ಕಲಬುರಗಿ | ಹಿಂದುಳಿದ ವರ್ಗಗಳ ಆಯೋಗದ ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆ ಲೋಪವಾಗದಂತೆ ಎಚ್ಚರಿಕೆ ವಹಿಸಿ: ಜಿಲ್ಲಾಧಿಕಾರಿ

ಕಲಬುರಗಿ: ಹಿಂದುಳಿದ ವರ್ಗಗಳ ಆಯೋಗದ ವತಿಯಿಂದ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ಕಾರ್ಯಕ್ಕೆ ಉಪ ವಿಭಾಗಾಧಿಕಾರಿಗಳು, ತಾಲ್ಲೂಕು ಮಟ್ಟದಲ್ಲಿ ತಹಶೀಲ್ದಾರ್‌ಗಳು, ಸಿ.ಡಿ.ಪಿ.ಓ. ಮತ್ತು ಇ.ಓ.ಗಳು ಸಮೀಕ್ಷೆ ಕಾರ್ಯದಲ್ಲಿ ಯಾವುದೇ ರೀತಿ ಲೋಪವಾಗದಂತೆ ಎಚ್ಚರಿಕೆ ವಹಿಸಿ ಸಮೀಕ್ಷೆ ಕಾರ್ಯಪೂರ್ಣಗೊಳಿಸಬೇಕು ಎಂದು ಜಿಲ್ಲಾಧಿಕಾರಿ ಬಿ.ಫೌಝಿಯಾ ತರನ್ನುಮ್ ಹೇಳಿದ್ದಾರೆ.
ಸೋಮವಾರಂದು ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಕರ್ನಾಟಕ ರಾಜ್ಯದ ಹಿಂದುಳಿದ ವರ್ಗಗಳ ಆಯೋಗದ ವತಿಯಿಂದ ಕರ್ನಾಟಕ ರಾಜ್ಯ ನಾಗರಿಕರ ಮತ್ತು ಸಾಮಾಜಿಕ ಮತ್ತು ಶೈಕ್ಷಣಿಕ ಸ್ಥಿತಿಗತಿಗಳ ಬಗ್ಗೆ ಸಮೀಕ್ಷೆ ಕಾರ್ಯವನ್ನು ನಡೆಸುವ ಕುರಿತು ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಕಲಬುರಗಿ ವಿದ್ಯುತ್ ನಿಗಮ ನಿಯಮಿತ, ಕಲಬುರಗಿ ವತಿಯಿಂದ ಪ್ರತಿ ಮನೆಯ ಲಿಸ್ಟಿಂಗ್ ಕಾರ್ಯವನ್ನು ಮೀಟರ್ ರೀಡರ್‌ಗಳಿಂದ ಮಾಡಲಾಗುತ್ತಿದ್ದು, ಸೆ.5 ರೊಳಗಾಗಿ ಮಾಹಿತಿ ನೀಡಬೇಕೆಂದು ಜೆಸ್ಕಾಂ ಅಧಿಕಾರಿ ವಿಶ್ವನಾಥ ರೆಡ್ಡಿ ಅವರಿಗೆ ನಿರ್ದೇಶನ ನೀಡಿದರು.
ಗಣತಿದಾರರಿಗೆ ಹಾಗೂ ಮೇಲ್ವಿಚಾರಕರಿಗೆ 2 ಹಂತದ ತರಬೇತಿಯನ್ನು ನೀಡುವಂತೆ ಸೂಚಿಸಲಾಯಿತು. ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದಲ್ಲಿ ತಾಂತ್ರಿಕ ಪರಿಣಿತರ ಸಮಿತಿಯನ್ನು ರಚಿಸಲು ಸೂಚಿಸಿದರು.
