Jewargi | ವಿದ್ಯಾರ್ಥಿಗಳು ದೂರದೃಷ್ಟಿ ಹೊಂದಬೇಕು : ಬಸವರಾಜ ಪಾಟೀಲ ನರಿಬೋಳ

ಜೇವರ್ಗಿ : ವಿದ್ಯಾರ್ಥಿಗಳು ದೂರದೃಷ್ಟಿ ಮತ್ತು ದೀರ್ಘಕಾಲೀನ ಗುರಿಯನ್ನು ಹೊಂದಿರಬೇಕು. ಶೈಕ್ಷಣಿಕ ಸಾಧನೆಯ ಜೊತೆಗೆ ಶಿಸ್ತು, ನೈತಿಕ ಮೌಲ್ಯಗಳು ಹಾಗೂ ಸಾಮಾಜಿಕ ಜವಾಬ್ದಾರಿಗಳನ್ನು ರೂಢಿಸಿಕೊಳ್ಳುವುದು ಅಗತ್ಯ ಎಂದು ಡಿಸಿಸಿ ಬ್ಯಾಂಕ್ ನಿರ್ದೇಶಕ ಬಸವರಾಜ ಪಾಟೀಲ ನರಿಬೋಳ ಹೇಳಿದರು.
ಪಟ್ಟಣದ ಮಿನಿ ವಿಧಾನಸೌಧ ಕಚೇರಿ ಎದುರಿನ ಮಹಾಲಕ್ಷ್ಮಿ ಪದವಿ ಮಹಾವಿದ್ಯಾಲಯದಲ್ಲಿ ಮಂಗಳವಾರ ಆಯೋಜಿಸಿದ್ದ ಸಾಧಕರ ಸನ್ಮಾನ ಹಾಗೂ ವಾರ್ಷಿಕೋತ್ಸವ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ವಿದ್ಯಾರ್ಥಿಗಳು ಕೇವಲ ಪುಸ್ತಕಗಳು ಮತ್ತು ಇಂಟರ್‌ನೆಟ್‌ನಿಂದ ಮಾತ್ರವಲ್ಲದೆ ಸಮಾಜ ಹಾಗೂ ಜೀವನ ಅನುಭವಗಳಿಂದಲೂ ಜ್ಞಾನ ಸಂಪಾದಿಸಬೇಕು. ಶಿಕ್ಷಣದ ಜೊತೆಗೆ ವ್ಯಕ್ತಿತ್ವ ವಿಕಾಸಕ್ಕೂ ಆದ್ಯತೆ ನೀಡಬೇಕು ಎಂದು ಸಲಹೆ ನೀಡಿದರು.
ಸಮಾರಂಭದಲ್ಲಿ ಶಖಾಪೂರ ತಪೋವನಮಠದ ಸಿದ್ದರಾಮ ಶಿವಾಚಾರ್ಯರು, ಪಟ್ಟಣ ಪಂಚಾಯಿತಿ ಮಾಜಿ ಅಧ್ಯಕ್ಷ ಷಣ್ಮುಖಪ್ಪ ಸಾಹು ಗೋಗಿ, ಸಾರಿಗೆ ಇಲಾಖೆಯ ಈಶ್ವರಪ್ಪ ಹೊಸಮನಿ, ಗ್ರಂಥಪಾಲಕ ವಿನೋದಕುಮಾರ, ಹಣಮಂತ ಪೂಜಾರಿ, ಬಸವರಾಜ ಭೋರಗಿ, ಕಾಲೇಜಿನ ಅಶೋಕಕುಮಾರ ಕಾಬಾ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಗಣ್ಯರನ್ನು ಸನ್ಮಾನಿಸಲಾಯಿತು.
ರಾಜ್ಯಮಟ್ಟದ “ಮಾಧ್ಯಮ ರತ್ನ” ಪ್ರಶಸ್ತಿ ಪುರಸ್ಕೃತ ಕರ್ನಾಟಕ ಜರ್ನಲಿಸ್ಟ್ ಯೂನಿಯನ್ ತಾಲೂಕು ಅಧ್ಯಕ್ಷ ಮರೆಪ್ಪ ಬೇಗಾರ ಅವರಿಗೆ ವಿಶೇಷ ಗೌರವ ಪ್ರದಾನ ಮಾಡಲಾಯಿತು.
ಸಂಸ್ಥೆಯ ಅಧ್ಯಕ್ಷೆ ಮಂಜುಳಾ ಬಡಿಗೇರ ಅಧ್ಯಕ್ಷತೆ ವಹಿಸಿ, ಶಿಕ್ಷಣ ಕ್ಷೇತ್ರದಲ್ಲಿ ಪರಿಶ್ರಮ ಮತ್ತು ಶಿಸ್ತಿನ ಫಲವಾಗಿ ಮಹಾಲಕ್ಷ್ಮಿ ಕಾಲೇಜು ಯಶಸ್ಸಿನ ಹಾದಿಯಲ್ಲಿ ಮುನ್ನಡೆಯುತ್ತಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಈಶ್ವರ ಹಿಪ್ಪರಗಿ, ಸಿದ್ದಲಿಂಗಪ್ಪ ಬಡಿಗೇರ, ಶಿವಶರಣಪ್ಪ ಹಳಿಮನಿ, ಶಂಕರಲಿಂಗ ಪೂಜಾರಿ, ಚಂದ್ರಶೇಖರ ಪಾಟೀಲ, ಸಂಗಮೇಶ ಸಂಕಾಲಿ, ಶ್ರೀಶೈಲ ಖಣದಾಳ, ಶೃತಿ ವಣಿಕ್ಯಾಳ, ಗೌರಮ್ಮ ಕಟ್ಟಿಸಂಗಾವಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಉಪನ್ಯಾಸಕ ಮಲ್ಲಿಕಾರ್ಜುನ ನೇದಲಗಿ ಸ್ವಾಗತಿಸಿದರು. ಸಾವಿತ್ರಿ ಮನಗೂಳಿ ಕಾರ್ಯಕ್ರಮ ನಿರೂಪಿಸಿದರು. ಸುರೇಶ ಹಿರೇಮಠ ವಂದಿಸಿದರು.






