Kalaburagi | ವೈದ್ಯ ವೃತ್ತಿ ಉದ್ಯೋಗವಲ್ಲ, ಸಮಾಜ ಸೇವೆಯ ಮಹತ್ತರ ಜವಾಬ್ದಾರಿ: ಡಾ. ರವೀಂದ್ರನಾಥ ಮೇಟಿ

ಕಲಬುರಗಿ: ವೈದ್ಯ ವೃತ್ತಿಯು ಕೇವಲ ಉದ್ಯೋಗವಲ್ಲ, ಸಮಾಜ ಸೇವೆಯ ಅತ್ಯುನ್ನತ ಜವಾಬ್ದಾರಿಯಾಗಿದೆ. ಸರ್ಕಾರಿ ವೈದ್ಯರು ಗ್ರಾಮೀಣ ಪ್ರದೇಶ ಸೇರಿದಂತೆ ಸಮಾಜದ ಎಲ್ಲ ವರ್ಗದ ಜನರಿಗೆ ಗುಣಮಟ್ಟದ ಆರೋಗ್ಯ ಸೇವೆ ಒದಗಿಸುವ ಮೂಲಕ ಆರೋಗ್ಯ ವ್ಯವಸ್ಥೆಯನ್ನು ಸದೃಢಗೊಳಿಸುತ್ತಿದ್ದಾರೆ ಎಂದು ಕರ್ನಾಟಕ ರಾಜ್ಯ ಸರ್ಕಾರಿ ವೈದ್ಯಾಧಿಕಾರಿಗಳ ಸಂಘದ (ಕೆಜಿಎಂಒಎ) ರಾಜ್ಯಾಧ್ಯಕ್ಷ ಡಾ. ರವೀಂದ್ರನಾಥ ಮೇಟಿ ಹೇಳಿದರು.
ನಗರದ ಸಾಯಿ ಮಂದಿರದ ಸಮೀಪದ ವಿ.ಎಲ್. ಪಾಟೀಲ್ ಕಲ್ಯಾಣ ಮಂಟಪದಲ್ಲಿ ಕರ್ನಾಟಕ ರಾಜ್ಯ ಸರ್ಕಾರಿ ವೈದ್ಯಾಧಿಕಾರಿಗಳ ಸಂಘದ ವತಿಯಿಂದ ಆಯೋಜಿಸಿದ್ದ 2026–27ನೇ ಸಾಲಿನ ರಾಷ್ಟ್ರೀಯ ವೈದ್ಯರ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಸಮಾಜದ ಆರೋಗ್ಯ ಕಾಪಾಡುವಲ್ಲಿ ವೈದ್ಯರ ಪಾತ್ರ ಅತ್ಯಂತ ಮಹತ್ವದ್ದಾಗಿದೆ. ಸಾರ್ವಜನಿಕ ಆರೋಗ್ಯ ಸೇವೆಯನ್ನು ಇನ್ನಷ್ಟು ಪರಿಣಾಮಕಾರಿಯಾಗಿ ಜನರಿಗೆ ತಲುಪಿಸುವ ನಿಟ್ಟಿನಲ್ಲಿ ವೈದ್ಯರು ತಮ್ಮ ಸೇವಾ ಮನೋಭಾವವನ್ನು ನಿರಂತರವಾಗಿ ಉಳಿಸಿಕೊಳ್ಳಬೇಕು ಎಂದು ಅವರು ಕರೆ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಲಬುರಗಿ ವಿಭಾಗದ ವಿಭಾಗೀಯ ಉಪನಿರ್ದೇಶಕರು ಹಾಗೂ ಜಿಲ್ಲಾ ಅಧ್ಯಕ್ಷರಾದ ಡಾ. ಶರಣಬಸಪ್ಪ ಗಣಜಲಖೇಡ್ ಮಾತನಾಡಿ, ವೈದ್ಯರ ವೃತ್ತಿಪರ ಬೆಳವಣಿಗೆ, ಸಂಘದ ಸದಸ್ಯರ ಏಕತೆ ಹಾಗೂ ಸಾರ್ವಜನಿಕ ಆರೋಗ್ಯ ಸೇವೆಯ ಗುಣಮಟ್ಟವನ್ನು ಹೆಚ್ಚಿಸಲು ಎಲ್ಲರೂ ಒಗ್ಗಟ್ಟಿನಿಂದ ಕಾರ್ಯನಿರ್ವಹಿಸಬೇಕು ಎಂದು ಹೇಳಿದರು.
ಕಲಬುರಗಿ ವಿಭಾಗೀಯ ಉಪಾಧ್ಯಕ್ಷರು ಹಾಗೂ ಜಿಲ್ಲಾ ಆಸ್ಪತ್ರೆಯ ಆರ್‌ಎಂಒ ಡಾ. ನಾಗರಾಜ ಪಾಟೀಲ ವಿಶೇಷ ಉಪಸ್ಥಿತರಿದ್ದು, ವೈದ್ಯರ ಸೇವೆಯ ಮಹತ್ವವನ್ನು ವಿವರಿಸಿದರು.
