Kalaburagi | ಜಿಲ್ಲಾಧಿಕಾರಿ ಕಚೇರಿ ಮುಂದೆ ಅನ್ನದಾತರ ಆಕ್ರೋಶ; ರೈತ ಆತ್ಮಹತ್ಯೆಗೆ ಯತ್ನ
ಬರಪೀಡಿತ ಜಿಲ್ಲೆ ಘೋಷಣೆಗೆ ಆಗ್ರಹಿಸಿ ರಸ್ತೆ ತಡೆ; ಹೋರಾಟಗಾರರು ಪೊಲೀಸ್ ವಶಕ್ಕೆ

ಕಲಬುರಗಿ : ಮುಂಗಾರು ಮಳೆ ಕೊರತೆಯಿಂದ ಬೆಳೆಗಳು ಒಣಗುತ್ತಿದ್ದು, ಜಿಲ್ಲೆಯಲ್ಲಿ ಬರದ ಪರಿಸ್ಥಿತಿ ನಿರ್ಮಾಣವಾಗಿದ್ದರೂ ಕಲಬುರಗಿ ಜಿಲ್ಲೆಯನ್ನು ಬರಪೀಡಿತ ಪ್ರದೇಶವೆಂದು ಘೋಷಿಸದಿರುವುದನ್ನು ಖಂಡಿಸಿ ಸಂಯುಕ್ತ ಹೋರಾಟ ಕರ್ನಾಟಕ ನೇತೃತ್ವದಲ್ಲಿ ರೈತರು ಶುಕ್ರವಾರ ಜಿಲ್ಲಾಧಿಕಾರಿ ಕಚೇರಿ ಎದುರು ರಸ್ತೆ ತಡೆ ನಡೆಸಿ ಪ್ರತಿಭಟನೆ ನಡೆಸಿದರು.
ಮುಂಗಾರು ಹಂಗಾಮಿನಲ್ಲಿ ಹೆಸರು, ಉದ್ದು, ಸೋಯಾಬಿನ್, ಎಳ್ಳು ಸೇರಿದಂತೆ ಹಲವು ಬೆಳೆಗಳು ಮಳೆ ಕೊರತೆಯಿಂದ ಹಾನಿಗೀಡಾಗಿವೆ. ಕೆಲ ರೈತರು ಎರಡು ಬಾರಿ ಬಿತ್ತನೆ ಮಾಡಿದ್ದರೂ ಸಮರ್ಪಕ ಮಳೆಯಾಗದೆ ಬೆಳೆ ಕೈಕೊಟ್ಟಿದೆ. ಆಗಸ್ಟ್‌ನಲ್ಲಿ ಸುರಿದ ಅಲ್ಪ ಮಳೆಗೆ ಕೆಲವೆಡೆ ತೊಗರಿ ಬಿತ್ತನೆ ಮಾಡಲಾಗಿದ್ದು, ಇದೀಗ ಬಿಸಿಲಿನ ತಾಪ ಹೆಚ್ಚಾಗಿರುವುದರಿಂದ ಬೆಳೆಗಳು ಬಾಡುತ್ತಿವೆ ಎಂದು ರೈತ ಮುಖಂಡರು ದೂರಿದರು.
ಜಿಲ್ಲೆಯ ಹಳ್ಳ, ಕೊಳ್ಳ ಹಾಗೂ ನಾಲೆಗಳು ಬತ್ತಿದ್ದು, ಬಾವಿ ಮತ್ತು ಕೊಳವೆಬಾವಿಗಳಲ್ಲಿಯೂ ನೀರಿನ ಮಟ್ಟ ಕುಸಿದಿದೆ. ಇದರಿಂದ ಜಾನುವಾರುಗಳಿಗೆ ಕುಡಿಯುವ ನೀರು ಹಾಗೂ ಮೇವಿನ ಕೊರತೆ ಎದುರಾಗಿದೆ. ಪರಿಸ್ಥಿತಿಯನ್ನು ಸರ್ಕಾರ ತಕ್ಷಣ ಮರುಪರಿಶೀಲಿಸಿ ಕಲಬುರಗಿ ಜಿಲ್ಲೆಯನ್ನು ಬರಪೀಡಿತವೆಂದು ಘೋಷಿಸಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.
