Kalaburagi | 20 ಲಕ್ಷ ರೂ. ಮೌಲ್ಯದ ಮಾದಕ ವಸ್ತುಗಳ ನಾಶ

ಕಲಬುರಗಿ: ಕಲಬುರಗಿ ನಗರ ಪೊಲೀಸ್ ಆಯುಕ್ತಾಲಯದ ವ್ಯಾಪ್ತಿಯಲ್ಲಿ ಎನ್‌ಡಿಪಿಎಸ್ (NDPS) ಕಾಯ್ದೆಯಡಿ ದಾಖಲಾದ ವಿವಿಧ ಪ್ರಕರಣಗಳಲ್ಲಿ ಜಪ್ತಿ ಮಾಡಲಾಗಿದ್ದ ಸುಮಾರು 20.08 ಲಕ್ಷ ರೂ. ಮೌಲ್ಯದ ಮಾದಕ ವಸ್ತುಗಳನ್ನು ಸೋಮವಾರ ಕಾನೂನುಬದ್ಧವಾಗಿ ವಿಲೇವಾರಿ ಮಾಡಲಾಯಿತು.
ಎಡಿಜಿಪಿ (ಕಾನೂನು ಮತ್ತು ಸುವ್ಯವಸ್ಥೆ) ಹಾಗೂ ಕರ್ನಾಟಕ ರಾಜ್ಯ ಮಾದಕ ವಸ್ತು ನಿಗ್ರಹ ದಳದ (ಎಎನ್‌ಟಿಎಫ್) ಮುಖ್ಯಸ್ಥರ ಆದೇಶದಂತೆ, ಕಲಬುರಗಿ ನಗರ ಪೊಲೀಸ್ ಆಯುಕ್ತಾಲಯದ ಅಧೀನದ ವಿವಿಧ ಪೊಲೀಸ್ ಠಾಣೆಗಳಲ್ಲಿ ದಾಖಲಾಗಿದ್ದ ಒಟ್ಟು 22 ಪ್ರಕರಣಗಳಿಗೆ ಸಂಬಂಧಿಸಿದಂತೆ ಜಪ್ತಿ ಮಾಡಿದ್ದ ಮಾದಕ ವಸ್ತುಗಳನ್ನು ನಾಶಪಡಿಸಲಾಯಿತು.
ವಿಲೇವಾರಿ ಮಾಡಿದ ಮಾದಕ ವಸ್ತುಗಳಲ್ಲಿ 17 ಕೆಜಿ 634 ಗ್ರಾಂ ಗಾಂಜಾ, 14,970 ನೆಟ್ರಾಜೆಪಾಮ್ (Netrazepam) ಎನ್‌ಆರ್‌ಎಕ್ಸ್ ಶೆಡ್ಯೂಲ್-ಎಚ್ ಮಾತ್ರೆಗಳು ಹಾಗೂ 18.73 ಗ್ರಾಂ ಎಂಡಿಎಂಎ (MDMA) ಡ್ರಗ್ಸ್ ಸೇರಿವೆ. ಈ ಮಾದಕ ವಸ್ತುಗಳ ಒಟ್ಟು ಅಂದಾಜು ಮೌಲ್ಯ 20,08,300 ರೂ. ಆಗಿದೆ.
ಚಿತ್ತಾಪುರ ತಾಲ್ಲೂಕಿನ ಎಸಿಸಿ ಸಿಮೆಂಟ್ ಕಾರ್ಖಾನೆಯ ಕಿಲ್ನ್‌ನಲ್ಲಿ ಮಾದಕ ವಸ್ತುಗಳ ವಿಲೇವಾರಿ ಸಮಿತಿ ಅಧ್ಯಕ್ಷರು, ಸದಸ್ಯರು ಹಾಗೂ ಪರಿಸರ ಇಲಾಖೆ ಅಧಿಕಾರಿಗಳ ಸಮ್ಮುಖದಲ್ಲಿ ನಿಗದಿತ ನಿಯಮಾವಳಿಗಳಂತೆ ಮಾದಕ ವಸ್ತುಗಳನ್ನು ಸಂಪೂರ್ಣವಾಗಿ ನಾಶಪಡಿಸಲಾಯಿತು.
ಮಾದಕ ವಸ್ತುಗಳ ದುರುಪಯೋಗ ತಡೆ ಹಾಗೂ ಮಾದಕ ಜಾಲದ ವಿರುದ್ಧ ಪೊಲೀಸ್ ಇಲಾಖೆ ನಿರಂತರ ಕಾರ್ಯಾಚರಣೆ ನಡೆಸುತ್ತಿದ್ದು, ಜಪ್ತಿ ಮಾಡಿದ ಮಾದಕ ವಸ್ತುಗಳನ್ನು ನ್ಯಾಯಾಲಯದ ನಿರ್ದೇಶನ ಹಾಗೂ ಕಾನೂನು ಪ್ರಕ್ರಿಯೆ ಪೂರ್ಣಗೊಂಡ ಬಳಿಕ ವಿಲೇವಾರಿ ಮಾಡಲಾಗುತ್ತಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.






