ಕಲಬುರಗಿ | ಕಬ್ಬಿಗೆ ನ್ಯಾಯಯುತ, ಲಾಭದಾಯಕ ಬೆಲೆ (FRP) ಹೊರತುಪಡಿಸಿ ರಾಜ್ಯ ಸರಕಾರದಿಂದ 1,500 ರೂ. ಬೆಲೆ ನಿಗದಿಪಡಿಸಲು ಸಿಎಂಗೆ ಮನವಿ

ಕಲಬುರಗಿ: ಕಲ್ಯಾಣ ಕರ್ನಾಟಕ ಉತ್ಸವದಲ್ಲಿ ಭಾಗವಹಿಸಲು ಆಗಮಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ರಾಜ್ಯ ಕಬ್ಬು ಬೆಳೆಗಾರರ ಸಂಘ ಮತ್ತು ಅಫಜಲಪುರ ತಾಲೂಕು ಕಬ್ಬು ಬೆಳೆಗಾರರ ಸಂಘದ ಪದಾಧಿಕಾರಿಗಳು ಭೇಟಿಯಾಗಿ ಕಬ್ಬು ಬೆಳೆಗಾರರ ಸಮಸ್ಯೆಗಳ ಕುರಿತು ಮನವಿ ಪತ್ರ ಸಲ್ಲಿಸಿದರು.
ರಾಜ್ಯ ಕಬ್ಬು ಬೆಳೆಗಾರರ ಸಂಘದ ಜಿಲ್ಲಾ ಅಧ್ಯಕ್ಷ ರಮೇಶ್ ಹೂಗಾರ್ ಮತ್ತು ಜಿಲ್ಲಾ ಕಾರ್ಯದರ್ಶಿ ಭಾಗಣ್ಣ ಕುಂಬಾರ್ ಮನವಿ ಸಲ್ಲಿಸಿ, 2025-26ನೇ ಸಾಲಿಗೆ ಕೇಂದ್ರ ಸರ್ಕಾರ ನಿಗದಿಪಡಿಸುವ ಎಫ್‌ಆರ್‌ಪಿ (FRP) ಬೆಲೆಯ ಹೊರತಾಗಿ, ರಾಜ್ಯ ಸರ್ಕಾರವು ಪ್ರತಿ ಟನ್ ಕಬ್ಬಿಗೆ 1,500 ರೂ. ಬೆಲೆ ನಿಗದಿ ಮಾಡಬೇಕೆಂದು ಒತ್ತಾಯಿಸಿದರು.
ಇದೇ ವೇಳೆ, ಅತಿವೃಷ್ಟಿಯಿಂದ ಹಾನಿಗೊಳಗಾದ ಬೆಳೆಗಳಿಗೆ ಪರಿಹಾರವನ್ನು ತ್ವರಿತವಾಗಿ ರೈತರ ಖಾತೆಗೆ ಜಮಾ ಮಾಡಬೇಕು. ನೆರೆಹಾವಳಿಯಿಂದ ಬಾಧಿತರಾದ ರೈತರ ಸಾಲಗಳನ್ನು ಸಂಪೂರ್ಣ ಮನ್ನಾ ಮಾಡಬೇಕು. ಈ ಬಾರಿಯ ಮಳೆಗಾಲ ಮುಗಿದ ತಕ್ಷಣ ಕೆರೆಗಳಿಗೆ ಹೂಳೆತ್ತಿ ನೀರು ತುಂಬಿಸುವ ಕಾರ್ಯ ಕೈಗೊಳ್ಳಬೇಕು ಎಂದು ಮನವಿಯಲ್ಲಿ ಉಲ್ಲೇಖಿಸಲಾಗಿದೆ.
ಈ ಸಂದರ್ಭದಲ್ಲಿ ರೇವಣಸಿದ್ದಯ್ಯ ಮಠ, ಅನಿಲ್ ಪಾಟೀಲ್, ಮಲ್ಲುಗೌಡ ಮಾಲಿ ಪಾಟೀಲ್ ಕಲ್ಲೂರು ಸೇರಿದಂತೆ ಅನೇಕ ಕಬ್ಬು ಬೆಳೆಗಾರರು ಉಪಸ್ಥಿತರಿದ್ದರು.





