುಮಾರ ಹಿರೇಮಠ, ಕುಮಾರ ಮೈಲಾರಿ ಬಣಮಿ, ಸೇರಿದಂತೆ ಅನೇಕರು ಉಪಸ್ಥಿತರಿದ್ದರು.







