ಕಲಬುರಗಿ 21ನೇ ಕನ್ನಡ ಸಾಹಿತ್ಯ ಸಮ್ಮೇಳನದ ಆಮಂತ್ರಣ ಪತ್ರಿಕೆ ಬಿಡುಗಡೆ

ಕಲಬುರಗಿ : ಫೆ.20 ಮತ್ತು 21 ರಂದು ತೊಗರಿ ನಾಡಿನಲ್ಲಿ ನಡೆಯುಲಿರುವ ಕಲಬುರಗಿ ಜಿಲ್ಲಾ 21 ನೇ ಕನ್ನಡ ಸಾಹಿತ್ಯ ಸಮ್ಮೇಳನದ ಆಮಂತ್ರಣ ಪತ್ರಿಕೆಯನ್ನು ಜಿಲ್ಲಾಧಿಕಾರಿ ಫೌಜಿಯಾ ಬಿ.ತರನ್ನೂಮ್ ಗುರುವಾರ ಬಿಡುಗಡೆ ಮಾಡಿದರು.
ಜಿಲ್ಲೆಯ ನೆಲ-ಜಲ, ಸಾಹಿತ್ಯ ಮತ್ತು ಸಂಸ್ಕೃತಿಯನ್ನು ಚರ್ಚಿಸುವಂಥ ದಿಸೆಯಲ್ಲಿ ಈ ಸಮ್ಮೇಳನ ಮಹತ್ವ ಪಡೆದಿದೆ. ಶರಣಬಸವೇಶ್ವರ ಸಂಸ್ಥಾನದ ಮಾತೋಶ್ರೀ ಡಾ.ದಾಕ್ಷಾಯಣಿ ಎಸ್.ಅಪ್ಪ ಅವರು ಸರ್ವಾಧ್ಯಕ್ಷರಾಗಿ ಆಯ್ಕೆ ಮಾಡಿದ್ದು, ಪರಿಷತ್ತು ತನ್ನ ಘನತೆಯನ್ನು ಹೆಚ್ಚಿಸಿಕೊಂಡಿದೆ ಎಂದು ಜಿಲ್ಲಾಧಿಕಾರಿ ಬಿ.ಫೌಜಿಯಾ ತರನ್ನುಮ್ ಅಭಿಪ್ರಾಯ ವ್ಯಕ್ತಪಡಿಸಿದರು.
ಭಾಷೆ, ಸಂಸ್ಕೃತಿ ನಮ್ಮ ಉಸಿರಾಗಿ ಕನ್ನಡ ಕಟ್ಟುವ ಕೆಲಸ ನಮ್ಮದಾಗಬೇಕು. ಇಂಥ ನುಡಿ ಜಾತ್ರೆಯಲ್ಲಿ ಕನ್ನಡ ಝೇಂಕಾರ ಮೊಳಗಬೇಕು. ಈ ಜಿಲ್ಲೆಯ ಜ್ವಲಂತ ಸಮಸ್ಯೆಗಳು ಹಾಗೂ ಇತಿಹಾಸದ ಮೇಲೆ ಬೆಳಕು ಚೆಲ್ಲುವಂತಾಗಬೇಕು ಎಂದು ಆಶಿಸಿದರು.
ಕಸಾಪ ಜಿಲ್ಲಾಧ್ಯಕ್ಷ ವಿಜಯಕುಮಾರ ಪಾಟೀಲ ತೇಗಲತಿಪ್ಪಿ ಮಾತನಾಡಿ, ಕನ್ನಡ ನಾಡು-ನುಡಿ, ಸಂಸ್ಕೃತಿ-ಪರಂಪರೆ ಬಿಂಬಿಸುವ ದಿಸೆಯಲ್ಲಿ ಈ ಸಮ್ಮೇಳನ ರೂಪಿಸಲಾಗುತ್ತಿದೆ. ಕನ್ನಡ ಬಳಕೆಗೆ ಮನೆಯೇ ಮೊದಲ ಪಾಠಶಾಲೆಯಾಗಬೇಕು. ಈ ಸಂದೇಶವನ್ನು ಇವತ್ತಿನ ಸಮಾಜಕ್ಕೆ ಮುಟ್ಟಿಸುವ ಸಮ್ಮೇಳನ ಇದಾಗಲಿದೆ ಎಂದು ಹೇಳಿದರು.
ಸಮ್ಮೇಳನದ ಸಿದ್ಧತೆ ಚುರುಕಾಗಿ ನಡೆದಿದ್ದು, ಕನ್ನಡ ಭವನದ ಶೃಂಗಾರಗೊಳ್ಳುತ್ತಿದೆ ಎಂದು ತಿಳಿಸಿದರು.
ಕಸಾಪ ಕಾರ್ಯದರ್ಶಿ ಶಿವರಾಜ ಅಂಡಗಿ, ರವೀಂದ್ರಕುಮಾರ ಭಂಟನಳ್ಳಿ, ಧರ್ಮರಾಜ ಜವಳಿ, ರಮೇಶ ಡಿ. ಬಡಿಗೇರ, ರಾಜೇಂದ್ರ ಮಾಡಬೂಳ, ಸೈಯದ್ ನಜಿರುದ್ದೀನ್ ಮುತ್ತವಲಿ, ನವಾಬ ಖಾನ್, ರವಿಕುಮಾರ ಶಹಾಪುರಕರ್, ಮಲ್ಲಿನಾಥ ಸಂಗಶೆಟ್ಟಿ ಸೇರಿದಂತೆ ಇತರರು ಉಪಸ್ಥಿತರಿದ್ದರು.







