ನಶೆ ಮುಕ್ತ ಸಮಾಜ ನಿರ್ಮಾಣಕ್ಕೆ ಕೈಜೋಡಿಸಿ: ಶಾಸಕ ಅಲ್ಲಮಪ್ರಭು ಪಾಟೀಲ

ಕಲಬುರಗಿ: ಆರೋಗ್ಯವಂತ ಮತ್ತು ವ್ಯಸನ ಮುಕ್ತ ಸಮಾಜ ನಿರ್ಮಾಣ ಮಾಡುವ ನಿಟ್ಟಿನಲ್ಲಿ ಡಾ.ಮಹಾಂತ ಶಿವಯೋಗಿಗಳ ಕೊಡುಗೆ ಅಪಾರವಾಗಿದ್ದು, ಅವರ ಅದರ್ಶಗಳನ್ನು ಪಾಲಿಸುವ ಮೂಲಕ ನಶೆ ಮುಕ್ತ ಸಮಾಜಕ್ಕೆ ಎಲ್ಲರು ಕೈಜೋಡಿಸಬೇಕು ಎಂದು ವಿದ್ಯಾರ್ಥಿ ಸಮುದಾಯಕ್ಕೆ ಕಲಬುರಗಿ ದಕ್ಷಿಣ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಕರೆ ನೀಡಿದರು.
ಕರ್ನಾಟಕ ರಾಜ್ಯ ಮದ್ಯಪಾನ ಸಂಯಮ ಮಂಡಳಿ, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಡಾ.ಬಿ.ಆರ್.ಅಂಬೇಡ್ಕರ್ ಪದವಿ ಮಹಾವಿದ್ಯಾಲಯ ಹಾಗೂ ಸ್ನಾತಕೋತ್ತರ ಕೇಂದ್ರ ಕಲಬುರಗಿ ಇವರುಗಳ ಸಂಯುಕ್ತಾಶ್ರಯದಲ್ಲಿ ಶುಕ್ರವಾರ ಕಲಬುರಗಿ ನಗರದ ದರ್ಗಾ ರಸ್ತೆಯಲ್ಲಿರುವ ಡಾ.ಬಿ.ಆರ್.ಅಂಬೇಡ್ಕರ್ ಪದವಿ ಮಹಾವಿದ್ಯಾಲಯ ಹಾಗೂ ಸ್ನಾತಕೋತ್ತರ ಕೇಂದ್ರದಲ್ಲಿ ಶ್ರೀ ಮ.ನಿ.ಪ್ರ. ಮಹಾಂತ ಶಿವಯೋಗಿಗಳ ಜನ್ಮ ದಿನಾಚರಣೆ ಅಂಗವಾಗಿ ವ್ಯಸನ ಮುಕ್ತ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಮಹಾಂತ ಶಿವಯೋಗಿಗಳು ಮನೆ ಮನೆಗೆ ಹೋಗಿ ಜನರ ದುಶ್ಚಟಗಳನ್ನು ತಮ್ಮ ಜೋಳಿಗೆಗೆ ಹಾಕಿಕೊಳ್ಳುವ ಮೂಲಕ ವ್ಯಸನ ಮುಕ್ತ ಸಮಾಜ ನಿರ್ಮಾಣಕ್ಕೆ ಅಡಿಪಾಯ ಹಾಕಿದ್ದಾರೆ. ಜೀವನದುದ್ದಕ್ಕು ಮದ್ಯ ವ್ಯಸನದ ವಿರುದ್ದ ಹೋರಾಡಿದ್ದಾರೆ. ಇಂತಹ ಮಹನೀಯರ ಸಮಾಜ ಸೇವೆ ಕಂಡು ಅವರ ಜನ್ಮ ದಿನವನ್ನು ಸರ್ಕಾರ ವ್ಯಸನ ಮುಕ್ತ ದಿನಾಚರಣೆಯಾಗಿ ರಾಜ್ಯವ್ಯಾಪಿ ಆಚರಿಸುತ್ತಿದೆ ಎಂದರು.
