Kalaburagi | ತೃತೀಯ ಭಾಷಾ ಹಿಂದಿ ಶಿಕ್ಷಕರ ನಿಯೋಜನೆ ಆದೇಶ ತಕ್ಷಣ ಹಿಂಪಡೆಯಲು ಸರ್ಕಾರಕ್ಕೆ ಶಶೀಲ್ ಜಿ.ನಮೋಶಿ ಮನವಿ

ಕಲಬುರಗಿ: 2026ನೇ ಸಾಲಿನಿಂದ ಸರ್ಕಾರಿ ಪ್ರೌಢಶಾಲೆಗಳಲ್ಲಿ ಕೌಶಲ್ಯಾಭಿವೃದ್ಧಿ ಯೋಜನೆಯಡಿ ಕೃತಕ ಬುದ್ಧಿಮತ್ತೆ (AI) ವಿಷಯವನ್ನು ತೃತೀಯ ಭಾಷೆಯ ಬದಲಾಗಿ ಅಳವಡಿಸಿ, ತೃತೀಯ ಭಾಷೆ ಬೋಧಿಸುವ ಶಿಕ್ಷಕರನ್ನು ವಿವಿಧ ಶಾಲೆಗಳಿಗೆ ನಿಯೋಜಿಸಲು ಸರ್ಕಾರ ಹೊರಡಿಸಿರುವ ಆದೇಶ ಅವೈಜ್ಞಾನಿಕ ಹಾಗೂ ವಿದ್ಯಾರ್ಥಿಗಳ ಹಿತಾಸಕ್ತಿಗೆ ವಿರುದ್ಧವಾಗಿದೆ ಎಂದು ವಿಧಾನ ಪರಿಷತ್ ಸದಸ್ಯ ಶಶೀಲ್ ಜಿ. ನಮೋಶಿ ಅಭಿಪ್ರಾಯಪಟ್ಟರು.
ತೃತೀಯ ಭಾಷೆಯಾಗಿ ಹಿಂದಿ ದೇಶದಾದ್ಯಂತ ವ್ಯಾಪಕವಾಗಿ ಬಳಕೆಯಾಗುವ ವ್ಯವಹಾರಿಕ ಭಾಷೆಯಾಗಿದ್ದು, ವಿದ್ಯಾರ್ಥಿಗಳ ಉನ್ನತ ಶಿಕ್ಷಣ ಹಾಗೂ ಉದ್ಯೋಗಾವಕಾಶಗಳ ದೃಷ್ಟಿಯಿಂದಲೂ ಮಹತ್ವದ್ದಾಗಿದೆ. ವಿಶೇಷವಾಗಿ ಕಲ್ಯಾಣ ಕರ್ನಾಟಕ ಭಾಗದ ಬಹುತೇಕ ವಿದ್ಯಾರ್ಥಿಗಳು ತೃತೀಯ ಭಾಷೆಯಾಗಿ ಹಿಂದಿಯನ್ನು ಆಯ್ಕೆ ಮಾಡಿಕೊಂಡು ಅಧ್ಯಯನ ಮಾಡುತ್ತಿರುವುದರಿಂದ, ಈ ಆದೇಶ ಹಿಂದಿ ಕಲಿಯುವ ವಿದ್ಯಾರ್ಥಿಗಳ ಶೈಕ್ಷಣಿಕ ಹಿತಕ್ಕೆ ಧಕ್ಕೆಯುಂಟು ಮಾಡಲಿದೆ. ಆದ್ದರಿಂದ ಸರ್ಕಾರ ಕೂಡಲೇ ಈ ಆದೇಶವನ್ನು ಹಿಂತೆಗೆದುಕೊಳ್ಳಬೇಕು ಎಂದು ಅವರು ಆಗ್ರಹಿಸಿದರು.
ಇತ್ತೀಚಿನ ದಿನಗಳಲ್ಲಿ ಕೃತಕ ಬುದ್ಧಿಮತ್ತೆ (AI) ವಿಷಯವೂ ಮಹತ್ವ ಪಡೆದುಕೊಂಡಿದೆ. ಆದರೆ, AI ಅಥವಾ ತೃತೀಯ ಭಾಷೆಯ ಆಯ್ಕೆಯನ್ನು ವಿದ್ಯಾರ್ಥಿಗಳ ವಿವೇಚನೆಗೆ ಬಿಡುವ ಬದಲು, ಏಕಪಕ್ಷೀಯವಾಗಿ ತೃತೀಯ ಭಾಷೆಯನ್ನು ಕೈಬಿಟ್ಟು AI ಅನ್ನು ಅಳವಡಿಸುವುದು ಸೂಕ್ತ ಕ್ರಮವಲ್ಲ ಎಂದು ಅವರು ಅಭಿಪ್ರಾಯಪಟ್ಟರು.
ಶಿಕ್ಷಣ ಕ್ಷೇತ್ರದಲ್ಲಿ ಆಮೂಲಾಗ್ರ ಬದಲಾವಣೆಯ ಹೆಸರಿನಲ್ಲಿ ಸರ್ಕಾರ ಅವೈಜ್ಞಾನಿಕ ನಿರ್ಧಾರಗಳನ್ನು ಕೈಗೊಂಡು ಶೈಕ್ಷಣಿಕ ವ್ಯವಸ್ಥೆಯಲ್ಲಿ ಗೊಂದಲ ಸೃಷ್ಟಿಸುತ್ತಿದೆ ಎಂದು ನಮೋಶಿ ಆರೋಪಿಸಿದರು.






