ಕಲಬುರಗಿ | ಕಾವಿ ಯಾರಪ್ಪನ ಆಸ್ತಿಯಲ್ಲ; ಆಂದೋಲಾ ಶ್ರೀ

ಕಲಬುರಗಿ : ಚಿತ್ತಾಪುರದ ದಂಡಗುಂಡ ಬಸವೇಶ್ವರ ಅಭಿವೃದ್ಧಿ ಟ್ರಸ್ಟ್ ಅನಧಿಕೃತವಾಗಿದೆ ಎಂದು ಹೇಳಿದ್ದಕ್ಕೆ ಕೆಲ ಟ್ರಸ್ಟಿಗಳು ಸುದ್ದಿಗೋಷ್ಠಿ ನಡೆಸಿ ಆಂದೋಲಾ ಸ್ವಾಮಿ ಕಾವಿಬಿಟ್ಟು ಖಾದಿ ತೊಡಲಿ ಎಂದು ಹೇಳಿದ್ದಾರೆ. 'ಕಾವಿ ಎನ್ನುವುದು ಅವರು ಕೊಟ್ಟ ಭಿಕ್ಷೆಯಲ್ಲ, ಇದು ಯಾರಪ್ಪನ ಆಸ್ತಿಯಲ್ಲ. ಹಾಗಾಗಿ ಯಾರದ್ದೋ ಆಸ್ತಿ ಕಬಳಿಸಲು ನಾನು ಬಿಡುವುದಿಲ್ಲ' ಎಂದು ಆಂದೋಲಾದ ಸಿದ್ದಲಿಂಗ ಸ್ವಾಮೀಜಿ ತಿರುಗೇಟು ನೀಡಿದ್ದಾರೆ.
ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಇತ್ತೀಚೆಗೆ ದಂಡಗುಂಡ ಬಸವಣ್ಣ ದೇವಸ್ಥಾನ ಅಭಿವೃದ್ಧಿ ಟ್ರಸ್ಟ್‌ನ ಮೊದಲ ಸ್ಥಾನ ದಲ್ಲಿದ್ದ ಶ್ರೀಗಳನ್ನು ಕುತಂತ್ರದಿಂದ ಹೊರದಬ್ಬಿದ್ದಾರೆ, ರಾಜ್ಯದ ಧಾರ್ಮಿಕ ದತ್ತಿ ಇಲಾಖೆಯ ವ್ಯಾಪ್ತಿಯಲ್ಲಿರುವ ಅಧಿಸೂಚಿತ ಸಂಸ್ಥೆಗಳ ಹೆಸರಿನಲ್ಲಿ ಅನಧಿಕೃತವಾಗಿ ಭಕ್ತಾದಿಗಳಿಂದ ಹಣ ವಸೂಲಿ ಮಾಡುತ್ತಿರುವುದು ನಿಲ್ಲಿಸಲು ಆದೇಶ ಹೊರಡಿಸಿದ್ದರೂ ಜಿಲ್ಲಾಧಿಕಾರಿಗಳು ಯಾಕೆ ಸುಮ್ಮನೆ ಕುಳಿತಿದ್ದಾರೆ, ಹೈಕೋರ್ಟ್ ಆದೇಶವನ್ನು ಪಾಲಿಸದೆ ಕಣ್ಮುಚ್ಚಿ ಕುಳಿತಿದ್ದು ಸಾಕು. ಈಗ ಜಿಲ್ಲಾಧಿಕಾರಿಗಳು ಯಾರ ಒತ್ತಡಕ್ಕೆ ಮಣಿಯದೆ ಕಾನೂನು ಪ್ರವೃತ್ತರಾಗಬೇಕೆಂದು ಮನವಿ ಮಾಡಿದರು.
