ಕಲಬುರಗಿ | ಹಲವು ಮನೆಗಳು ಸೇರಿ 25 ಸಾವಿರ ಎಕರೆ ಬೆಳೆ ಹಾನಿ: ಶಾಸಕ ಡಾ.ಅಜಯಸಿಂಗ್

ಕಲಬುರಗಿ: ಧಾರಾಕಾರ ಮಳೆಯಿಂದಾಗಿ ಜೇವರ್ಗಿ ಪಟ್ಟಣ ಸೇರಿದಂತೆ ಹಲವು ಗ್ರಾಮಗಳಲ್ಲಿ ನೂರಾರು ಮನೆಗಳು ಹಾನಿಗೀಡಾಗಿವೆ. ಅನೇಕ ಮನೆಗಳಲ್ಲಿ ನೀರು ನುಗ್ಗಿದೆ. ಸುಮಾರು 25 ಸಾವಿರ ಎಕರೆಗಳಲ್ಲಿ ಬೆಳೆದ ಬೆಳೆಗಳು ಹಾಳಾಗಿದ್ದು, ತಕ್ಷಣವೇ ಅಧಿಕಾರಿಗಳಿಂದ ಸ್ಪಂದನೆ ಸಿಗುತ್ತದೆ ಎಂದು ಕೆ ಕೆ ಆರ್ ಡಿ ಬಿ ಅಧ್ಯಕ್ಷ, ಜೇವರ್ಗಿ ಶಾಸಕ ಡಾ.ಅಜಯಸಿಂಗ್ ಹೇಳಿದ್ದಾರೆ.
ಜೇವರ್ಗಿ ಪಟ್ಟಣ ಸೇರಿದಂತೆ ತಾಲ್ಲೂಕಿನ ವಿವಿಧ ಗ್ರಾಮಗಳಿಗೆ ಭೇಟಿ ನೀಡಿದ ಶಾಸಕ ಡಾ.ಅಜಯಸಿಂಗ್, ಮಳೆಯಿಂದ ಆಗಿರುವ ಅನಾಹುತ ಹಾಗೂ ಬೆಳೆಗಳ ನಾಶವನ್ನು ಅಧಿಕಾರಿಗಳ ಜೊತೆ ಶುಕ್ರವಾರ ವೀಕ್ಷಿಸಿ, ಸೂಕ್ತ ಪರಿಹಾರವನ್ನು ನೀಡುವಂತೆ ಸೂಚಿಸಿದರು.
ಜೇವರ್ಗಿ ಪಟ್ಟಣದಲ್ಲಿ 143 ಕ್ಕೂ ಹೆಚ್ಚು ಮನೆಗಳು ಹಾಳಾಗಿವೆ. ಸುಮಾರು 1,300 ಜನರಿಗೆ ಸಮಸ್ಯೆಯಾಗಿದೆ. ಉರ್ದು ಶಾಲೆಯಲ್ಲಿ ಕಾಳಜಿ ಕೇಂದ್ರ ನಡೆಸಲಾಗುತ್ತಿದೆ. ಹಲವು ವರ್ಷಗಳ ಬಳಿಕ 149 ಮಿ.ಮಿ. ಮಳೆಯಾಗಿದೆ, ಇದರಿಂದ ಅನೇಕರಿಗೆ ತೊಂದರೆಯಾಗಿದೆ. ಪಟ್ಟಣದ ಬುಗ್ಗಿ, ಚಿಕ್ಕ ಜೇವರ್ಗಿ, ಜೋಪಡಪಟ್ಟಿ ಸೇರಿದಂತೆ ಅನೇಕ ನಗರಗಳ ಮನೆಗಳಲ್ಲಿ ನೀರು ಹೋಗಿವೆ. ಇಲಾಖೆಗಳಿಂದ ಹಾಗೂ ಧರ್ಮಸಿಂಗ್ ಪೌಂಡೇಶನ ವತಿಯಿಂದ ಕಿಟ್ ಗಳನ್ನು ವಿತರಿಸಲಾಗುವುದು ಎಂದರು.
ಕೆ ಕೆ ಆರ್ ಡಿ ಬಿ ಅನುದಾನದಲ್ಲಿ ಸುಮಾರು 70 ರಿಂದ 80 ಕೋಟಿ ವೆಚ್ಚದಲ್ಲಿ ಹಲವು ಹಳ್ಳಗಳ ಸ್ವಚ್ಚತೆ ಹಾಗೂ ಚೆಕ್ ಡ್ಯಾಮ್ ಗಳನ್ನ ನಿರ್ಮಾಣ ಮಾಡಲಾಗುವುದು. ಅದರಂತೆ ಹಾಲಗಡ್ಲಾ, ಅವರಾದ, ಜೇವರ್ಗಿಯಿಂದ ಕಟ್ಟಿ ಸಂಗಾವಿವರೆಗೆ 8 ಕೋಟಿ ರೂ. ಅನುದಾನದಲ್ಲಿ ಸ್ವಚತೆ ಹಾಗೂ ಹುಳೆತ್ತುವ ಕಾಮಗಾರಿಯನ್ನು ಪ್ರಾರಂಭಿಸಲಾಗುವುದು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ತಾಲ್ಲೂಕು ದಂಡಾಧಿಕಾರಿ ಮಲ್ಲಣ್ಣ ಯಲಗೋಡ, ಪುರಸಭೆ ಮುಖ್ಯಾಧಿಕಾರಿ ಶಂಭುಲಿಂಗ್ ದೇಸಾಯಿ, ಅಧಿಕಾರಿಗಳಾದ ನಾಗಮೂರ್ತಿ ಶಿಲವಂತ, ಉಮೇಶ ಶರ್ಮಾ, ರಾಜೆಸಾಹೇಬ್ ನದಾಫ್, ಗಜಾನನ ಬಿರಾದಾರ. ಮುಖಂಡರಾದ ರಾಜಶೇಖರ್ ಸೀರಿ, ಶರಣು ಗುತ್ತೆದಾರ, ಶಿವಕುಮಾರ ಕಲ್ಲಾ, ಅಬ್ದುಲ ರಹೇಮಾನ ಪಟೇಲ್, ಮಾಜಿದ್ ಸೇಠ್ ಗಿರಣಿ, ಹರಿಚಂದ್ರ ಕೋಡಚಿ, ಮಲ್ಲಣ್ಣ ಕೋಡಚಿ, ಮರೆಪ್ಪ ಸರಡಗಿ, ಬಾಗಣ್ಣ ಸಿದ್ನಾಳ, ಶರಭಗೌಡ ಸರಡಗಿ, ರಫಿಕ್, ಇಮ್ರಾನ, ದೆವಿಂದ್ರ ಬಡಿಗೇರ, ಪ್ರಕಾಶ ಕಾಮಬಳೆ, ಭೀಮು ಖಾದ್ಯಾಪೂರ ಸೇರಿದಂತೆ ಅನೇಕರಿದ್ದರು.







