Kalaburagi | ಸಂಘಟನಾತ್ಮಕ ಬಲದಿಂದಲೇ ಸಹಕಾರ ಕ್ಷೇತ್ರದ ಸಮಸ್ಯೆಗಳಿಗೆ ಶಾಶ್ವತ ಪರಿಹಾರ: ಸಾಣೂರು ನರಸಿಂಹ ಕಾಮತ್

ಕಲಬುರಗಿ: ಸಹಕಾರ ಭಾರತಿ ಸಂಘಟನೆ ಸಂಘಟನಾತ್ಮಕವಾಗಿ ಮತ್ತಷ್ಟು ಬಲಿಷ್ಠಗೊಂಡಾಗ ಮಾತ್ರ ಸಹಕಾರ ಕ್ಷೇತ್ರದ ವಿವಿಧ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಕಂಡುಕೊಳ್ಳಲು ಸಾಧ್ಯವಾಗುತ್ತದೆ ಎಂದು ಸಹಕಾರ ಭಾರತಿಯ ರಾಜ್ಯ ಪ್ರಧಾನ ಕಾರ್ಯದರ್ಶಿ ಸಾಣೂರು ನರಸಿಂಹ ಕಾಮತ್ ಅಭಿಪ್ರಾಯಪಟ್ಟರು.
ನಗರದ ಕರ್ನಾಟಕ ಸೌಹಾರ್ದ ಸಂಯುಕ್ತ ಸಹಕಾರ ಸಭಾಭವನದಲ್ಲಿ ಮಂಗಳವಾರ ಆಯೋಜಿಸಿದ್ದ ಸಹಕಾರ ಭಾರತಿ ಕಲಬುರಗಿ ಜಿಲ್ಲಾ ಅಭ್ಯಾಸ ವರ್ಗವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಸಹಕಾರ ಕ್ಷೇತ್ರಕ್ಕೆ ಪ್ರತ್ಯೇಕ ಸಚಿವಾಲಯ ಸ್ಥಾಪನೆಯಾಗಿ ಐದು ವರ್ಷಗಳು ಕಳೆದಿದ್ದು, ಹೊಸ ಸಹಕಾರಿ ನೀತಿಯನ್ನು ಜಾರಿಗೆ ತರಲು ಹಾಗೂ ಸಹಕಾರ ಕ್ಷೇತ್ರದಲ್ಲಿ ಅಮೂಲಾಗ್ರ ಬದಲಾವಣೆಗಳನ್ನು ತರಲು ಕೇಂದ್ರ ಸರ್ಕಾರ ಹಲವು ಮಹತ್ವದ ಕಾರ್ಯಯೋಜನೆಗಳನ್ನು ಅನುಷ್ಠಾನಗೊಳಿಸುತ್ತಿದೆ. ಆದರೆ, ಈ ಯೋಜನೆಗಳ ಪರಿಣಾಮಕಾರಿ ಜಾರಿ ಮತ್ತು ಕ್ಷೇತ್ರದ ಸಮಸ್ಯೆಗಳ ಸಮಗ್ರ ಪರಿಹಾರಕ್ಕಾಗಿ ಸಹಕಾರ ಭಾರತಿ ಸಂಘಟನೆ ಇನ್ನಷ್ಟು ಬಲಿಷ್ಠವಾಗಬೇಕಿದೆ ಎಂದು ಅವರು ಹೇಳಿದರು.
ಕಳೆದ ಅಕ್ಟೋಬರ್‌ನಲ್ಲಿ ಕಲಬುರಗಿ ಜಿಲ್ಲೆಯಲ್ಲಿ ಸಹಕಾರ ಭಾರತಿಯ ಪೂರ್ಣ ಪ್ರಮಾಣದ ನೂತನ ಜಿಲ್ಲಾ ಸಮಿತಿ ರಚನೆಯಾಗಿರುವುದು ಸಂತಸದ ಸಂಗತಿಯಾಗಿದೆ. ಫ್ಯಾಕ್ಸ್ ಮಿಲ್ಕ್, ಗೃಹ ನಿರ್ಮಾಣ ಹಾಗೂ ಗ್ರಾಹಕ ಪ್ರಕೋಷ್ಟಗಳು ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿದ್ದು, ಪ್ರತ್ಯೇಕ ಜಿಲ್ಲಾ ಮಹಿಳಾ ಸಮಿತಿಯೂ ರಚನೆಯಾಗಿರುವುದು ಸಂಘಟನೆಯ ಬೆಳವಣಿಗೆಗೆ ಸಾಕ್ಷಿಯಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಹಕಾರ ಭಾರತಿ ಕಲಬುರಗಿ ಜಿಲ್ಲಾ ಅಧ್ಯಕ್ಷ ಕೆ.ಬಿ.ಶಟಗಾರ ವಹಿಸಿದ್ದರು. ಜಿಲ್ಲೆಯ ಸಹಕಾರ ಕ್ಷೇತ್ರದ ಅಭಿವೃದ್ಧಿಗೆ ಸಂಘಟನೆ ಇನ್ನಷ್ಟು ಸಕ್ರಿಯವಾಗಿ ಕಾರ್ಯನಿರ್ವಹಿಸಲಿದೆ ಎಂಬ ವಿಶ್ವಾಸವನ್ನು ಅವರು ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘ ಉತ್ತರ ಪ್ರಾಂತ ಪ್ರಚಾರ ಪ್ರಮುಖ ಕೃಷ್ಣ ಜೋಶಿ ಮಾತನಾಡಿದರು. ಸಂಪನ್ಮೂಲ ವ್ಯಕ್ತಿಗಳಾಗಿ ಬಿ.ವಿ.ರವೀಂದ್ರನಾಥ್, ರಾಜಕುಮಾರ ಮಾನ್ವಿ ಹಾಗೂ ಸಂಜೀವ ಮಹಾಜನ್ ವಿವಿಧ ವಿಷಯಗಳ ಕುರಿತು ಮಾರ್ಗದರ್ಶನ ನೀಡಿದರು.
ಸಹಕಾರ ಭಾರತಿಯ ರಾಜ್ಯ ಗ್ರಾಹಕ ಪ್ರಕೋಷ್ಠದ ಸಹ ಸಂಚಾಲಕ ಎಸ್.ಎಸ್. ಪಾಟೀಲ್ ಪ್ರಸ್ತಾವಿಕವಾಗಿ ಮಾತನಾಡಿದರು. ರಾಷ್ಟ್ರೀಯ ಮಹಿಳಾ ಸಹಕಾರಿ ಪ್ರಕೋಷ್ಟದ ಪ್ರಮುಖ ಶೈಲಜಾ ತಪಲಿ ಸ್ವಾಗತಿಸಿದರು. ಜಿಲ್ಲಾ ಪದಾಧಿಕಾರಿ ಶಿವಶರಣಪ್ಪ ವಂದನಾರ್ಪಣೆ ಸಲ್ಲಿಸಿದರು. ಮಲ್ಲಮ್ಮ ಕಾರ್ಯಕ್ರಮ ನಿರೂಪಿಸಿದರು.