ಟ್ರಸ್ಟ್‌ನ್ ವೈಟ್ ಕಾಲರ್ ಲೀಡರ್ ಅವರು ಟ್ರಸ್ಟ್‌ನ ಲೆಕ್ಕಪತ್ರವನ್ನು ಪ್ರತಿವರ್ಷ ಅಡಿಟ್ ಮಾಡುತ್ತೇವೆಂದು ಹೇಳಿದ್ದಾರೆ, ಅದು ತಾವು ಮತ್ತು ಇತರರು ಹೇಳಿದಂತೆ ಅಡಿಟ್ ಮಾಡುವ ಸಿಎ(ಚಾರ್ಟೆಡ್ ಅಕೌಂಟೆಂಟ್) ಅವರಿಂದ ಅಡಿಟ್ ಮಾಡಿಸಿದ್ದಾರೆ, ಇದು ಸಂಪೂರ್ಣ ಅನಧೀಕೃತವಾಗಿದೆ. ಜಿಎ(ಮಹಾಲೇಖ ಪಾಲಕರಿಂದ) ಅವರಿಂದ ಅಡಿಟ್ ಮಾಡಿಸಲಿ ಎಂದು ಸವಾಲು ಎಸೆದಿದ್ದಾರೆ.
ಟ್ರಸ್ಟಿನಲ್ಲಿರುವ ವೈಟ್ ಕಾಲರ್‌ಗಳು ಸಚಿವ ಪ್ರಿಯಾಂಕ್ ಖರ್ಗೆ ವಿರುದ್ಧ ಪತ್ರಿಕಾಗೋಷ್ಠಿ ಮಾಡಿದರೆ ಭಾರೀ ಮಾತನಾಡಿದ್ದೀರಿ ಸ್ವಾಮಿಜಿ ಎಂದು ಹೇಳುವರು, ಇದೀಗ ಅದೇ ಅನಧಿಕೃತವಾಗಿರುವ ಟ್ರಸ್ಟ್ ಬಗ್ಗೆ ಸವಾಲು ಎತ್ತಿದರೆ ಕಾವಿ ಬಿಟ್ಟು ಖಾದಿ ಹಾಕಿ ಅಂತೀರಾ? ಗ್ರಾಮದ ಜನರಿಗೆ ಪಾಳೇಗಾರಿಕೆಯಿಂದ ಹೆದರಿಸಿ ಸುಮ್ಮನಾಗಿಸಿದಂತೆ ನನ್ನನ್ನು ಸುಮ್ಮನಾಗಿಸಲು ಸಾಧ್ಯವಿಲ್ಲ, ಟ್ರಸ್ಟ್ ಅನಧಿಕೃತವೇ ಆಗಿದೆ ಎಂದು ಸಾಕಷ್ಟು ದಾಖಲೆಗಳು ಇವೆ ಎಂದರು.
ಯಾವುದೇ ಸಂದರ್ಭದಲ್ಲಿ ಮಾತನಾಡುವಾಗ ಸ್ವಾಮಿಗಳ ಬಗ್ಗೆ ಗೌರವದಿಂದ ಮಾತನಾಡುವುದನ್ನು ಕಲಿಯಬೇಕು ಏಕವಚನದಲ್ಲಿ ಮಾತನಾಡಿದರೆ ಮುಂದಿನ ಪರಿಣಾಮ ನೆಟ್ಟಗಿರಲ್ಲ, ಇದು ಜನರೇ ತೋರಿಸುತ್ತಾರೆಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಸಂಗನಬಸವ ಶಿವಾಚಾರ್ಯರು, ರೇವಣಸಿದ್ದ ಶಿವಾಚಾರ್ಯರು, ಚನ್ನವೀರ ಮಹಾಸ್ವಾಮಿ, ಗುರುಮುತ್ಯ ನದಿ ಸಿನ್ನೂರ, ಗುರುಶಾಂತ, ಸಂತೋಷ, ರಾಕೇಶ ಜಮಾದಾರ ಸೇರಿದಂತೆ ಮತ್ತಿತರರು ಇದ್ದರು.







