Kalaburagi | ಅ.2ರವರೆಗೆ ಸ್ವಚ್ಛತೆಯೆ ಸೇವೆ-2026 ಅಭಿಯಾನ : ಸ್ವಚ್ಛತೆಗೆ ಕೈಜೋಡಿಸುವಂತೆ ಜಿಲ್ಲಾ ಪಂಚಾಯತ್ ಸಿಇಒ ಕರೆ

ರಾಹುಲ್ ಸಂಕನೂರ್
ಕಲಬುರಗಿ: ಗ್ರಾಮೀಣ ಸಮುದಾಯದಲ್ಲಿ ಶುಚಿತ್ವ ಮತ್ತು ಉತ್ತಮ ನೈರ್ಮಲ್ಯ ಅಭ್ಯಾಸಗಳನ್ನು ಬೆಳೆಸುವ ಉದ್ದೇಶದಿಂದ ಸ್ವಚ್ಛ ಭಾರತ್ ಮಿಷನ್ (ಗ್ರಾಮೀಣ) ಯೋಜನೆಯಡಿ ‘ಸ್ವಚ್ಛತೆಯೇ ಸೇವೆ–2026’ (ಸ್ವಚ್ಛತಾ ಹೀ ಸೇವಾ) ಅಭಿಯಾನ ಸೆ.17ರಿಂದ ಆರಂಭಗೊಂಡಿದ್ದು, ಅ.2ರವರೆಗೆ ಜಿಲ್ಲೆಯಾದ್ಯಂತ ನಡೆಯಲಿದೆ ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಾಹುಲ್ ಸಂಕನೂರ್ ತಿಳಿಸಿದ್ದಾರೆ.
ಈ ಅಭಿಯಾನದ ಉದ್ದೇಶ ಸ್ವಚ್ಛತೆಯನ್ನು ಜನಾಂದೋಲನವಾಗಿ ರೂಪಿಸುವುದು, ಸ್ವಯಂಪ್ರೇರಿತ ಸೇವಾ ಮನೋಭಾವವನ್ನು ಉತ್ತೇಜಿಸುವುದು ಹಾಗೂ ಸಮುದಾಯದ ಸಕ್ರಿಯ ಭಾಗವಹಿಸುವಿಕೆಯ ಮೂಲಕ ಸಾಮೂಹಿಕ ಸ್ವಚ್ಛತಾ ಚಟುವಟಿಕೆಗಳನ್ನು ಬಲಪಡಿಸುವುದಾಗಿದೆ. ಗ್ರಾಮೀಣ ಭಾಗದ ಜನರು “ಸ್ವಚ್ಛೋತ್ಸವ”ದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ಅವರು ಮನವಿ ಮಾಡಿದ್ದಾರೆ.
ಅಭಿಯಾನದ ಅಂಗವಾಗಿ ಕಪ್ಪುಚುಕ್ಕೆ ಹಾಗೂ ಕೊಳಕು ಪ್ರದೇಶಗಳು, ಸಾರ್ವಜನಿಕರ ಸಂಚಾರ ಹೆಚ್ಚಿರುವ ಸ್ಥಳಗಳನ್ನು ಸ್ವಚ್ಛಗೊಳಿಸಿ ಸುಂದರ ಸ್ಥಳಗಳಾಗಿ ಪರಿವರ್ತಿಸಲಾಗುತ್ತದೆ. ಶಾಲಾ ವಿದ್ಯಾರ್ಥಿಗಳು ಮತ್ತು ಯುವಜನರನ್ನು ಸ್ವಚ್ಛತಾ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವ ಮೂಲಕ ‘ಸ್ವಚ್ಛ ಪಾಠಶಾಲೆ–ಸ್ವಚ್ಛತೆಗಾಗಿ ಯುವಜನತೆ’ ಎಂಬ ಸಂದೇಶ ಸಾರಲಾಗುತ್ತದೆ.
ಸಫಾಯಿ ಮಿತ್ರರು, ಸ್ವಚ್ಛತಾಗ್ರಹಿಗಳು ಹಾಗೂ ಸ್ವಯಂಸೇವಕರಿಗಾಗಿ ಆರೋಗ್ಯ ತಪಾಸಣೆ, ಪಿಪಿಇ ಕಿಟ್ ಮತ್ತು ಸುರಕ್ಷತಾ ಸಾಧನಗಳ ವಿತರಣೆ, ಕೇಂದ್ರ ಹಾಗೂ ರಾಜ್ಯ ಸರ್ಕಾರದ ಕಲ್ಯಾಣ ಯೋಜನೆಗಳ ಕುರಿತು ಮಾಹಿತಿ ನೀಡುವುದು ಮತ್ತು ಸ್ಥಳೀಯ ಮಟ್ಟದಲ್ಲಿ ಸಫಾಯಿ ಮಿತ್ರರನ್ನು ಸನ್ಮಾನಿಸುವ ಕಾರ್ಯಕ್ರಮಗಳನ್ನೂ ಆಯೋಜಿಸಲಾಗುತ್ತದೆ.