ಆತ್ಮಹತ್ಯೆಗೆ ಯತ್ನ:
ಪ್ರತಿಭಟನೆ ವೇಳೆ ರೈತನೊಬ್ಬ ಪೆಟ್ರೋಲ್ ಸುರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ ಘಟನೆ ಕೆಲಕಾಲ ಆತಂಕಕ್ಕೆ ಕಾರಣವಾಯಿತು. ತಕ್ಷಣ ಮಧ್ಯಪ್ರವೇಶಿಸಿದ ಪೊಲೀಸರು ರೈತನನ್ನು ತಡೆದು ಸುರಕ್ಷಿತವಾಗಿ ಕರೆದೊಯ್ದರು. ರಸ್ತೆ ತಡೆ ನಡೆಸುತ್ತಿದ್ದ ಹೋರಾಟಗಾರರನ್ನು ಪೊಲೀಸರು ವಶಕ್ಕೆ ಪಡೆದುಕೊಂಡರು.
1,000 ಕೋಟಿ ವಿಶೇಷ ಪ್ಯಾಕೇಜ್‌ಗೆ ಒತ್ತಾಯ:
ಜಿಲ್ಲೆಯನ್ನು ಬರಪೀಡಿತವೆಂದು ಘೋಷಿಸಿ 1,000 ಕೋಟಿ ವಿಶೇಷ ಪ್ಯಾಕೇಜ್ ಬಿಡುಗಡೆ ಮಾಡಬೇಕು. ಪ್ರತಿ ಎಕರೆಗೆ 50 ಸಾವಿರ ಬರ ಪರಿಹಾರ ನೀಡಬೇಕು. ರಾಷ್ಟ್ರೀಕೃತ ಬ್ಯಾಂಕ್‌ಗಳ ರೈತರ ಸಾಲ ಮನ್ನಾ ಮಾಡಬೇಕು ಅಥವಾ ಸಾಲ ಮರುಪಾವತಿಗೆ ಕಾಲಾವಕಾಶ ವಿಸ್ತರಿಸಬೇಕು ಎಂದು ರೈತ ಮುಖಂಡರು ಆಗ್ರಹಿಸಿದರು.
ಮಹಾರಾಷ್ಟ್ರದ ಉಜನಿ ಜಲಾಶಯದಿಂದ ಕರ್ನಾಟಕದ ಪಾಲಿನ 15 ಟಿಎಂಸಿ ನೀರನ್ನು ಬಿಡುಗಡೆ ಮಾಡಿ ಭೀಮಾ ನದಿಗೆ ಹರಿಸಬೇಕು. ಬರ ಕಾಮಗಾರಿಗಳನ್ನು ತಕ್ಷಣ ಆರಂಭಿಸಿ ಗ್ರಾಮೀಣ ಜನರಿಗೆ ಉದ್ಯೋಗ ಕಲ್ಪಿಸಬೇಕು. ಜಾನುವಾರುಗಳಿಗಾಗಿ ಗೋಶಾಲೆ ಹಾಗೂ ಮೇವಿನ ವ್ಯವಸ್ಥೆ ಮಾಡಬೇಕು. ಗ್ರಾಮೀಣ ಪ್ರದೇಶಗಳ ಕುಡಿಯುವ ನೀರಿನ ಸಮಸ್ಯೆ ಪರಿಹರಿಸಬೇಕು ಎಂದು ಒತ್ತಾಯಿಸಿದರು.
