Jewargi | ಭೀಕರ ರಸ್ತೆ ಅಪಘಾತ : ವಿದ್ಯಾರ್ಥಿ ಸ್ಥಳದಲ್ಲೇ ಮೃತ್ಯು

ಸಾಂದರ್ಭಿಕ ಚಿತ್ರ
ಜೇವರ್ಗಿ: ದ್ವಿತೀಯ ಪಿಯುಸಿ ಪರೀಕ್ಷೆ ಬರೆದು ಮನೆಗೆ ಮರಳುತ್ತಿದ್ದ ವಿದ್ಯಾರ್ಥಿಯೊಬ್ಬ ರಸ್ತೆ ಅಪಘಾತದಲ್ಲಿ ಸ್ಥಳದಲ್ಲೇ ಮೃತಪಟ್ಟ ಘಟನೆ ಜೇವರ್ಗಿ–ಚಿಗರಹಳ್ಳಿ ಮುಖ್ಯರಸ್ತೆಯ ಜಗದಂಬ ಪೆಟ್ರೋಲ್ ಪಂಪ್ ಸಮೀಪ ನಡೆದಿದೆ.
ಮೃತ ವಿದ್ಯಾರ್ಥಿಯನ್ನು ಆದರ್ಶ ತಂದೆ ಮಡಿವಾಳಪ್ಪ ಗುರುಶೆಟ್ಟಿ (18) ಎಂದು ಗುರುತಿಸಲಾಗಿದೆ.
ಮೂಲತಃ ಯಡ್ರಾಮಿ ಗ್ರಾಮದ ನಿವಾಸಿಯಾಗಿದ್ದ ಆದರ್ಶ, ಜೇವರ್ಗಿಯಲ್ಲಿ ದ್ವಿತೀಯ ಪಿಯುಸಿ ಪರೀಕ್ಷೆ ಬರೆದು ಸ್ನೇಹಿತರೊಂದಿಗೆ ಊರಿಗೆ ತೆರಳುತ್ತಿದ್ದನು. ಮಾರ್ಗಮಧ್ಯೆ ಶೌಚಕ್ಕಾಗಿ ವಾಹನ ನಿಲ್ಲಿಸಿದ್ದ ವೇಳೆ, ಆದರ್ಶನ ಹಾಲ್ ಟಿಕೆಟ್ ಗಾಳಿಗೆ ಹಾರಿ ರಸ್ತೆ ಮಧ್ಯೆ ಬಿದ್ದಿದೆ. ಅದನ್ನು ತೆಗೆದುಕೊಳ್ಳಲು ರಸ್ತೆ ಕಡೆಗೆ ಓಡಿದಾಗ, ಶಹಪುರ ಕಡೆಯಿಂದ ವೇಗವಾಗಿ ಬಂದ ಶಿಫ್ಟ್ ಡಿಸೈರ್ ಕಾರು ಢಿಕ್ಕಿ ಹೊಡೆದಿದೆ ಎನ್ನಲಾಗಿದೆ. ಢಿಕ್ಕಿಯ ತೀವ್ರತೆಗೆ ಆದರ್ಶ ಸ್ಥಳದಲ್ಲೇ ಮೃತಪಟ್ಟಿದ್ದಾನೆ ಎಂದು ತಿಳಿದು ಬಂದಿದೆ.
ಈ ಕುರಿತು ಜೇವರ್ಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.