ಘನತ್ಯಾಜ್ಯ ನಿರ್ವಹಣೆ, ಕಸ ವಿಂಗಡಣೆ, ಮನೆ-ಮನೆ ಜಾಗೃತಿ ಅಭಿಯಾನ, ಕಾಂಪೋಸ್ಟಿಂಗ್ ಉತ್ತೇಜನ, ಸ್ವಚ್ಛತೆಗಾಗಿ ಕ್ರೀಡಾಕೂಟ, ಸ್ವಚ್ಛ ಹಬ್ಬಗಳು, ‘ತಾಯಿ ಹೆಸರಿನಲ್ಲಿ ಒಂದು ಸಸಿ’ (ಏಕ್ ಪೇಡ್ ಮಾ ಕೆ ನಾಮ್) ಕಾರ್ಯಕ್ರಮ, ಸೆಪ್ಟೆಂಬರ್ 27ರ ವಿಶ್ವ ಪ್ರವಾಸೋದ್ಯಮ ದಿನದ ವಿಶೇಷ ಚಟುವಟಿಕೆಗಳು ಹಾಗೂ ಅಕ್ಟೋಬರ್ 2ರಂದು ವಿಶೇಷ ಗ್ರಾಮಸಭೆಗಳ ಮೂಲಕ ಜನಸಹಭಾಗಿತ್ವ ಹೆಚ್ಚಿಸಲಾಗುತ್ತದೆ.
ಇದಲ್ಲದೆ, ತ್ಯಾಜ್ಯದಿಂದ ಸಂಪತ್ತು ಹಾಗೂ ತ್ಯಾಜ್ಯದಿಂದ ಕಲಾಕೃತಿ ಎಂಬ ವಿನೂತನ ಕಾರ್ಯಕ್ರಮಗಳ ಮೂಲಕ ವೃತ್ತಾಕಾರದ ಆರ್ಥಿಕತೆ ಮತ್ತು ಪರಿಸರ ಸಂರಕ್ಷಣೆಯ ಕುರಿತು ಜಾಗೃತಿ ಮೂಡಿಸಲಾಗುತ್ತದೆ.
ಅಕ್ಟೋಬರ್ 1ರಂದು ಸಾಮೂಹಿಕ ಶ್ರಮದಾನ :
ಅಭಿಯಾನದ ಭಾಗವಾಗಿ ಅ.1ರಂದು ಜಿಲ್ಲೆಯ ಎಲ್ಲಾ ತಾಲೂಕು ಹಾಗೂ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ‘ಒಂದು ದಿನ – ಒಂದು ಗಂಟೆ – ಒಟ್ಟಾಗಿ ಶ್ರಮದಾನ’ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ಚುನಾಯಿತ ಜನಪ್ರತಿನಿಧಿಗಳು, ಸಾಂಸ್ಕೃತಿಕ ಗಣ್ಯರು, ಸ್ವಚ್ಛತಾ ರಾಯಭಾರಿಗಳು, ಧಾರ್ಮಿಕ ನಾಯಕರು, ನಿವೃತ್ತ ಸೈನಿಕರು, ಪದ್ಮ ಪ್ರಶಸ್ತಿ ಪುರಸ್ಕೃತರು, ಹಿರಿಯ ನಾಗರಿಕರು, ಯುವಜನತೆ, ಶಾಲಾ ಮಕ್ಕಳು, ಸ್ಥಳೀಯ ಸಂಸ್ಥೆಗಳು ಹಾಗೂ ಸ್ವಯಂಸೇವಾ ಸಂಘಟನೆಗಳ ಸಹಭಾಗಿತ್ವದಲ್ಲಿ ಅಭಿಯಾನ ಯಶಸ್ವಿಗೊಳಿಸಲು ತಾಲೂಕು ಪಂಚಾಯಿತಿ ಮತ್ತು ಗ್ರಾಮ ಪಂಚಾಯಿತಿ ಅಧಿಕಾರಿಗಳಿಗೆ ಕ್ರಿಯಾ ಯೋಜನೆ ರೂಪಿಸಿ ಅನುಷ್ಠಾನಗೊಳಿಸುವಂತೆ ಸೂಚನೆ ನೀಡಲಾಗಿದೆ ಎಂದು ಸಿಇಒ ರಾಹುಲ್ ಸಂಕನೂರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.






