ಕಲಬುರಗಿ | ರಸ್ತೆ ಅಪಘಾತ, ಆಕಸ್ಮಿಕ ಪ್ರಕರಣಗಳಿದ್ದಾಗ ಚಿಕಿತ್ಸೆಗೆ ಮೊದಲಾದ್ಯತೆ ನೀಡಿ: ಡಿಸಿ ಬಿ.ಫೌಝಿಯಾ ತರನ್ನುಮ್

ಕಲಬುರಗಿ: ರಸ್ತೆ ಅಪಘಾತ ಪ್ರಕರಣಗಳು ಸೇರಿದಂತೆ ಆಕಸ್ಮಿತ ಅಥವಾ ಪ್ರೇರಿತ ಸುಡುವಿಕೆ, ಪ್ರೇರಿತ ಗುಂಡೆಟುಗಳು, ವಿಷಪ್ರಾಶನ, ಕ್ರಿಮಿನಲ್ ಹಲ್ಲೆ ಹಾಗೂ ವೈದ್ಯಕೀಯ ಕಾನೂನು ಪ್ರಕರಣಗಳು ಸಂಭವಿಸಿದ ಸಂದರ್ಭದಲ್ಲಿ ಚಿಕಿತ್ಸೆಗೆ ಬರುವ ರೋಗಿಗೆ ಮುಂಗಡ ಹಣ ಕಟ್ಟುವಂತೆ ಒತ್ತಾಯಿಸದೆ ಆದ್ಯತೆ ಮೇಲೆ ಮೊದಲು ಚಿಕಿತ್ಸೆ ನೀಡಬೇಕು ಎಂದು ಕೆ.ಪಿ.ಎಮ್.ಇ. ಕಾಯ್ದೆಯಡಿ ಜಿಲ್ಲೆಯಲ್ಲಿ ನೋಂದಾಯಿತ ಎಲ್ಲಾ ಖಾಸಗಿ ಆರೋಗ್ಯ ಸಂಸ್ಥೆಗಳಿಗೆ ಡಿಸಿ ಬಿ.ಫೌಝಿಯಾ ತರನ್ನುಮ್ ಸೂಚನೆ ನೀಡಿದ್ದಾರೆ.
ಒಂದು ವೇಳೆ ಈ ನಿಯಮವನ್ನು ಉಲ್ಲಂಘಿಸಿದರೆ ಅಂತಹ ಖಾಸಗಿ ಆರೋಗ್ಯ ಸಂಸ್ಥೆಗಳ ಮೇಲೆ ಕರ್ನಾಟಕ ಖಾಸಗಿ ವೈದ್ಯಕೀಯ ಸಂಸ್ಥೆಗಳ ಕಾಯ್ದೆ 2007ರ ಸೆಕ್ಷನ್ 19(5) ಅಡಿಯಲ್ಲಿ 1 ಲಕ್ಷ ರೂ. ವರೆಗೆ ದಂಡ ವಿಧಿಸಲಾಗುವುದು ಎಂದು ಕೆ.ಪಿ.ಎಂ.ಇ.ಕಾಯ್ದೆ ನೋಂದಣಿ ಮತ್ತು ಕುಂದು ಕೊರತೆ ಪ್ರಾಧಿಕಾರದ ಅಧ್ಯಕ್ಷರಾಗಿರುವ ಬಿ.ಫೌಝಿಯಾ ತರನ್ನುಮ್ ತಿಳಿಸಿದ್ದಾರೆ.
ಹಣಕ್ಕೆ ಒತ್ತಾಯಿಸಿ ಚಿಕಿತ್ಸೆ ನೀಡದ ಪ್ರಕರಣಗಳ ಕುರಿತಂತೆ ಸಾರ್ವಜನಿಕರು ತಮ್ಮ ದೂರನ್ನು ಜಿಲ್ಲಾಧಿಕಾರಿಗಳ ಕಚೇರಿಗೆ ಸಲ್ಲಿಸಬಹುದಾಗಿದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.





