ಕಲಬುರಗಿ| 21ನೇ ವಾರ್ಷಿಕ ಇಂಡಿಯನ್ ರಾಯಲ್ ಅಕಾಡೆಮಿ ಪ್ರಶಸ್ತಿ ಪ್ರಕಟ

ಕಲಬುರಗಿ: ಇಂಡಿಯನ್ ರಾಯಲ್ ಅಕಾಡೆಮಿ ಆಫ್ ಆರ್ಟ್ ಅಂಡ್ ಕಲ್ಚರ್ ಸಂಸ್ಥೆಯು ಚಿತ್ರಕಲೆ, ರೇಖಾಚಿತ್ರ, ಗ್ರಾಫಿಕ್ಸ್, ಶಿಲ್ಪಕಲೆ, ಫೋಟೋಗ್ರಫಿ ಹಾಗೂ ಇತರೆ ದೃಶ್ಯಕಲೆ ವಿಭಾಗಗಳಲ್ಲಿನ 21ನೇ ವಾರ್ಷಿಕ ಇಂಡಿಯನ್ ರಾಯಲ್ ಅಕಾಡೆಮಿ ರಾಷ್ಟ್ರೀಯ ಪ್ರಶಸ್ತಿ 2025 ಅನ್ನು ಘೋಷಿಸಿದೆ.
ಭಾರತದ ಪ್ರಸಿದ್ಧ ಕಲಾವಿದರ ಹೆಸರಿನಲ್ಲಿ ನೀಡಲಾಗುವ ರೂ. 10,000 ನಗದು ಬಹುಮಾನಕ್ಕಾಗಿ ಐದು ಕಲಾವಿದರನ್ನು ಆಯ್ಕೆ ಮಾಡಲಾಗಿದೆ. ಅದರಲ್ಲಿ ಡಾ. ಡಿ. ಧರ್ಮಲಿಂಗ – ಚೆನ್ನೈ (ಎಂ.ಎಫ್. ಹುಸೇನ್ ಪ್ರಶಸ್ತಿ), ಶೇಖ್ ಅಹ್ಸನ್ – ಕಲಬುರಗಿ (ಎಸ್.ಹೆಚ್. ರಜಾ ಪ್ರಶಸ್ತಿ), ಕಮಲ್ ರಾಣಾ – ವಡೋದರಾ (ಎಫ್.ಎನ್. ಸೌಜಾ ಪ್ರಶಸ್ತಿ), ವಿಶ್ವೇಶ್ವರಯ್ಯ ಟಿ.ಎನ್. – ಕಲಬುರಗಿ (ಎ.ಎ. ಅಲ್ಮೇಲ್ಕರ್ ಪ್ರಶಸ್ತಿ), ಶಗುಫ್ತಾ ಖಾನಂ – ಲಕ್ನೋ (ಅಮೃತಾ ಶೇರ್ಗಿಲ್ ಪ್ರಶಸ್ತಿ) ಅವರು ವಿಜೇತರಾಗಿದ್ದಾರೆ.
ಇದಲ್ಲದೆ, ಇಪ್ಪತ್ತು ಅತ್ಯುತ್ತಮ ಕೃತಿಗಳಿಗೆ ರಾಯಲ್ ಗೋಲ್ಡ್ ಮೆಡಲ್ ಮತ್ತು ಇಪ್ಪತ್ತು ಕಲಾವಿದರಿಗೆ ರಾಯಲ್ ಮೆರಿಟ್ ಪ್ರಶಸ್ತಿ ನೀಡಲಾಗುತ್ತದೆ ಎಂದು ಅಕಾಡೆಮಿಯ ಅಧ್ಯಕ್ಷರಾದ ರೆಹಮಾನ್ ಪಟೇಲ್ ತಿಳಿಸಿದ್ದಾರೆ.
ಬಹುಮಾನ ವಿಜೇತರ ಕಲಾಕೃತಿಗಳ ಪ್ರದರ್ಶನ ಮತ್ತು ಪ್ರಶಸ್ತಿ ವಿತರಣೆ ಕಾರ್ಯಕ್ರಮ ಡಿಸೆಂಬರ್ 28 ರಂದು ಕಲಬುರಗಿಯ ಕನ್ನಡ ಭವನದಲ್ಲಿರುವ ಕಲಾ ಸೌಧ ಆರ್ಟ್ ಗ್ಯಾಲರಿಯಲ್ಲಿ ನಡೆಯಲಿದೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.





