ಕಲಬುರಗಿ | ಶರಣಬಸವ ವಿಶ್ವವಿದ್ಯಾಲಯದಲ್ಲಿ 12ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆ

ಕಲಬುರಗಿ: ಹೆಚ್ಚು ಕಾಲ ಬದುಕುವುದು ಮುಖ್ಯವಲ್ಲ, ಉತ್ತಮ ಆರೋಗ್ಯ ಮತ್ತು ಗುಣಮಟ್ಟದ ಜೀವನದೊಂದಿಗೆ ಹೆಚ್ಚು ಕಾಲ ಬದುಕುವುದು ಮುಖ್ಯವಾಗಿದೆ ಎಂದು ಶರಣಬಸವ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಅನಿಲಕುಮಾರ ಬಿಡವೆ ಹೇಳಿದರು.
ನಗರದ ಶರಣಬಸವ ವಿಶ್ವವಿದ್ಯಾಲಯದಲ್ಲಿ ರವಿವಾರ ಆಯೋಜಿಸಿದ್ದ 12ನೇ ಅಂತರರಾಷ್ಟ್ರೀಯ ಯೋಗ ದಿನಾಚರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಯೋಗವು ಇಂದಿನ ಭಾರತ ಸರಕಾರದ ಪ್ರಮುಖ ಆರೋಗ್ಯ ನೀತಿಗಳಲ್ಲಿ ಒಂದಾಗಿದ್ದು, 2047ರ ವೇಳೆಗೆ ಸ್ವಾತಂತ್ರ್ಯದ ಶತಮಾನೋತ್ಸವ ಆಚರಿಸಲಿರುವ ದೇಶವು ಆರೋಗ್ಯವಂತ ಹಾಗೂ ಸಮೃದ್ಧ ರಾಷ್ಟ್ರವಾಗಿ ರೂಪುಗೊಳ್ಳಬೇಕಾಗಿದೆ ಎಂದು ಹೇಳಿದರು.
ಆರ್ಥಿಕತೆ ಮತ್ತು ಮಿಲಿಟರಿ ಶಕ್ತಿ ರಾಷ್ಟ್ರದ ಭದ್ರತೆಗೆ ಪ್ರಮುಖವಾದರೂ, ಆರೋಗ್ಯವಂತ ನಾಗರಿಕರೇ ರಾಷ್ಟ್ರದ ನಿಜವಾದ ಶಕ್ತಿಯಾಗಿದ್ದಾರೆ. ಹಣ ಮತ್ತು ಅಧಿಕಾರ ಮಾತ್ರ ರಾಷ್ಟ್ರದ ಸಾಮರ್ಥ್ಯವನ್ನು ನಿರ್ಧರಿಸುವುದಿಲ್ಲ; ಉತ್ತಮ ಆರೋಗ್ಯವೇ ವ್ಯಕ್ತಿ ಹಾಗೂ ದೇಶದ ಪ್ರಗತಿಗೆ ಮೂಲಾಧಾರವಾಗಿದೆ ಎಂದು ಅವರು ಅಭಿಪ್ರಾಯಪಟ್ಟರು.
ಶರಣಬಸವೇಶ್ವರ ಸಂಸ್ಥಾನದ 8ನೇ ಮಹಾದಾಸೋಹ ಪೀಠಾಧಿಪತಿಗಳಾದ ಲಿಂಗೈಕ್ಯ ಪೂಜ್ಯ ಡಾ. ಶರಣಬಸವಪ್ಪ ಅಪ್ಪಾಜಿ ಅವರು ಅತ್ಯುತ್ತಮ ಯೋಗಪಟುವಾಗಿದ್ದು, ಪ್ರತಿದಿನ ಸುಮಾರು 100 ಸೂರ್ಯನಮಸ್ಕಾರಗಳನ್ನು ಮಾಡುತ್ತಿದ್ದರು. ನಿಯಮಿತ ಯೋಗಾಭ್ಯಾಸದಿಂದ ಅವರು ಎಂದಿಗೂ ದಣಿದಿರುವುದನ್ನು ತಾವು ನೋಡಿಲ್ಲ ಎಂದು ಸ್ಮರಿಸಿದರು.