ಸಮೀಕ್ಷೆಯ ಮೇಲ್ವಿಚಾರಣೆಗೆ ಶಾಲಾ ಮತ್ತು ಶಿಕ್ಷಣ ಇಲಾಖೆಯ ವಿವಿಧ ಅಧಿಕಾರಿಗಳನ್ನು ನೋಡಲ್ ಅಧಿಕಾರಿಗಳಾಗಿ ನೇಮಿಸಲು ಸೂಚಿಸಿದರು. ಕಲಬುರಗಿ ನಗರದಲ್ಲಿ ಸಮೀಕ್ಷೆ ಕಾರ್ಯವನ್ನು ಮಹಾನಗರಪಾಲಿಕೆ ಅಧಿಕಾರಿ ಹಾಗೂ ಸಿಬ್ಬಂದಿಗಳ ಸಹಯೋಗದೊಂದಿಗೆ ಹಾಗೂ ಜಿಲ್ಲೆಯ ಇತರೆ ನಗರ ಪ್ರದೇಶಗಳಲ್ಲಿ ನಗರಸಭೆ/ ಪುರಸಭೆ/ಪಟ್ಟಣ ಪಂಚಾಯತ್‌ಗಳ ಅಧಿಕಾರಿ ಹಾಗೂ ಸಿಬ್ಬಂದಿಗಳ ಸಹಯೋಗದೊಂದಿಗೆ ನಿಗಧಿತ ಅವಧಿಯೊಳಗೆ ಸಮೀಕ್ಷೆ ಪೂರ್ಣಗೊಳಿಸಲು ಹೇಳಿದರು.
ತಾಲ್ಲೂಕು ಮಟ್ಟದಲ್ಲಿ ಸಂಬಂಧಪಟ್ಟ ಉಪವಿಭಾಗ ಅಧಿಕಾರಿಗಳ ಅಧ್ಯಕ್ಷತೆಯಲ್ಲಿ ತಾಲ್ಲೂಕು ಮಟ್ಟದ ಸಮನ್ವಯ ಸಮಿತಿಯನ್ನು ರಚಿಸಲಾಗಿದ್ದು, ಸಂಬಂದಪಟ್ಟ ತಹಶೀಲ್ದಾರರು, ಕಾರ್ಯನಿರ್ವಾಹಕ ಅಧಿಕಾರಿಗಳು, ತಾಲ್ಲೂಕು ಪಂಚಾಯತ್, ಮುಖ್ಯಾಧಿಕಾರಿಗಳು ಪುರಸಭೆ, ಕ್ಷೇತ್ರ ಶಿಕ್ಷಣಾಧಿಕಾರಿಗಳು, ಸಹಾಯಕ ನಿರ್ದೇಶಕರು, ಮಕ್ಕಳ ಮತ್ತು ಅಭಿವೃದ್ದಿ ಇಲಾಖೆ, ಹಾಗೂ ತಾಲ್ಲೂಕು ಕಲ್ಯಾಣಾಧಿಕಾರಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಅವರುಗಳು ತಾಲ್ಲೂಕು ಮಟ್ಟದಲ್ಲಿ ಸಮೀಕ್ಷೆ ಕಾರ್ಯವನ್ನು ನಡೆಸುವ ಜವಾಬ್ದಾರಿಯನ್ನು ಹೊಂದಿರುತ್ತಾರೆ. ಅಂತರ್ಜಾಲ ಸಂಪರ್ಕವಿಲ್ಲದ ಅರಣ್ಯ ಹಾಗೂ ಕಾಡಂಚಿನ ಮತ್ತು ವಿದ್ಯುತ್ ಸಂಪರ್ಕವಿಲ್ಲದ ಪ್ರದೇಶಗಳಲ್ಲಿ ಸಮೀಕ್ಷೆ ಕಾರ್ಯವನ್ನು ಸಂಬಂಧಪಟ್ಟ ಗ್ರಾಮ ಆಡಳಿತಾಧಿಕಾರಿಗಳಿಂದ ಸಮೀಕ್ಷೆ ನಡೆಸಲಾಗುತ್ತದೆ ಎಂದರು.
ಜೆಸ್ಕಾಂ ಕಲಬುರಗಿ ವತಿಯಿಂದ ಹೌಸ್ ಲಿಸ್ಟಿಂಗ್ ನಂತರ 100 ರಿಂದ 150 ಮನೆಗಳನ್ನು ಒಳಗೊಂಡ ಎನುಮರೇಷನ್ ಬ್ಲಾಕ್ ಗಳನ್ನು ರಚಿಸಿ ಪ್ರತಿಯೊಂದಕ್ಕೂ ಒಬ್ಬೊಬ್ಬ ಗಣತಿದಾರರನ್ನು ನೇಮಿಸಲಾಗುವುದು. ಪ್ರತಿ 20 ಬ್ಲಾಕ್ ಗಳಿಗೆ ಒಬ್ಬ ಮೇಲ್ವಿಚಾರಕರನ್ನು ನೇಮಿಸಲಾಗುವುದು. ಸಮೀಕ್ಷೆಗೆ ನಿಯೋಜಿಸಿದ ಯಾವ ಅಧಿಕಾರಿ ಹಾಗೂ ಸಿಬ್ಬಂದಿ ನಿರ್ಲಕ್ಷ್ಯತೆ ತೋರದೇ ನಿಗಧಿತ ಅವಧಿಯೊಳಗೆ ಸಮೀಕ್ಷೆ ಕಾರ್ಯವನ್ನು ಪೂರ್ಣಗೊಳಿಸಲು ಸೂಚಿಸಲಾಯಿತು.