ಕಾರ್ಯಕ್ರಮದಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅಧಿಕಾರಿಗಳು, ಸರ್ಕಾರಿ ವೈದ್ಯಾಧಿಕಾರಿಗಳು ಹಾಗೂ ಸಂಘದ ಪದಾಧಿಕಾರಿಗಳು ಭಾಗವಹಿಸಿದ್ದರು.ವಿಭಾಗೀಯ ಸಹ ನಿರ್ದೇಶಕರಾದ ಡಾ. ಶಂಕರಪ್ಪ, ಜಿಲ್ಲಾ ಗೌರವಾಧ್ಯಕ್ಷರು ಹಾಗೂ ವಿಭಾಗೀಯ ಉಪನಿರ್ದೇಶಕರಾದ ಡಾ. ಅಂಬಾರಾಯ ರುದ್ರವಾಡಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಶರಣಬಸಪ್ಪ ಕ್ಯಾತನಾಳ, ಜಿಲ್ಲಾ ಆಸ್ಪತ್ರೆಯ ಜಿಲ್ಲಾ ಶಸ್ತ್ರಚಿಕಿತ್ಸಕರಾದ ಡಾ. ರುಕಿಯಾ ಅಸ್ನಾ ರಬಾ ಹಾಗೂ ಹಿರಿಯ ಶಸ್ತ್ರಚಿಕಿತ್ಸಕರಾದ ಡಾ. ರಾಜಶೇಖರ ಮಾಲಿ ಉಪಸ್ಥಿತರಿದ್ದು, ಆರೋಗ್ಯ ಕ್ಷೇತ್ರದಲ್ಲಿ ವೈದ್ಯರು ಸಲ್ಲಿಸುತ್ತಿರುವ ನಿಸ್ವಾರ್ಥ ಸೇವೆಯನ್ನು ಶ್ಲಾಘಿಸಿದರು.
ವಿಶೇಷ ಆಹ್ವಾನಿತರಾಗಿ ರಾಜ್ಯ ಉಪಾಧ್ಯಕ್ಷ ಡಾ. ಮೋಹನ್, ವಿಭಾಗೀಯ ಜಂಟಿ ಕಾರ್ಯದರ್ಶಿ ಡಾ. ರುದ್ರಗೌಡ, ರಾಜ್ಯ ಜಂಟಿ ಕಾರ್ಯದರ್ಶಿ ಡಾ. ಸತೀಶ್, ಆಂತರಿಕ ಲೆಕ್ಕ ಪರಿಶೋಧಕಿ ಡಾ. ಶೋಭಾ ಟಿ.ಆರ್., ಸಂಘದ ವ್ಯವಸ್ಥಾಪಕ ಕೃಷ್ಣಪ್ಪ, ಶ್ರೀ ಆಸ್ಪತ್ರೆಯ ಡಾ. ಸಚಿನ್, ಡಾ. ಶ್ವೇತ, ವಿ.ಎಲ್. ಪಾಟೀಲ್ ಆಸ್ಪತ್ರೆಯ ಡಾ. ರವೀಂದ್ರ ಪಾಟೀಲ್, ಸಂಜನಾ ಆಸ್ಪತ್ರೆಯ ಡಾ. ಅಂಬರಪ್ಪ ಜಂಪಾ, ಶಾರದಾಂಬೆ ಆಸ್ಪತ್ರೆಯ ಡಾ. ಗಿರೀಶ್ ಸ್ವಾಮಿ ಹಾಗೂ ಡಾ. ದೀಪ ಸ್ವಾಮಿ ಸೇರಿದಂತೆ ಹಲವರು ಭಾಗವಹಿಸಿದ್ದರು.
ಈ ಸಂದರ್ಭದಲ್ಲಿ ಅತ್ಯುತ್ತಮ ಸೇವೆ ಸಲ್ಲಿಸಿದ ವೈದ್ಯರು, ನಿವೃತ್ತ ವೈದ್ಯರು, ವೈದ್ಯರ ಪ್ರತಿಭಾವಂತ ಮಕ್ಕಳು ಹಾಗೂ ವಿವಿಧ ಕ್ರೀಡಾಕೂಟಗಳಲ್ಲಿ ವಿಜೇತರಾದ ವೈದ್ಯರನ್ನು ಸನ್ಮಾನಿಸಿ ಗೌರವಿಸಲಾಯಿತು. ಬಳಿಕ ವೈದ್ಯರು ಹಾಗೂ ಅವರ ಕುಟುಂಬ ಸದಸ್ಯರು ನೀಡಿದ ಸಾಂಸ್ಕೃತಿಕ ಕಾರ್ಯಕ್ರಮಗಳು ಸಮಾರಂಭದ ವಿಶೇಷ ಆಕರ್ಷಣೆಯಾಗಿದ್ದವು.
ಕಾರ್ಯಕ್ರಮದ ಯಶಸ್ಸಿಗೆ ಕಲಬುರಗಿ ಶಾಖೆಯ ಉಪಾಧ್ಯಕ್ಷರಾದ ಡಾ. ವಿನೋದಕುಮಾರ ಎಸ್.ಎಚ್., ಡಾ. ಇರ್ಫಾನ್ ಅಲಿ, ಕಾರ್ಯದರ್ಶಿ ಡಾ. ಸಂತೋಷ ಆಲಗೂರ, ಖಜಾಂಚಿ ಡಾ. ದೀಪಕ್ ಕುಮಾರ ರಾಠೋಡ, ಜಂಟಿ ಕಾರ್ಯದರ್ಶಿಗಳಾದ ಡಾ. ಸಂಧ್ಯಾ ಕಾನೇಕರ್ ಹಾಗೂ ಡಾ. ಅಮೃತಾ ಕುಲಕರ್ಣಿ ಸೇರಿದಂತೆ ಸಂಘದ ಪದಾಧಿಕಾರಿಗಳು ಮತ್ತು ಸದಸ್ಯರು ಶ್ರಮಿಸಿದರು.






