ಕಲಬುರಗಿ| 16 ಪ್ರಕರಣಗಳಲ್ಲಿ ವಶಪಡಿಸಿಕೊಂಡ 13 ಕೆಜಿ ಗಾಂಜಾ ನಾಶ

ಕಲಬುರಗಿ: ಕಲಬುರಗಿ ಜಿಲ್ಲೆಯಲ್ಲಿ ಎನ್‌ಡಿಪಿಎಸ್ ಕಾಯ್ದೆಯಡಿ ವಿವಿಧ ಪ್ರಕರಣಗಳಲ್ಲಿ ವಶಪಡಿಸಿಕೊಂಡಿದ್ದ 13 ಕೆಜಿ 845 ಗ್ರಾಂ ಗಾಂಜಾವನ್ನು ಜಿಲ್ಲಾ ಮಾದಕ ವಸ್ತುಗಳ ವಿಲೇವಾರಿ ಸಮಿತಿಯ ವತಿಯಿಂದ ನಿಯಮಾನುಸಾರ ನಾಶಪಡಿಸಲಾಯಿತು.
ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ಅಕ್ರಮವಾಗಿ ಗಾಂಜಾ ಬೆಳೆಯುವುದು, ಸಾಗಾಟ ಮತ್ತು ಮಾರಾಟ ಮಾಡುತ್ತಿದ್ದವರ ವಿರುದ್ಧ ದಾಖಲಾದ ಒಟ್ಟು 16 ಪ್ರಕರಣಗಳಲ್ಲಿ ವಶಪಡಿಸಿಕೊಂಡಿದ್ದ ಗಾಂಜಾವನ್ನು, ಜಿಲ್ಲಾ ಮಾದಕ ವಸ್ತುಗಳ ವಿಲೇವಾರಿ ಸಮಿತಿಯ ಅನುಮತಿ ಪಡೆದು ಚಿತ್ತಾಪುರ ಪೊಲೀಸ್ ಠಾಣೆ ವ್ಯಾಪ್ತಿಯ ಓರಿಯಂಟ್ ಸಿಮೆಂಟ್ ಕಾರ್ಖಾನೆ ಆವರಣದಲ್ಲಿ ನಾಶಪಡಿಸಲಾಯಿತು.
ಮಾದಕ ವಸ್ತುಗಳ ಅಕ್ರಮ ಜಾಲವನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಪೊಲೀಸ್ ಇಲಾಖೆ ನಿರಂತರ ಕಾರ್ಯಾಚರಣೆ ನಡೆಸುತ್ತಿದ್ದು, ವಶಪಡಿಸಿಕೊಳ್ಳಲಾದ ಮಾದಕ ವಸ್ತುಗಳನ್ನು ನ್ಯಾಯಾಲಯ ಹಾಗೂ ಸಂಬಂಧಿತ ಪ್ರಾಧಿಕಾರಗಳ ಅನುಮತಿಯಂತೆ ನಿಯಮಬದ್ಧವಾಗಿ ವಿಲೇವಾರಿ ಮಾಡಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಗಾಂಜಾ ನಾಶಪಡಿಸುವ ಪ್ರಕ್ರಿಯೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಡ್ಡೂರು ಶ್ರೀನಿವಾಸಲು, ಡಿವೈಎಸ್ಪಿಗಳಾದ ಶಂಕರಗೌಡ ಪಾಟೀಲ ಮತ್ತು ಸಂಗಮನಾಥ ಹಿರೇಮಠ ಸೇರಿದಂತೆ ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು.