ಸಮೀಕ್ಷೆ ಕಾರ್ಯದಲ್ಲಿ ಕರ್ತವ್ಯ ನಿರ್ಲಕ್ಷ್ಯ ತೋರಿದ ಯಾವುದೇ ಅಧಿಕಾರಿ/ ಸಿಬ್ಬಂದಿಯ ವಿರುದ್ದ ಸೂಕ್ತ ಶಿಸ್ತು ಕ್ರಮ ಜರುಗಿಸಲಾಗುವುದೆಂದು ಎಚ್ಚರಿಕೆ ನೀಡಿದರು.
ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ವತಿಯಿಂದ ಸೆ.20 ರಿಂದ ಆ.7 ರ ವರೆಗೆ ನಡೆಸುವ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯ ವಿಧಾನವನ್ನು ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ಸೋಮಶೇಖರ ವೈ. ಅವರು ವಿವರಿಸಿದರು.
ಸಮೀಕ್ಷಾ ಕಾರ್ಯ ನಿರ್ವಹಿಸುವ ಸಿಬ್ಬಂದಿಗಳಿಗೆ ಮಾಸ್ಟರ್ ಟ್ರೇನರ್ಸ್‍ಗಳಿಂದ ತರಬೇತಿ ನೀಡಿ ಸಮೀಕ್ಷೆ ಕಾರ್ಯದಲ್ಲಿ ಯಾವುದೇ ರೀತಿಯ ಸಮಸ್ಯೆ ಆಗದಂತೆ ಕ್ರಮವಹಿಸಿ ಸಮೀಕ್ಷೆ ಕಾರ್ಯಗಳನ್ನು ಪೂರ್ಣಗೊಳಿಸಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಸೂರ್ಯಕಾಂತ ಮದಾನೆ, ಅಪರ ಜಿಲ್ಲಾಧಿಕಾರಿಗಳಾದ ರಾಯಪ್ಪ ಹುಣಸಗಿ ಮಾತನಾಡಿದರು.
ಸಭೆಯಲ್ಲಿ ಜಿಲ್ಲಾ ಪಂಚಾಯತ್ ಮುಖ್ಯಕಾರ್ಯನಿರ್ವಹಣಾಧಿಕಾರಿ ಭಂವರ್ ಸಿಂಗ್ ಮೀನಾ, ಕಲಬುರಗಿ ಸಹಾಯಕ ಆಯುಕ್ತೆ ಸಾಹಿತ್ಯ ಆಲದಕಟ್ಟೆ, ಜಿಲ್ಲಾ ಪಂಚಾಯತ್ ಉಪಕಾರ್ಯದರ್ಶಿ ಲಕ್ಷ್ಮಣ ಶೃಂಗೇರಿ, ಡಿಯುಡಿಸಿ ಜಿಲ್ಲಾ ಯೋಜನಾಧಿಕಾರಿ ಮುನ್ನಾವರ್ ದೌಲಾ, ಕಲಬುರಗಿ ವಲಯ ಅಧೀಕ್ಷಕ ಅಭಿಯಂತರರಾದ ಖಂಡೆಪ್ಪ, ಜಿಲ್ಲಾ ಸಮಾಜ ಕಲ್ಯಾಣಾಧಿಕಾರಿ ಜಂಟಿ ನಿರ್ದೇಶಕಿ ಪ್ರೀತಿ ದೊಡ್ಡಮನಿ, ಗ್ರೇಡ್-1 ತಹಶೀಲ್ ಆನಂದ ಶೀಲ, ತಾಲೂಕಿನ ತಹಶೀಲ್ದಾರರು, ಇ.ಓ.ಗಳು ಸೇರಿದಂತೆ ಜಿಲ್ಲಾಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.







