Kalaburagi | ʼವಾರ್ತಾಭಾರತಿʼ ವಿಶೇಷ ವರದಿಗೆ ಜಿಲ್ಲಾಧಿಕಾರಿ ಸ್ಪಂದನೆ; ಕಡಗಂಚಿ ವಿದ್ಯಾರ್ಥಿನಿಯರಿಗೆ ಬಸ್ ಸೌಲಭ್ಯದ ಭರವಸೆ

ಜಿಲ್ಲಾಧಿಕಾರಿ ಇಕ್ರಮ್ ಶರೀಫ್
ಕಲಬುರಗಿ: ಕಡಗಂಚಿಯ ಬಾಲಕಿಯರ ವಸತಿ ನಿಲಯದಲ್ಲಿ ಸಾಮರ್ಥ್ಯಕ್ಕಿಂತ ಕಡಿಮೆ ವಿದ್ಯಾರ್ಥಿನಿಯರು ಪ್ರವೇಶ ಪಡೆದಿರುವ ಹಿನ್ನೆಲೆಯಲ್ಲಿ, ಅದನ್ನು ಆಳಂದಗೆ ಸ್ಥಳಾಂತರ ಮಾಡಲಾಗುತ್ತಿದೆ. ಸಿಯುಕೆ ವಿದ್ಯಾರ್ಥಿನಿಯರ ಶೈಕ್ಷಣಿಕ ಅನುಕೂಲಕ್ಕಾಗಿ ಬಸ್ ವ್ಯವಸ್ಥೆ ಮಾಡಲಾಗುವುದೆಂದು ಜಿಲ್ಲಾಧಿಕಾರಿ ಇಕ್ರಮ್ ಶರೀಫ್ ಭರವಸೆ ನೀಡಿದ್ದಾರೆ.
ಶನಿವಾರ ವಾರ್ತಾಭಾರತಿ ಪತ್ರಿಕೆ ʼಕಡಗಂಚಿ ಬಾಲಕಿಯರ ವಸತಿ ಶಾಲೆ ಆಳಂದಕ್ಕೆ ಸ್ಥಳಾಂತರ ವಿರೋಧಿಸಿ ವಿದ್ಯಾರ್ಥಿನಿಯರು ಆಕ್ರೋಶʼ ಎಂಬ ವಿಶೇಷ ವರದಿ ಮಾಡಿತು. ವರದಿಗೆ ಸ್ಪಂದಿಸಿದ ಜಿಲ್ಲಾಧಿಕಾರಿ, ಕಡಗಂಚಿಯಲ್ಲಿ ಹೊಸ ವಸತಿ ನಿಲಯ ನಿರ್ಮಾಣಕ್ಕೆ ಈಗಾಗಲೇ ಆಡಳಿತಾತ್ಮಕ ಅನುಮೋದನೆ ದೊರೆತಿದ್ದರೂ, ಕೇವಲ 30 ವಿದ್ಯಾರ್ಥಿನಿಯರಿಗೆ ಹೊಸ ವಸತಿ ನಿಲಯ ನಿರ್ಮಾಣಕ್ಕೆ 7–8 ಕೋಟಿ ವೆಚ್ಚ ಮಾಡುವುದು ಸಮಂಜಸವಲ್ಲ. ವಿದ್ಯಾರ್ಥಿನಿಯರ ಸಂಖ್ಯೆ ಅತಿ ಕಡಿಮೆಯಾಗಿರುವುದರಿಂದ ಸಂಪೂರ್ಣ ಸಾಮರ್ಥ್ಯ ಬಳಕೆಯಾಗದ ಸಾಧ್ಯತೆ ಇದೆ. ಈ ಕಾರಣದಿಂದ ವಿದ್ಯಾರ್ಥಿನಿಲಯವನ್ನು ಅಳಂದ ತಾಲ್ಲೂಕು ಕೇಂದ್ರಕ್ಕೆ ಸ್ಥಳಾಂತರಿಸುವ ನಿರ್ಧಾರ ಕೈಗೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.
ಆಳಂದ ಕೇಂದ್ರದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿನಿಯರು ಪ್ರವೇಶ ಪಡೆಯುವ ಸಾಧ್ಯತೆ ಇರುವುದರಿಂದ ಅಲ್ಲಿನ ವಸತಿ ಸೌಲಭ್ಯಗಳು ಪರಿಣಾಮಕಾರಿಯಾಗಿ ಬಳಸಿಕೊಳ್ಳಬಹುದಾಗಿದ್ದು, ಕಡಗಂಚಿಯ ವಿದ್ಯಾರ್ಥಿನಿಯರ ವಿದ್ಯಾಭ್ಯಾಸಕ್ಕೆ ಯಾವುದೇ ತೊಂದರೆ ಆಗದಂತೆ, ಅವರನ್ನು ಕೇಂದ್ರೀಯ ವಿಶ್ವವಿದ್ಯಾಲಯಕ್ಕೆ ಕರೆತರುವುದು ಹಾಗೂ ಮರಳಿ ಕಳುಹಿಸುವುದಕ್ಕಾಗಿ ವಿಶೇಷ ಬಸ್ ಸೌಲಭ್ಯವನ್ನು ಒದಗಿಸಲಾಗುವುದೆಂದು ಭರವಸೆ ನೀಡಿದ್ದಾರೆ.






