ಕಲಬುರಗಿ| ಅಂತರ್ ರಾಜ್ಯ ಸುಲಿಗೆಕೋರನ ಬಂಧನ: 5 ಲಕ್ಷ ಮೌಲ್ಯದ ಸ್ವತ್ತು ವಶ

ಕಲಬುರಗಿ: ನಗರದ ಬ್ರಹ್ಮಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದ ಸುಲಿಗೆ ಪ್ರಕರಣಕ್ಕೆ ಸಂಬಂಧಿಸಿದಂತೆ ಅಂತರ್ ರಾಜ್ಯ ಸುಲಿಗೆಕೋರನೋರ್ವನನ್ನು ಬಂಧಿಸಿದ ಪೊಲೀಸರು, ಆತನ ಬಳಿಯಿದ್ದ 5 ಲಕ್ಷ ಮೌಲ್ಯದ 40 ಗ್ರಾಂ ಚಿನ್ನದ ಆಭರಣಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಬೆಂಗಳೂರು ದಕ್ಷಿಣದ ಕನಕಪುರ ತಾಲೂಕಿನ ಮುಳ್ಳಹಳ್ಳಿ ಗ್ರಾಮದ ಕಾರು ವ್ಯಾಪಾರಿ ಶಿವಕುಮಾರ್ ಅಲಿಯಾಸ್ ದಡಿಯಾಶಿವ(35) ಬಂಧಿತ ಆರೋಪಿ.
ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ನಗರ ಪೊಲೀಸ್ ಆಯುಕ್ತ ಡಾ.ಶರಣಪ್ಪ ಎಸ್.ಡಿ, 40 ರಿಂದ 50 ಪ್ರಕರಣಗಳಲ್ಲಿ ಭಾಗಿಯಾಗಿದ್ದ ಅಂತರ್ ರಾಜ್ಯ ಸುಲಿಗೆಕೋರ ಶಿವಕುಮಾರ್ ನಗರದ ಖಾದ್ರಿ ಚೌಕ್ ನಲ್ಲಿ ವಾಸವಿದ್ದ. ಈತ ಕಳೆದ ವರ್ಷ ಮೇ 6ರಂದು ಇಲ್ಲಿನ ವಿಠ್ಠಲ ನಗರದಲ್ಲಿರುವ ಮನೆಯೊಂದಕ್ಕೆ ರಾತ್ರಿ ವೇಳೆ ನುಗ್ಗಿ ಮಹಿಳೆಯ ಕುತ್ತಿಗೆಯಲ್ಲಿದ್ದ 40 ಗ್ರಾಂ ಚಿನ್ನದ ಸರ ಹಾಗೂ 30 ಗ್ರಾಂ ಬಿಲ್ವಾರ್ ಬಳೆಗಳನ್ನು ಕತ್ತರಿಸಿಕೊಂಡು ಪರಾರಿಯಾಗಿದ್ದ. ಈ ಕುರಿತಂತೆ ವಿಠ್ಠಲ ನಗರದ ನಿವಾಸಿ ಚಂದ್ರಕುಮಾರ್ ನಾಗಲೀಕರ ಅವರು ಬ್ರಹ್ಮಪುರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ದೂರಿನ ಮೇರೆಗೆ ತನಿಖೆ ನಡೆಸಿ, ಆರೋಪಿಯನ್ನು ಬಂಧಿಸಲಾಗಿದೆ ಎಂದರು.
ಕಳ್ಳತನವಾಗಿದ್ದ 70 ಗ್ರಾಂ. ಚಿನ್ನದ ಆಭರಣದಲ್ಲಿ 5 ಲಕ್ಷ ಮೌಲ್ಯದ 40 ಗ್ರಾಂ ಆಭರಣವನ್ನು ವಶಕ್ಕೆ ಪಡೆದಿದ್ದು, ಸದ್ಯ ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಈ ಕುರಿತು ತನಿಖೆ ನಡೆಯುತ್ತಿದೆ ಎಂದು ವಿವರಿಸಿದರು.
ಸುದ್ದಿಗೋಷ್ಠಿಯಲ್ಲಿ ಡಿಸಿಪಿ ಪ್ರವೀಣ್ ನಾಯಕ್, ಸಹಾಯಕ ಪೊಲೀಸ್ ಆಯುಕ್ತ ಶರಣಬಸಪ್ಪ ಸುಬೇದಾರ್ ಉಪಸ್ಥಿತರಿದ್ದರು.