ಕೋವಿಡ್-19 ಸಂಕಷ್ಟದ ಸಂದರ್ಭದಲ್ಲಿ ಯೋಗವು ದೈಹಿಕ ಹಾಗೂ ಮಾನಸಿಕ ಆರೋಗ್ಯ ಕಾಪಾಡುವಲ್ಲಿ ಮಹತ್ವದ ಪಾತ್ರ ವಹಿಸಿತು. ಪ್ರತಿದಿನ ಯೋಗಾಭ್ಯಾಸ ಮಾಡುವುದರಿಂದ ದೇಹ ಸದೃಢವಾಗಿರುವುದರೊಂದಿಗೆ ಕೆಲಸದಲ್ಲಿ ಚೈತನ್ಯ ಮತ್ತು ಏಕಾಗ್ರತೆ ಹೆಚ್ಚುತ್ತದೆ. ಶಿಕ್ಷಕರು ಹಾಗೂ ವೃತ್ತಿಪರರು ಹೆಚ್ಚು ಕಾರ್ಯಕ್ಷಮತೆಯಿಂದ ಕೆಲಸ ನಿರ್ವಹಿಸಲು ಯೋಗ ನೆರವಾಗುತ್ತದೆ ಎಂದು ಹೇಳಿದರು.
“ಜೀವಂತವಾಗಿರುವವರೆಗೆ ನಮ್ಮ ದೇಹವನ್ನು ಪ್ರೀತಿಸಬೇಕು, ಕಾಳಜಿ ವಹಿಸಬೇಕು. ಆರೋಗ್ಯಕರ ಹಾಗೂ ಗುಣಮಟ್ಟದ ಜೀವನ ನಡೆಸಲು ಯೋಗ ಅತ್ಯಗತ್ಯವಾಗಿದೆ. ಆದ್ದರಿಂದ ಪ್ರತಿಯೊಬ್ಬರೂ ಯೋಗವನ್ನು ತಮ್ಮ ಜೀವನದ ಅವಿಭಾಜ್ಯ ಅಂಗವನ್ನಾಗಿ ಮಾಡಿಕೊಳ್ಳಬೇಕು” ಎಂದು ಕರೆ ನೀಡಿದರು.
ಕಾರ್ಯಕ್ರಮವನ್ನು ಸ್ವಾಭಿಮಾನ ಭಾರತ ಸಂಸ್ಥೆಯ ಜಂಟಿ ಕಾರ್ಯದರ್ಶಿ ಮಂಜುಳಾ ಅವರು ಸಸಿಗೆ ನೀರುಣಿಸುವ ಮೂಲಕ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, ಯೋಗವನ್ನು ಜಗತ್ತಿಗೆ ಪರಿಚಯಿಸಿದವರು ಭಾರತೀಯರು ಎಂಬುದು ಹೆಮ್ಮೆಯ ವಿಷಯವಾಗಿದೆ. ಇಂದು ಸುಮಾರು 180ಕ್ಕೂ ಹೆಚ್ಚು ದೇಶಗಳಲ್ಲಿ ಯೋಗಾಭ್ಯಾಸ ನಡೆಯುತ್ತಿದ್ದು, ಭಾರತದ ಸಂಸ್ಕೃತಿ ಮತ್ತು ಪರಂಪರೆಯ ಮಹತ್ವವನ್ನು ವಿಶ್ವಕ್ಕೆ ಪರಿಚಯಿಸಿದೆ ಎಂದು ಹೇಳಿದರು.
ಕಾರ್ಯಕ್ರಮದ ಅಂಗವಾಗಿ ವಿಶ್ವವಿದ್ಯಾಲಯದ ಎಂ.ಎಸ್‌ಸಿ ಯೋಗ ವಿಭಾಗದ ಪ್ರಾಧ್ಯಾಪಕರು ಹಾಗೂ ವಿದ್ಯಾರ್ಥಿಗಳು ವಿವಿಧ ಯೋಗಾಸನಗಳ ಪ್ರಾತ್ಯಕ್ಷಿಕೆ ನೀಡಿ, ಯೋಗದ ಆರೋಗ್ಯಕಾರಿ ಪ್ರಯೋಜನಗಳ ಕುರಿತು ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ಕುಲಸಚಿವೆ ಡಾ. ಲಕ್ಷ್ಮಿ ಪಾಟೀಲ್ ಮಾಕಾ, ಕುಲಸಚಿವ (ಮೌಲ್ಯಮಾಪನ) ಡಾ. ಎಸ್.ಎಚ್. ಹೊನ್ನಳ್ಳಿ, ಡೀನ್ ಡಾ. ಶಿವಕುಮಾರ ಜವಳಿಗಿ, ಹಣಕಾಸು ಅಧಿಕಾರಿ ಡಾ. ಕಿರಣ ಮಾಕಾ ಸೇರಿದಂತೆ ವಿವಿಧ ವಿಭಾಗಗಳ ಡೀನರು, ವಿಭಾಗ ಮುಖ್ಯಸ್ಥರು, ಪ್ರಾಧ್ಯಾಪಕರು ಹಾಗೂ ವಿದ್ಯಾರ್ಥಿಗಳು ಉತ್ಸಾಹದಿಂದ ಪಾಲ್ಗೊಂಡಿದ್ದರು.






