ಜೇವರ್ಗಿ | ಸಂವಿಧಾನವೇ ಸಮಾನ ಬದುಕಿನ ಹಕ್ಕು ನೀಡಿದೆ : ಡಾ.ಶಾಂತಾ ಅಸ್ಟಿಗೆ

ಜೇವರ್ಗಿ : ಸಮಾಜದಲ್ಲಿ ಪ್ರತಿಯೊಬ್ಬ ಮನುಷ್ಯನು ಸಮಾನವಾಗಿ ಬದುಕುವ ಹಕ್ಕನ್ನು ಯಾವುದೇ ದೇವತೆಗಳು ನೀಡಿಲ್ಲ. ಆ ಹಕ್ಕನ್ನು ನೀಡಿರುವುದು ಡಾ.ಬಿ.ಆರ್.ಅಂಬೇಡ್ಕರ್ ರಚಿಸಿದ ಸಂವಿಧಾನ. ಜನರು ಮೌಢ್ಯದಿಂದ ಹೊರಬಂದು ಸಂವಿಧಾನದ ಮೌಲ್ಯಗಳನ್ನು ಅರ್ಥಮಾಡಿಕೊಳ್ಳಬೇಕು ಎಂದು ಪ್ರಾಂಶುಪಾಲೆ ಡಾ.ಶಾಂತಾ ಅಸ್ಟಿಗೆ ಹೇಳಿದರು.
ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ ಡಾ.ಬಿ.ಆರ್.ಅಂಬೇಡ್ಕರ್ ಸ್ಮರಣಾರ್ಥ ಸ್ಪರ್ಧಾಕೂಟದ ಸಮಾರೋಪ ಸಮಾರಂಭದಲ್ಲಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಕಲಬುರಗಿಯ ನಿವೃತ್ತ ಮನೋವಿಜ್ಞಾನ ಪ್ರಾಧ್ಯಾಪಕ ಆರ್.ವೆಂಕಟರಡ್ಡಿ ಮಾತನಾಡಿ, ಡಾ.ಅಂಬೇಡ್ಕರ್ ಅವರು ತಮ್ಮ ಬಾಲ್ಯದ ಕಷ್ಟಗಳನ್ನು ಸಾಧನೆಯ ಮೆಟ್ಟಿಲುಗಳನ್ನಾಗಿ ರೂಪಿಸಿಕೊಂಡರು. ವಿದ್ಯಾರ್ಥಿಗಳು ತಮ್ಮ ಭವಿಷ್ಯವನ್ನು ಕಟ್ಟಿಕೊಳ್ಳಲು ಕಷ್ಟಪಟ್ಟು ಶಿಕ್ಷಣ ಪಡೆಯಬೇಕು. ಅಂಬೇಡ್ಕರ್ ಅವರ ಜೀವನ ಹಾಗೂ ವಿಚಾರಧಾರೆಯನ್ನು ಆಳವಾಗಿ ಅಧ್ಯಯನ ಮಾಡಬೇಕು ಎಂದು ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಕಾರ್ಯದರ್ಶಿ ಡಾ.ಖಾಜಾವಲಿ ಈಚನಾಳ, ಐಕ್ಯುಏಸಿ ಸಂಯೋಜಕ ಡಾ. ಸಂದೀಪ್ ತಿವಾರಿ, ಡಾ. ರಾಬಿಯಾ ಬೇಗಂ, ಡಾ. ಎನ್.ಜಿ. ಶ್ರೀಧರ್, ಡಾ.ಖುತೇಜಾ ನಸ್ರಿನ್, ಡಾ.ಶರಣಪ್ಪ ಗುಂಡಗುರ್ತಿ, ಕುಪೇಂದ್ರ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಡಾ.ಬಿ.ಆರ್.ಅಂಬೇಡ್ಕರ್ ಸ್ಮರಣಾರ್ಥ ಸ್ಪರ್ಧಾಕೂಟದ ಸಂಚಾಲಕ ಭೀಮಣ್ಣ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಡಾ.ರಾಜಶೇಖರ್ ಹಡಪದ್ ಕಾರ್ಯಕ್ರಮ ನಿರೂಪಿಸಿದರು. ಡಾ.ರಾಮುಲು ವಂದಿಸಿದರು.
ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪತ್ರ ಹಾಗೂ ಬಹುಮಾನಗಳನ್ನು ವಿತರಿಸಲಾಯಿತು.