2019ರ ಸಮೀಕ್ಷೆ ಪ್ರಕಾರ ದೇಶದಲ್ಲಿ ಶೇ.5.3 ವ್ಯಸನಿಗಳಿದ್ದರೆ, ರಾಜ್ಯದಲ್ಲಿ ಶೇ.2.5 ರಷ್ಟಿದೆ. ಕೆಲವೊಮ್ಮೆ ಸಂಗಡಿಗರ ಸಹವಾಸ ದೋಷದಿಂದ ಸಹ ಇಂತಹ ಕೆಟ್ಟ ಚಟಗಳಿಗೆ ಬಲಿಯಾಗುವುದುಂಟು. ಹೀಗಾಗಿ ವಿದ್ಯಾರ್ಥಿ ಸಮುದಾಯ ಬೀಡಿ, ಸಿಗರೇಟ್, ಗಾಂಜಾ, ಅಫೀಮು, ಮದ್ಯದಂತಹ ಅರೋಗ್ಯ ಮತ್ತು ಸಮಾಜಕ್ಕೆ ಹಾನಿಕಾರಕವಾದ ದುಶ್ಚಟಗಳಿಗೆ ಬಲಿಯಾಗಬಾರದು ಎಂದು ಕಿವಿಮಾತು ಹೇಳಿದ ಶಾಸಕ ಅಲ್ಲಮಪ್ರಭು ಪಾಟೀಲ ಅವರು, ಯುವ ಸಮುದಾಯ ವ್ಯಸನಕ್ಕೆ ಅಂಟಿಕೊಂಡಲ್ಲಿ ಅವರ ಕುಟುಂಬವು ಕಣ್ಣಿರ ಹಾಕಬೇಕಾಗುತ್ತದೆ ಎಂಬುದನ್ನು ಯಾರು ಮರೆಯಬಾರದು ಎಂದರು.
ಜಿಲ್ಲಾ ಮಾನಸಿಕ ಕಾರ್ಯಕ್ರಮದ ಮನೋವೈದ್ಯ ಡಾ.ಮಹಮ್ಮದ್ ಇರ್ಫಾನ್ ಮಹಾಗಾವಿ ತಮ್ಮ ಉಪನ್ಯಾಸದಲ್ಲಿ ಮಾತನಾಡಿ, ಹದಿ ಹರೆಯ ವಯಸ್ಸಿನಲ್ಲಿಯೇ ದುಶ್ಚಟದತ್ತ ಮನಸ್ಸು ಹೆಚ್ಚು ವಾಲುತ್ತದೆ. ಚಂಚಲ ಮನಸ್ಸನ್ನು ನಿಯಂತ್ರಿಸಿಕೊಂಡು ವ್ಯಸನಿಗಳಾಗದೆ ಕಾಲೇಜು ಕ್ಯಾಂಪಸ್, ಮನೆ ಹಾಗೂ ಸುತ್ತಮುತ್ತ ಪರಿಸರವನ್ನು ವ್ಯಸನ ಮುಕ್ತ ಪ್ರದೇಶ ಮಾಡಿದಲ್ಲಿ ಡಾ.ಮಹಾಂತ ಶಿವಯೋಗಿಗಳ ಜೀವನದುದ್ದಕ್ಕೂ ಪಟ್ಟ ಶ್ರಮ ಸಾರ್ಥಕವಾಗುತ್ತದೆ ಎಂದರು.
ಮದ್ಯ ವ್ಯಸನದಿಂದ ಬುದ್ದಿ ಭ್ರಷ್ಠವಾಗುತ್ತದೆ. ಸಂಬಂಧಿಕರು, ಗೆಳೆಯರು ಇದಕ್ಕೆ ತುತ್ತಾದಲ್ಲಿ ಮನೋವೈದ್ಯರನ್ನು ಕಂಡು ಸೂಕ್ತ ಚಿಕಿತ್ಸೆ ಕೊಡಿಸಿ ಎಂದರಲ್ಲದೆ ಸುತ್ತಮುತ್ತ ಪರಿಸರದಲ್ಲಿ ವ್ಯಸನಿಗಳು ಅದರಿಂದ ಹೊರಬರುವಂತೆ ಜಾಗೃತಿ ಮೂಡಿಸಬೇಕು ಎಂದು ವಿದ್ಯಾರ್ಥಿಗಳನ್ನು ಉದ್ದೇಶಿಸಿ ಡಾ.ಇರ್ಫಾನ್ ಮಹಾಗಾವಿ ಮಾತನಾಡಿದರು.
ಕರ್ನಾಟಕ ಪೀಪಲ್ಸ್ ಶಿಕ್ಷಣ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಶಾಂತಪ್ಪ ಸೂರನ್ ಅವರು ಮಾತನಾಡಿ, ನಮ್ಮ ಸಂಸ್ಥೆಯ ಕಾಲೇಜಿನಲ್ಲಿ ವ್ಯಸನ ಮುಕ್ತ ಕ್ಯಾಂಪಸ್ ಮಾಡುವ ನಿಟ್ಟಿನಲ್ಲಿ ಜಿಲ್ಲಾಡಳಿತದಿಂದ ಇಂದಿಲ್ಲಿ ಕಾರ್ಯಕ್ರಮ ಆಯೋಜಿಸಿರುವುದು ಸಂತಸ ತಂದಿದೆ. ಯುವ ಸಮುದಾಯ ಮದ್ಯ ವ್ಯಸನಿಯಾಗದೆ ಸಾಧನೆಯ ಶಿಖರದತ್ತ ತಮ್ಮ ಗುರಿ ಕೇಂದ್ರಿಕರಿಸಬೇಕು ಎಂದರು.
