ಕಲಬುರಗಿ | ಈಶಾನ್ಯ ಶಿಕ್ಷಕರ ಕ್ಷೇತ್ರದ ಮತದಾರರ ಪಟ್ಟಿ ಪರಿಷ್ಕರಣೆಗೆ ಅ.27, 30, ನ.3ರಂದು ಮಿಂಚಿನ ನೋಂದಣಿ ಅಭಿಯಾನ: ಝಹೀರಾ ನಸೀಮ್

ಕಲಬುರಗಿ: ಈಶಾನ್ಯ ಶಿಕ್ಷಕರ ಕ್ಷೇತ್ರದ ಮತದಾರರ ಪಟ್ಟಿ ಪರಿಷ್ಕರಣೆ ಭಾಗವಾಗಿ ಅ. 27 ಮತ್ತು 30 ಹಾಗೂ ನ. 3ರಂದು ಬೆಳಿಗ್ಗೆ ರಿಂದ ಸಂಜೆ 5.30 ಗಂಟೆ ವರೆಗೆ ವಿಶೇಷ ಮಿಂಚಿನ ನೋಂದಣಿ ಅಭಿಯಾನ ಕ್ಷೇತ್ರದಾದ್ಯಂತ ಹಮ್ಮಿಕೊಳ್ಳಲಾಗಿದೆ ಎಂದು ಕ್ಷೇತ್ರದ ಚುನಾವಣಾಧಿಕಾರಿಯಾಗಿರುವ ಪ್ರಾದೇಶಿಕ ಆಯುಕ್ತೆ ಝಹೀರಾ ನಸೀಮ್ ತಿಳಿಸಿದ್ದಾರೆ.
ನ.1ರ, 2025 ಅರ್ಹತಾ ದಿನಾಂಕಕ್ಕೆ ಅನ್ವಯಿಸುವಂತೆ ಮತದಾರರ ಪಟ್ಟಿ ಪರಿಷ್ಕರಣೆ ಕಾರ್ಯ ನಡೆದಿದ್ದು, ಅರ್ಹ ಮತದಾರರು ಪಟ್ಟಿಯಲ್ಲಿ ಹೆಸರು ಸೇರ್ಪಡೆಗೆ ನ.6 ಕೊನೆಯ ದಿನವಾಗಿದ್ದು, ಇದೂವರೆಗೆ ನಿರೀಕ್ಷಿತ ಮಟ್ಟದಲ್ಲಿ ಅರ್ಜಿ ಸ್ವೀಕೃತಿಯಾಗದರಿಂದ ಅರ್ಹ ಮತದಾರರು ಮತದಾರರ ಪಟ್ಟಿಯಿಂದ ಹೊರಗುಳಿಯಬಾರದು ಎಂಬ ಉದ್ದೇಶದಿಂದ ಈ ವಿಶೇಷ ನೊಂದಣಿ ಆಯೋಜಿಸಿದ್ದು, ಶಿಕ್ಷಕ ಮತದಾರರ ಇದರ ಲಾಭ ಪಡೆಯುವಂತೆ ಚುನಾವಣಾಧಿಕಾರಿಗಳು ತಿಳಿಸಿದ್ದಾರೆ.
ಕಲಬುರಗಿ ಮತ್ತು ಬಳ್ಳಾರಿ ಮಹಾನಗರ ಪಾಲಿಕೆ ಆಯುಕ್ತರು, ವಿಭಾಗದ ಎಲ್ಲಾ ಸಹಾಯಕ ಆಯುಕ್ತರು, ತಹಶೀಲ್ದಾರರು ಇದಕ್ಕಾಗಿ ತಾಲೂಕು ಮಟ್ಟದ ಎಲ್ಲಾ ಅಧಿಕಾರಿಗಳ ಸೇವೆ ಪಡೆಯಬೇಕು. ವಿಶೇಷವಾಗಿ ಉಪ ತಹಶೀಲ್ದಾರರು, ಪಿ.ಡಿ.ಓ, ಕಂದಾಯ ನಿರೀಕ್ಷಕರು, ಗ್ರಾಮ ಆಡಳಿತಾಧಿಕಾರಿಗಳು, ಗ್ರಾಮ ಸಹಾಯಕರು ಹಾಗೂ ಇತರ ಅಧಿಕಾರಿಗಳ ತಂಡಗಳು ಅರ್ಹ ಶಿಕ್ಷಣ ಸಂಸ್ಥೆಗಳನ್ನು ಗುರುತಿಸಿ ಇಲ್ಲಿ ನೋಂದಣಿಗಾಗಿ ಅರ್ಹರಿರುವ ಮತದಾರರನ್ನು ಕಚೇರಿ ಮುಖ್ಯಸ್ಥರ ಮುಖಾಂತರ ಸಂರ್ಪಕಿಸಬೇಕು. ಬೆಳಿಗ್ಗೆ 10-00 ಗಂಟೆಯಿಂದ ಸಾಯಂಕಾಲ 5-30 ರವರೆಗೆ ಬೀಡುಬಿಟ್ಟು ನಮೂನೆ-19 ರ ಅರ್ಜಿಯನ್ನು ಪೂರಕ ದಾಖಲೆಗಳೊಂದಿಗೆ ಸ್ವೀಕರಿಸಬೇಕೆಂದು ಮತದಾರರ ನೋಂದಣಾಧಿಕಾರಿಗಳು ತಿಳಿಸಿದ್ದಾರೆ.
ಇನ್ನು ಜಿಲ್ಲಾಧಿಕಾರಿಗಳು ಪ್ರತಿ ತಾಲೂಕಿಗೆ ಒಬ್ಬ ಜಿಲ್ಲಾ ಮಟ್ಟದ ಅಧಿಕಾರಿಯನ್ನು ವಿಶೇಷ ಮಿಂಚಿನ ನೋಂದಣಿ ಅಭಿಯಾನದ ಮೇಲುಸ್ತುವಾರಿಗೆ ನೋಡಲ್ ಅಧಿಕಾರಿಯೆಂದು ನೇಮಿಸಿ ಮಿಂಚಿನ ನೋಂದಣಿ ಅಭಿಯಾನದ ಯಶಸ್ವಿಯಾಗಿ ನೆರವೇರಿಸಬೇಕು ಎಂದು ಪ್ರಕಟಣೆಯಲ್ಲಿ ಝಹೀರಾ ನಸೀಮ್ ತಿಳಿಸಿದ್ದಾರೆ.







