ಕಲಬುರಗಿ | ದೇವಲ ಗಾಣಗಾಪುರದ ಸಮಗ್ರ ಅಭಿವೃದ್ಧಿಗೆ 200 ಕೋಟಿ ರೂ. ಪ್ಯಾಕೇಜ್ ಘೋಷಣೆಗೆ ಆಗ್ರಹಿಸಿ ಧರಣಿ ಸತ್ಯಾಗ್ರಹ

ಕಲಬುರಗಿ : ಅಫಜಲಪುರ ತಾಲ್ಲೂಕಿನ ದೇವಲ ಗಾಣಗಾಪುರ ಗ್ರಾಮ ಮತ್ತು ದಕ್ಷಿಣ ಭಾರತದ ಪುಣ್ಯ ಕ್ಷೇತ್ರ ಎಂದು ಕರೆಯಲ್ಪಟ್ಟಿರುವ ದತ್ತಾತ್ರೇಯ ದೇವಸ್ಥಾನದ ಸಮಗ್ರ ಅಭಿವೃದ್ಧಿಗಾಗಿ ಕೇಂದ್ರ ಮತ್ತು ರಾಜ್ಯ ಸರಕಾರಗಳು 200 ಕೋಟಿ ರೂ ಪ್ಯಾಕೇಜ್ ಘೋಷಣೆಗೆ ಆಗ್ರಹಿಸಿ, ಜೆಡಿಎಸ್ ನಾಯಕ ಶಿವಕುಮಾರ್ ನಾಟಿಕಾರ್ ನೇತೃತ್ವದಲ್ಲಿ ಗುರುವಾರದಿಂದ ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹ ಆರಂಭಿಸಿದ್ದಾರೆ.
ಸುಪ್ರಸಿದ್ದ ಶ್ರೀಕ್ಷೇತ್ರ ದೇವಲ ಗಾಣಗಾಪುರಕ್ಕೆ ಸುದೀರ್ಘವಾದ ಪೌರಾಣಿಕ ಮತ್ತು ಐತಿಹಾಸಿಕ ಹಿನ್ನೆಲೆ ಇದೆ. ಭೀಮಾ ಮತ್ತು ಅಮರ್ಜಾ ನದಿಗಳ ಪವಿತ್ರ ಸಂಗಮ ಸ್ಥಳದಲ್ಲಿ ಶ್ರೀ ದತ್ತಾತ್ರೇಯ ದೇವಸ್ಥಾನದಲ್ಲಿ ನಿರ್ಗುಣ ಪಾದುಕಗಳ ದರ್ಶನ ಭಾಗ್ಯದಿಂದ ಕೃತಾರ್ಥರಾಗಲು ಕರ್ನಾಟಕ, ಮಹಾರಾಷ್ಟ್ರ, ತೆಲಂಗಾಣ ಮತ್ತು ಆಂಧ್ರಪ್ರದೇಶ ಸೇರಿದಂತೆ ದೇಶ-ವಿದೇಶಗಳ ಸಾವಿರಾರು ಭಕ್ತರು ಪ್ರತಿನಿತ್ಯ ದೇವಾಲಯಕ್ಕೆ ಭೇಟಿಕೊಟ್ಟು ತಮ್ಮ ಹರಕೆ ತೀರಿಸುತ್ತಾರೆ.
ಶ್ರೀ ದತ್ತಾತ್ರೇಯ ಮಹಾರಾಜರ ದೇವಸ್ಥಾನ ಮತ್ತು ಸಂಗಮದಲ್ಲಿ ನೂತನ ವಿನ್ಯಾಸದಲ್ಲಿ ದೇವಸ್ಥಾನ ನಿರ್ಮಾಣ ಮಾಡಬೇಕು, ನದಿಯಿಂದ ದೇವಸ್ಥಾನಕ್ಕೆ ಘಾಟ್ ನಿರ್ಮಾಣ, ಉತ್ತಮ ರಸ್ತೆಗಳ ನಿರ್ಮಾಣ, ಪಾರ್ಕಿಂಗ್, ಯಾತ್ರಿ ನಿವಾಸ ಮತ್ತು ಆಧುನಿಕ ಮಾದರಿಯ ಅನ್ನ ಪ್ರಸಾದ ನಿಲಯ, ಸುಸಜ್ಜಿತ ಶೌಚಾಲಯ ಮತ್ತು ಸ್ನಾನ ಗೃಹಗಳು, ಶುದ್ಧ ಕುಡಿಯುವ ನೀರು, ಸುರಕ್ಷತಾ ದೃಷ್ಟಿಯಿಂದ ಅಗತ್ಯ ಸ್ಥಳಗಳಲ್ಲಿ ಸಿಸಿಟಿವಿ ಕ್ಯಾಮರಾ ಅಳವಡಿಸುವುದು ಅತ್ಯವಶ್ಯಕವಾಗಿದೆ. ಹಾಗಾಗಿ ಎಲ್ಲಾ ಧರ್ಮೀಯರ ಪಾಲಿಗೆ ಅತ್ಯಂತ ಪವಿತ್ರ ಧಾರ್ಮಿಕ ಕ್ಷೇತ್ರವಾಗಿರುವ ದೇವಲ ಗಾಣಗಾಪುರ ಗ್ರಾಮದ ಸಮಗ್ರ ಅಭಿವೃದ್ಧಿಗೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ರೂ. 200 ಕೋಟಿ ರೂ.ಗಳ ಪ್ಯಾಕೇಜ್ ಘೋಷಿಸಬೇಕೆಂದು ಪ್ರತಿಭಟನಾನಿರತರು ಒತ್ತಾಯಿಸಿದರು.
ಶಿವಕುಮಾರ್ ನಾಟಿಕಾರ ಮಾತನಾಡಿದರು.
ಈ ಸಂದರ್ಭದಲ್ಲಿ ಚಿಣಮಗೇರಿ, ಮಾಶಾಳ, ಆಲಮೇಲ, ಕುಮಸಗಿ, ನೀಲೂರ, ಜೋಗೂರ ಶ್ರೀಗಳು ಪಾಲ್ಗೊಂಡಿದ್ದಲ್ಲದೆ, ಮುಖಂಡರಾದ ರಾಜು ಉಕ್ಕಲಿ, ರಾಜೇಂದ್ರ ಸರದಾರ್ ಸೇರಿದಂತೆ ಹಲವಾರು ಇದ್ದರು.