ಇದಕ್ಕು ಮುನ್ನ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಉಪನಿರ್ದೇಶಕ ಜಡಿಯಪ್ಪ ಗೆದ್ಲಗಟ್ಟಿ ಅವರು ಸರ್ವವರನ್ನು ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಅರ್ಥಶಾಸ್ತ್ರ ವಿಭಾಗದ ಪ್ರಾಧ್ಯಾಪಕಿ ಡಾ.ನಿರ್ಮಲಾ ಸಿರಗಾಪೂರ ವ್ಯಸನ ಮುಕ್ತ ಸಮಾಜದ ಪ್ರತಿಜ್ಞೆ ವಿಧಿ ಬೋಧಿಸಿದರು.
ಕಾರ್ಯಕ್ರಮದಲ್ಲಿ ಅಪರ ಜಿಲ್ಲಾಧಿಕಾರಿ ರಾಯಪ್ಪ ಹುಣಸಗಿ, ಜಿಲ್ಲಾ ಮಾನಸಿಕ ಕಾರ್ಯಕ್ರಮ ಅಧಿಕಾರಿ ಡಾ.ವಿವೇಕಾನಂದ ರೆಡ್ಡಿ, ಕರ್ನಾಟಕ ಪೀಪಲ್ಸ್ ಶಿಕ್ಷಣ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಶಾಂತಪ್ಪ ಸೂರನ್, ಆಡಳಿತಾಧಿಕಾರಿ ಡಾ.ಚಂದ್ರಶೇಖರ ಶೀಲವಂತ, ಡಾ.ಬಿ.ಆರ್.ಅಂಬೇಡ್ಕರ್ ಪದವಿ ಮಹಾವಿದ್ಯಾಲಯ ಹಾಗೂ ಸ್ನಾತಕೋತ್ತರ ಕೇಂದ್ರದ ಪ್ರಾಂಶುಪಾಲರಾದ ಡಾ.ವಿಜಯಕುಮಾರ್ ಡಿ., ಮುಖಂಡ ನಾಗೇಂದ್ರಪ್ಪ ಶೇರಿಕರ್, ಉಪನ್ಯಾಸಕರಾದ ವಸಂತ ನಾಶಿ, ಸಿದ್ದಾರ್ಥ ಸೇರಿದಂತೆ ಕಾಲೇಜಿನ ಅಧ್ಯಾಪಕ ವೃಂದ, ನೂರಾರು ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಉಪನ್ಯಾಸಕ ಡಾ.ಗಾಂಧಿ ಮೂಳೇಕರ್ ನಿರೂಪಿಸಿದರೆ, ಸಿದ್ದಪ್ಪ ಕಾಂತಾ ವಂದಿಸಿದರು.
ವೇದಿಕೆ ಕಾರ್ಯಕ್ರಮಕ್ಕೂ ಮುನ್ನ ವ್ಯಸನ ಮುಕ್ತ ದಿನಾಚರಣೆ ಅಂಗವಾಗಿ ಇಲ್ಲಿನ ಜಿಮ್ಸ್ ಆಸ್ಪತ್ರೆ ಅವರಣದಿಂದ ಡಾ.ಬಿ.ಆರ್.ಅಂಬೇಡ್ಕರ್ ಪದವಿ ಮಹಾವಿದ್ಯಾಲಯದ ವರೆಗೆ ಸರ್ಕಾರಿ ನರ್ಸಿಂಗ್ ಕಾಲೇಜು ವಿದ್ಯಾರ್ಥಿಗಳಿಂದ ಜಾಗೃತಿ ಜಾಥಾ ನಡೆಯಿತು. ಪ್ರಭಾರಿ ಜಿಲ್ಲಾ ಶಸ್ತ್ರಜ್ಞ ಡಾ.ಓಂಪ್ರಕಾಶ ಅಂಬುರೆ ಮತ್ತು ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮ ಅಧಿಕಾರಿ ಡಾ.ವಿವೇಕಾನಂದ ರೆಡ್ಡಿ ಅವರು ಜಿಲ್ಲಾ ಆಸ್ಪತ್ರೆ ಅವರಣದಲ್ಲಿ ಜಾಥಾಗೆ ಚಾಲನೆ ನೀಡಿದರು. ಜಾಥಾದಲ್ಲಿ ವಿದ್ಯಾರ್ಥಿಗಳು ಮದ್ಯ ಮತ್ತು ಮಾದಕ ವಸ್ತುಗಳ ಸೇವನೆಯಿಂದಾಗುವ ದುಷ್ಪರಿಣಾಮಗಳ ಕುರಿತು ಘೋಷವಾಕ್ಯ ಕೂಗುತ್ತ ಜನರಲ್ಲಿ ಅರಿವು ಮೂಡಿಸಿದರು.







