Kalaburagi | ಕಲುಷಿತ ನೀರು ಸೇವಿಸಿ 20 ವಿದ್ಯಾರ್ಥಿಗಳು ಅಸ್ವಸ್ಥ : ಚಿಕಿತ್ಸೆ ಬಳಿಕ ಚೇತರಿಕೆ

ಕಲಬುರಗಿ: ಡಿ. ದೇವರಾಜ ಅರಸು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಮೆಟ್ರಿಕ್ ನಂತರದ ಸ್ನಾತಕೋತ್ತರ ಬಾಲಕರ ವಸತಿ ನಿಲಯದಲ್ಲಿ ಕಲುಷಿತ ನೀರು ಸೇವಿಸಿದ ಪರಿಣಾಮ 20 ವಿದ್ಯಾರ್ಥಿಗಳು ಅಸ್ವಸ್ಥಗೊಂಡ ಘಟನೆ ಬೆಳಕಿಗೆ ಬಂದಿದೆ. ಆರೋಗ್ಯ ಇಲಾಖೆಯ ತ್ವರಿತ ಕ್ರಮದಿಂದ ಎಲ್ಲ ವಿದ್ಯಾರ್ಥಿಗಳು ಚಿಕಿತ್ಸೆ ಪಡೆದು ಚೇತರಿಸಿಕೊಂಡಿದ್ದು, ಪರಿಸ್ಥಿತಿ ಸಂಪೂರ್ಣ ನಿಯಂತ್ರಣದಲ್ಲಿದೆ.
ಜೂನ್ 15ರಂದು ಬೆಳಿಗ್ಗೆ ವಿದ್ಯಾರ್ಥಿಗಳು ಚಹಾ ಸೇವಿಸುವ ವೇಳೆ ಕುಡಿಯುವ ನೀರಿನಲ್ಲಿ ದುರ್ವಾಸನೆ ಬರುತ್ತಿರುವುದನ್ನು ಗಮನಿಸಿದ್ದಾರೆ. ಬಳಿಕ ಫಿಲ್ಟರ್ ಟ್ಯಾಂಕ್ ಪರಿಶೀಲಿಸಿದಾಗ ಅದರಲ್ಲಿ ಎರಡು ಸತ್ತ ಹಲ್ಲಿಗಳು ಬಿದ್ದಿರುವುದು ಪತ್ತೆಯಾಗಿದೆ.
ಈ ನೀರನ್ನು ಸೇವಿಸಿದ್ದ ಕೆಲ ವಿದ್ಯಾರ್ಥಿಗಳಲ್ಲಿ ಹೊಟ್ಟೆನೋವು ಹಾಗೂ ವಾಂತಿ ಲಕ್ಷಣಗಳು ಕಾಣಿಸಿಕೊಂಡ ಹಿನ್ನೆಲೆಯಲ್ಲಿ 20 ಮಂದಿಯನ್ನು ಜಿಮ್ಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಯಿತು. ಇವರಲ್ಲಿ ಇಬ್ಬರಿಗೆ ಒಳರೋಗಿ ವಿಭಾಗದಲ್ಲಿ ಹಾಗೂ 18 ಮಂದಿಗೆ ಹೊರರೋಗಿ ವಿಭಾಗದಲ್ಲಿ ಚಿಕಿತ್ಸೆ ನೀಡಲಾಗಿದೆ. ಚಿಕಿತ್ಸೆ ಬಳಿಕ ಎಲ್ಲ ವಿದ್ಯಾರ್ಥಿಗಳನ್ನು ಅದೇ ದಿನ ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದೆ.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ಶರಣಬಸಪ್ಪ ಕ್ಯಾತನಾಳ ಮಾಹಿತಿ ನೀಡಿ, ವಸತಿ ನಿಲಯದಲ್ಲಿ ಯಾವುದೇ ಹೊಸ ಪ್ರಕರಣಗಳು ವರದಿಯಾಗಿಲ್ಲ. ವಿದ್ಯಾರ್ಥಿಗಳ ಆರೋಗ್ಯ ಸ್ಥಿತಿ ಸ್ಥಿರವಾಗಿದ್ದು, ಆತಂಕಪಡುವ ಅಗತ್ಯವಿಲ್ಲ ಎಂದು ತಿಳಿಸಿದ್ದಾರೆ.
ಘಟನೆಯ ಬಳಿಕ ನಂದೂರ ಪ್ರಾಥಮಿಕ ಆರೋಗ್ಯ ಕೇಂದ್ರದ ಸಿಬ್ಬಂದಿಯನ್ನು ವಸತಿ ನಿಲಯದಲ್ಲಿ ನಿಯೋಜಿಸಿ ನಿರಂತರ ನಿಗಾ ವಹಿಸಲಾಗಿದೆ. ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರದ ಅಧಿಕಾರಿಗಳು ಕಚ್ಚಾ ಹಾಗೂ ಒಣ ಆಹಾರ ಪದಾರ್ಥಗಳ ಮಾದರಿಗಳನ್ನು ಸಂಗ್ರಹಿಸಿ ಪ್ರಯೋಗಾಲಯ ಪರೀಕ್ಷೆಗೆ ರವಾನಿಸಿದ್ದಾರೆ.
ಇದೇ ವೇಳೆ ವಿದ್ಯಾರ್ಥಿಗಳಿಗೆ ವೈಯಕ್ತಿಕ ನೈರ್ಮಲ್ಯದ ಬಗ್ಗೆ ಜಾಗೃತಿ ಮೂಡಿಸಲಾಗಿದ್ದು, ವಸತಿ ನಿಲಯದ ನೀರಿನ ಟ್ಯಾಂಕ್‌ಗಳನ್ನು ಸ್ವಚ್ಛಗೊಳಿಸಿ ಕ್ಲೋರಿನೇಷನ್ ಮಾಡಲಾಗಿದೆ.
ಆರೋಗ್ಯ ಇಲಾಖೆ ಮತ್ತು ಸಂಬಂಧಿತ ಅಧಿಕಾರಿಗಳ ತ್ವರಿತ ಕ್ರಮದಿಂದ ಪರಿಸ್ಥಿತಿ ಸಂಪೂರ್ಣ ನಿಯಂತ್ರಣದಲ್ಲಿದ್ದು, ವಿದ್ಯಾರ್ಥಿಗಳ ಆರೋಗ್ಯ ಸುರಕ್ಷತೆ ಖಚಿತಪಡಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.






