ಕಲಬುರಗಿ | ಕೊಲೆ ಆರೋಪಿಗಳ ಬಂಧನಕ್ಕೆ ಆಗ್ರಹಿಸಿ ಧರಣಿ

ಕಲಬುರಗಿ: ಕಮಲಾಪುರ ತಾಲೂಕಿನ ಲಾಡಮುಗಳಿ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಖಂಡಾಳ್ಕರ್ ಅವರನ್ನು ಕೊಲೆ ಮಾಡಿದ ಆರೋಪಿಗಳನ್ನು ಪೊಲೀಸರು ಕೊಡಲೇ ಬಂಧಿಸಿ, ನಿಷ್ಪಕ್ಷಪಾತವಾಗಿ ತನಿಖೆ ಮಾಡಬೇಕು ಮತ್ತು ಸಂತ್ರಸ್ಥ ಕುಟುಂಬಸ್ಥರಿಗೆ ನ್ಯಾಯ ಒದಗಿಸಬೇಕು ಎಂದು ರಿಪಬ್ಲಿಕನ್ ಪಾರ್ಟ್ ಆಫ್ ಇಂಡಿಯಾದ ವತಿಯಿಂದ ಧರಣಿ ಸತ್ಯಾಗ್ರಹ ನಡೆಸಿತು.
ಶುಕ್ರವಾರ ಇಲ್ಲಿನ ಜಿಲ್ಲಾಧಿಕಾರಿಗಳ ಕಚೇರಿ ಎದುರು ಒಂದು ದಿನದ ಧರಣಿ ಸತ್ಯಾಗ್ರಹ ನಡೆಸಿ, ಸಂತ್ರಸ್ತ ಕುಟುಂಬಕ್ಕೆ ಸರಕಾರಿ ಉದ್ಯೋಗ ಹಾಗೂ ಪರಿಹಾರ ನೀಡಬೇಕು ಎಂದು ಪೊಲೀಸ್ ಮಹಾನಿರೀಕ್ಷಕರಿಗೆ ಮನವಿ ಸಲ್ಲಿಸಲಾಯಿತು.
ರಿಪಬ್ಲಿಕನ್ ಪಾರ್ಟ್ ಆಫ್ ಇಂಡಿಯಾ ರಾಷ್ಟ್ರೀಯ ಕಾರ್ಯಕಾರಣಿ ಸದಸ್ಯ ಎ.ಬಿ.ಹೊಸಮನಿ ಮಾತನಾಡಿ, ಕೊಲೆ ಪ್ರಕರಣ ದಾಖಲಾಗಿ ಎರಡು ವಾರ ಕಳೆದರೂ ಇನ್ನೂ ಆರೋಪಿಗಳನ್ನು ಬಂಧಿಸಿಲ್ಲ. ಈ ಕೂಡಲೇ ಪೊಲೀಸ್ ಅಧಿಕಾರಿಗಳು ಆರೋಪಿಗಳನ್ನು ಬಂಧಿಸಿ, ಕುಟುಂಬಕ್ಕೆ ಸೂಕ್ತ ಪರಿಹಾರ ಹಾಗೂ ಸರಕಾರಿ ಉದ್ಯೋಗ ನೀಡಬೇಕು ಎಂದು ಆಗ್ರಹಿಸಿದರು.
ಧರಣಿಯಲ್ಲಿ ಪಾಂಡುರಂಗ ಎಂ.ಕೋಟ್ರೆ, ರಾಜಕುಮಾರ ಪಿ.ನಡೆಗೇರಿ, ಶಿವಕುಮಾರ ಮುಡ್ಡಿ, ಮಿಲಿಂದ ಕಣಮಸ, ಮಹಾದೇವ ಅಣವರಕರ್, ರೇವಣಸಿದ್ದಪ್ಪ ಹುಳಿಪಲ್ಯ, ಭೀಮಾಶಂಕರ್ ಬಿ ಕಟ್ಟಿಸಂಗಾವಿ ಇದ್ದರು