ಬೆಳೆ ವಿಮೆ ತಾರತಮ್ಯ ಆರೋಪ:
ಬೆಳೆ ವಿಮೆ ಪರಿಹಾರ ನೀಡುವಲ್ಲಿ ತಾರತಮ್ಯ ಮಾಡಲಾಗುತ್ತಿದೆ ಎಂದು ಆರೋಪಿಸಿದ ರೈತ ಮುಖಂಡರು, ವಿಮೆ ಪಡೆಯಲು ರಾಷ್ಟ್ರೀಕೃತ ಬ್ಯಾಂಕ್‌ಗಳ ಸಾಲದ ದೃಢೀಕರಣವನ್ನು ಕಡ್ಡಾಯಗೊಳಿಸಬಾರದು ಎಂದು ಒತ್ತಾಯಿಸಿದರು. ಬೆಳೆ ಹಾನಿಗೊಳಗಾದ ಎಲ್ಲ ರೈತರಿಗೆ ವಿಮೆ ಪರಿಹಾರ ನೀಡಬೇಕು. ಎರಡನೇ ಕಂತಿನ ವಿಮೆ ಹಣದಿಂದ ವಂಚಿತರಾದ ರೈತರಿಗೂ ಪರಿಹಾರ ಬಿಡುಗಡೆ ಮಾಡಬೇಕು ಎಂದು ಆಗ್ರಹಿಸಿದರು.
ಜಿಲ್ಲೆಯ ಶಾಸಕರು, ಸಚಿವರು ಹಾಗೂ ವಿರೋಧ ಪಕ್ಷದ ನಾಯಕರು ರೈತರ ಸಮಸ್ಯೆಗಳನ್ನು ಸರ್ಕಾರದ ಗಮನಕ್ಕೆ ತರುವಲ್ಲಿ ವಿಫಲರಾಗಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ ಮುಖಂಡರು, ತಕ್ಷಣ ಕೇಂದ್ರದ ಬರ ಅಧ್ಯಯನ ತಂಡವನ್ನು ಕಲಬುರಗಿ ಜಿಲ್ಲೆಗೆ ಕಳುಹಿಸಬೇಕು ಎಂದು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಜಿಲ್ಲಾ ಸಂಚಾಲಕ ಶರಣಬಸಪ್ಪ ಮಮಶೆಟ್ಟಿ, ಭೀಮಾಶಂಕರ ಮಾಡಿಯಾಳ, ಕರೆಪ್ಪ ಕರಗೊಂಡ, ಎಂ.ಬಿ. ಸಜ್ಜನ, ಮೌಲಾ ಮುಲ್ಲಾ, ರೈತ ಮುಖಂಡರಾದ ಸಿದ್ದಪ್ಪ ಕಲಶೆಟ್ಟಿ, ಭೀಮಶಾ ಬಡದಾಳ, ದಿಲೀಪ್ ನಾಗೂರ, ಉಮಾಪತಿ ಪಾಟೀಲ, ನಾಗಯ್ಯ ಸ್ವಾಮಿ, ಚಂದ್ರಕಾಂತ ಪಾಟೀಲ, ವೀರಣ್ಣ ಗೌಡ, ಮಹೇಶ್ ಕುಮಾರ್ ರಾಠೋಡ್ ಸೇರಿದಂತೆ ಹಲವರು ಪಾಲ್ಗೊಂಡಿದ್ದರು.
ಸಚಿವರು–ಶಾಸಕರ ಮನೆ ಮುಂದೆ ಧರಣಿಯ ಎಚ್ಚರಿಕೆ
ಕಲಬುರಗಿ ಜಿಲ್ಲೆಯನ್ನು ತಕ್ಷಣ ಬರಪೀಡಿತ ಪ್ರದೇಶವೆಂದು ಘೋಷಿಸದಿದ್ದರೆ ಹೋರಾಟವನ್ನು ಮತ್ತಷ್ಟು ತೀವ್ರಗೊಳಿಸುವುದಾಗಿ ಸಂಯುಕ್ತ ಹೋರಾಟ ಕರ್ನಾಟಕ ರೈತ ಮುಖಂಡರು ಎಚ್ಚರಿಸಿದ್ದಾರೆ. ಜಿಲ್ಲೆಯ ಸಚಿವರು ಹಾಗೂ ಶಾಸಕರ ಮನೆಗಳ ಎದುರು ಧರಣಿ ನಡೆಸಲಾಗುವುದು. ಜಿಲ್ಲೆಗೆ ಆಗಮಿಸುವ ಸಚಿವರಿಗೆ ಕಪ್ಪುಪಟ್ಟಿ ಪ್ರದರ್ಶಿಸಿ ಪ್ರತಿಭಟನೆ ನಡೆಸಲಾಗುವುದು ಎಂದು ತಿಳಿಸಿದ್ದಾರೆ.






