Jewargi | ಜೈನಾಪುರ ತಾಂಡಾ ದೇವಸ್ಥಾನದಲ್ಲಿ ಸಂತ ಸೇವಾಲಾಲ್ ಬೆಳ್ಳಿ ಮೂರ್ತಿ ಕಳವು

ಜೇವರ್ಗಿ: ತಾಲೂಕಿನ ಜೈನಾಪುರ ತಾಂಡಾದ ಜಗದಂಬಾ ಹಾಗೂ ಸಂತ ಸೇವಾಲಾಲ್ ಮಹಾರಾಜ ದೇವಾಲಯದಲ್ಲಿ ಸೋಮವಾರ ಮುಂಜಾನೆ ಕಳ್ಳತನ ನಡೆದಿದ್ದು, ಸುಮಾರು 1.50 ಲಕ್ಷ ರೂ. ಮೌಲ್ಯದ ಸಂತ ಸೇವಾಲಾಲ್ ಮಹಾರಾಜರ ಬೆಳ್ಳಿ ಮೂರ್ತಿಯನ್ನು ದುಷ್ಕರ್ಮಿಗಳು ಕದ್ದೊಯ್ದಿದ್ದಾರೆ.
ಕಳ್ಳರು ದೇವಾಲಯದ ಮುಖ್ಯ ದ್ವಾರವನ್ನು ಮುರಿದು ಒಳನುಗ್ಗಿ, ಗರ್ಭಗುಡಿಯಲ್ಲಿದ್ದ ಸುಮಾರು 750 ಗ್ರಾಂ ತೂಕದ ಬೆಳ್ಳಿ ಮೂರ್ತಿಯನ್ನು ಕಳವು ಮಾಡಿ ಪರಾರಿಯಾಗಿದ್ದಾರೆ. ಶ್ರಾವಣ ಮಾಸದ ಸಂದರ್ಭದಲ್ಲಿ ದೇವಾಲಯದಲ್ಲಿ ನಡೆದ ಕಳ್ಳತನ ಭಕ್ತರು ಹಾಗೂ ತಾಂಡಾ ನಿವಾಸಿಗಳ ಆಕ್ರೋಶಕ್ಕೆ ಕಾರಣವಾಗಿದೆ.
ಬೆಳಿಗ್ಗೆ ಸುಮಾರು 5 ಗಂಟೆಗೆ ಎಂದಿನಂತೆ ಪೂಜೆ ಸಲ್ಲಿಸಲು ದೇವಾಲಯಕ್ಕೆ ಬಂದ ಅರ್ಚಕರು ಮುಖ್ಯ ದ್ವಾರ ಮುರಿದಿರುವುದನ್ನು ಗಮನಿಸಿದ್ದಾರೆ. ದೇವಾಲಯದೊಳಗೆ ಪರಿಶೀಲಿಸಿದಾಗ ಗರ್ಭಗುಡಿಯಲ್ಲಿದ್ದ ಬೆಳ್ಳಿ ಮೂರ್ತಿ ಕಾಣೆಯಾಗಿರುವುದು ಬೆಳಕಿಗೆ ಬಂದಿದ್ದು, ತಕ್ಷಣ ಗ್ರಾಮಸ್ಥರಿಗೆ ಮಾಹಿತಿ ನೀಡಿದ್ದಾರೆ.
ವಿಷಯ ತಿಳಿಯುತ್ತಿದ್ದಂತೆ ಗ್ರಾಮಸ್ಥರು ಮತ್ತು ಭಕ್ತರು ದೇವಾಲಯದ ಸುತ್ತಮುತ್ತ ಪರಿಶೀಲನೆ ನಡೆಸಿದರು. ಬಳಿಕ ಜೇವರ್ಗಿ ಪೊಲೀಸ್ ಠಾಣೆಗೆ ಮಾಹಿತಿ ನೀಡಲಾಗಿದ್ದು, ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಕಳ್ಳತನ ಪ್ರಕರಣ ಸಂಬಂಧ ತನಿಖೆ ಆರಂಭಿಸಿರುವ ಪೊಲೀಸರು ಆರೋಪಿಗಳ ಪತ್ತೆಗೆ ಕ್ರಮ ಕೈಗೊಂಡಿದ್ದಾರೆ.






