ಕಲಬುರಗಿ | ಬಿಜೆಪಿ ಮುಖಂಡರ ಹತ್ಯೆಗೆ ಸಂಚು ರೂಪಿಸಿರುವ ಆರೋಪಿಗಳನ್ನು ಬಂಧಿಸುವಂತೆ ಆಗ್ರಹಿಸಿ ಬಿಜೆಪಿಯಿಂದ ಪ್ರತಿಭಟನೆ

ಕಲಬುರಗಿ : ಆಂದೋಲಾ ಶ್ರೀ ಸಿದ್ಧಲಿಂಗ ಸ್ವಾಮೀಜಿ ಸೇರಿದಂತೆ ಮೂವರು ಬಿಜೆಪಿ ನಾಯಕರ ಹತ್ಯೆಗೆ ಸಂಚು ರೂಪಿಸಿರುವ ಆರೋಪಿಗಳನ್ನು ಕೂಡಲೇ ಬಂಧಿಸಬೇಕೆಂದು ಆಗ್ರಹಿಸಿ, ನಗರದ ಜಗತ್ ವೃತ್ತದಲ್ಲಿ ಬಿಜೆಪಿ ಪಕ್ಷದಿಂದ ಪ್ರತಿಭಟನೆ ನಡೆಸಲಾಯಿತು.
ಕಾಂಗ್ರೆಸ್ ಸರಕಾರದ ಕುಮ್ಮಕ್ಕಿನಿಂದ ಆರೋಪಿಗಳು ಬಚಾವಾಗುತ್ತಿದ್ದಾರೆ, ಅವರನ್ನು ರಕ್ಷಿಸುವ ಭರದಲ್ಲಿ ಉಸ್ತುವಾರಿ ಸಚಿವರು ಪ್ರಕರಣಗಳನ್ನು ದಾಖಲಿಸದಂತೆ ಪೊಲೀಸರಿಗೆ ಸೂಚನೆಗಳು ನೀಡುತ್ತಿದ್ದಾರೆಂದು ಬಿಜೆಪಿ ನಾಯಕರು ಆರೋಪಿಸಿದ್ದಾರೆ.
ಪ್ರತಿಭಟನೆಯಲ್ಲಿ ಮಾತನಾಡಿದ ಮಾಜಿ ಶಾಸಕ ರಾಜಕುಮಾರ್ ಪಾಟೀಲ್ ತೆಲ್ಕೂರ್, ʼಆತ್ಮಹತ್ಯೆಗೆ ಶರಣಾದ ಸಚಿನ್ ಪಂಚಾಳ ಅವರ ಕುಟುಂಬ ಮಾನಸಿಕವಾಗಿ ಕುಂದಿದೆ, ತಾವು ಸಹ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಹೇಳುತ್ತಿದ್ದಾರೆ. ಅವರ ಕುಟುಂಬಕ್ಕೆ ಪರಿಹಾರವಾಗಿ 1 ಕೋಟಿ ರೂ. ಘೋಷಣೆ ಮಾಡಬೇಕುʼ ಎಂದು ಆಗ್ರಹಿಸಿದರು.
ʼಬೀದರ್ ಜಿಲ್ಲಾಡಳಿತ ಮತ್ತು ಕಾಂಗ್ರೆಸ್ ಸರಕಾರ ಆತ್ಮಹತ್ಯೆಗೆ ಶರಣಾದ ಸಚಿನ್ ಕುಟುಂಬಕ್ಕೆ ಸಾಂತ್ವನ ಕೂಡ ಹೇಳಿಲ್ಲ, ಅವರ ಕುಟುಂಬಕ್ಕೆ ನ್ಯಾಯ ದೊರಕಿಸಿಕೊಡಬೇಕು, ಆತನ ಸಾವಿಗೆ ಕಾರಣರಾದ ಆರೋಪಿಗಳನ್ನು ಕೂಡಲೇ ಬಂಧಿಸಬೇಕುʼ ಎಂದು ಒತ್ತಾಯಿಸಿದರು.
ʼಆಂದೋಲಾ ಶ್ರೀ ಸಿದ್ಧಲಿಂಗ ಸ್ವಾಮೀಜಿ, ಬಿಜೆಪಿ ಶಾಸಕ ಬಸವರಾಜ ಮತ್ತಿಮಡು, ಚಂದು ಪಾಟೀಲ್ ಮತ್ತು ಮಣಿಕಂಠ ರಾಠೋಡ್ ಹತ್ಯೆಗೆ ಸಂಚು ರೂಪಿಸಿರುವ ಆರೋಪಿಗಳನ್ನು ಬಂಧಿಸಿ, ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕುʼ ಎಂದು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಶಾಸಕ ಬಸವರಾಜ ಬಸವರಾಜ ಮತ್ತಿಮಡು, ಕಲಬುರಗಿ ಬಿಜೆಪಿ ನಗರಾಧ್ಯಕ್ಷ ಚಂದು ಪಾಟೀಲ್, ಮಾಜಿ ಶಾಸಕ ದತ್ತಾತ್ರೇಯ ಪಾಟೀಲ್ ರೇವೂರ್, ಅಮರನಾಥ್ ಪಾಟೀಲ್, ಶಿವರಾಜ್ ಪಾಟೀಲ್ ರದ್ದೇವಾಡಗಿ, ರಾಜು ದೇವದುರ್ಗ, ವಿಶಾಲ ದರ್ಗಿ, ಅಪ್ಪು ಕಣಕಿ, ಸುಶೀಲ ಚವ್ಹಾಣ, ಭಾಗೀರಥಿ ಗುಣಪುರ, ಸಂತೋಷ್ ಹಾದಿಮನಿ, ಶಿವಕಾಂತ್ ಮಹಾಜನ್, ರಾಮಚಂದ್ರ ಜಾಧವ್, ಶಿವ ಅಷ್ಟಗಿ, ಮಹಾದೇವ ಬೆಳಮಗಿ, ಗೋಪಾಲ್ ಚವ್ಹಾಣ ಸೇರಿದಂತೆ ಇತರರು ಇದ್ದರು.







