Kalaburagi | ಪತ್ನಿಯ ಅನೈತಿಕ ಸಂಬಂಧ ಶಂಕೆ: ಬ್ಲಾಸ್ಟಿಂಗ್ ಮದ್ದು ಸೊಂಟಕ್ಕೆ ಕಟ್ಟಿ ಸ್ಫೋಟ; ತಂದೆ-ಮಗಳು ಮೃತ್ಯು, ನಾಲ್ವರಿಗೆ ಗಂಭೀರ ಗಾಯ

ಕಲಬುರಗಿ : ಪತ್ನಿಯ ಮೇಲೆ ಅನೈತಿಕ ಸಂಬಂಧ ಶಂಕಿಸಿ ಪತಿಯೊಬ್ಬ ಬ್ಲಾಸ್ಟಿಂಗ್ ಮದ್ದು ಸೊಂಟಕ್ಕೆ ಕಟ್ಟಿಕೊಂಡು ಸ್ಫೋಟಿಸಿದ ಪರಿಣಾಮ ತಂದೆ ಹಾಗೂ ಮಗಳು ಸ್ಥಳದಲ್ಲೇ ಮೃತಪಟ್ಟಿದ್ದು, ನಾಲ್ವರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಆಳಂದ ತಾಲೂಕಿನ ಮಟಕಿ ತಾಂಡಾದಲ್ಲಿ ಮಂಗಳವಾರ ನಡೆದಿದೆ.
ಆಳಂದ ತಾಲೂಕಿನ ಮಟಕಿ ತಾಂಡಾದ ನಿವಾಸಿಗಳಾದ ಶಿವಲಾಲ್ ಬಲಿರಾಮ ರಾಠೋಡ (49) ಹಾಗೂ ಅವರ ಮಗಳು ವೀರಾ ಶಿವಲಾಲ್ ರಾಠೋಡ (15) ಮೃತರು ಎಂದು ಗುರುತಿಸಲಾಗಿದೆ.
ಘಟನೆಯಲ್ಲಿ ಶಿವಲಾಲ್ ಅವರ ಪತ್ನಿ ಸವಿತಾ ಶಿವಲಾಲ್ ರಾಠೋಡ (40), ಮಗ ಪ್ರಕಾಶ ಶಿವಲಾಲ್ ರಾಠೋಡ (19), ಸಂಬಂಧಿಕರಾದ ಸುರೇಖಾ ಚವ್ಹಾಣ (30), ಅವರ ಮಗ ವಿವೇಕ ಚವ್ಹಾಣ (12) ಎಂಬುವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಕಲಬುರಗಿ ಜಿಲ್ಲಾ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಪೊಲೀಸ್ ಮೂಲಗಳ ಪ್ರಕಾರ, ಶಿವಲಾಲ್ ಮತ್ತು ಸವಿತಾ ದಂಪತಿ ನಡುವೆ ಹಲವು ವರ್ಷಗಳಿಂದ ಕೌಟುಂಬಿಕ ವಿಚಾರಗಳಿಗೆ ಸಂಬಂಧಿಸಿದಂತೆ ಆಗಾಗ್ಗೆ ಜಗಳ ನಡೆಯುತ್ತಿತ್ತು. ಇದರಿಂದ ನೊಂದ ಸವಿತಾ ಅವರು ತಮ್ಮ ಮಗಳು ಹಾಗೂ ಇಬ್ಬರು ಪುತ್ರರೊಂದಿಗೆ ಸಂಬಂಧಿಕರ ಮನೆಯಲ್ಲಿ ವಾಸವಾಗಿದ್ದರು ಎನ್ನಲಾಗಿದೆ.
ಮಹಾರಾಷ್ಟ್ರದ ಪುಣೆಯ ಸಮೀಪ ಕಲ್ಲು ಕ್ವಾರಿಯಲ್ಲಿ ಕೆಲಸ ಮಾಡುತ್ತಿದ್ದ ಶಿವಲಾಲ್ ರಾಠೋಡ, ಹೆಂಡತಿಯ ಮೇಲೆ ಅನೈತಿಕ ಸಂಬಂಧದ ಶಂಕೆಯನ್ನಿಟ್ಟುಕೊಂಡಿದ್ದ. ಅದೇ ಕಾರಣಕ್ಕಾಗಿ ಮಂಗಳವಾರ ಬೆಳಿಗ್ಗೆ ಸಂಬಂಧಿಕರ ಮನೆಗೆ ತೆರಳಿ ಸ್ಫೋಟಕವನ್ನು ತನ್ನ ದೇಹಕ್ಕೆ ಕಟ್ಟಿಕೊಂಡು ಸ್ಫೋಟಿಸಿಕೊಂಡಿದ್ದಾನೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಸ್ಫೋಟದ ತೀವ್ರತೆಗೆ ಶಿವಲಾಲ್ ರಾಠೋಡ್ ದೇಹ ಛಿದ್ರ ಛಿದ್ರವಾಗಿದ್ದು, ಮನೆಯ ಗೋಡೆಗಳು ಹಾಗೂ ಸುತ್ತಮುತ್ತಲಿನ ಪ್ರದೇಶಕ್ಕೆ ಹಾನಿಯಾಗಿದೆ. ಘಟನೆಯಿಂದಾಗಿ ತಾಂಡಾದಲ್ಲಿ ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಗಿತ್ತು.
ಮಾಹಿತಿ ತಿಳಿಯುತ್ತಿದ್ದಂತೆ ಆಳಂದ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದು, ಸ್ಫೋಟಕದ ಮೂಲದ ಕುರಿತು ತನಿಖೆ ಮುಂದುವರಿಸಿದ್ದಾರೆ. ಘಟನೆ ಆಳಂದ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ನಡೆದಿದೆ.






