ಕಲಬುರಗಿ | ಜ.14 ರಿಂದ ‘ರೈಲ್ವೆ ಒನ್’ ಆಪ್ ಮೂಲಕ ಅನ್‌ರಿಸರ್ವ್ಡ್ ಟಿಕೆಟ್‌ಗಳಿಗೆ ಶೇ.3ರಷ್ಟು ರಿಯಾಯಿತಿ

ಕಲಬುರಗಿ: ಭಾರತೀಯ ರೈಲ್ವೆಯ ಎಲ್ಲಾ ಸೇವೆಗಳನ್ನು ಒಂದೇ ವೇದಿಕೆಯಲ್ಲಿ ಒದಗಿಸುವ ‘ರೈಲ್ವೆ ಒನ್’ ಸೂಪರ್ ಆಪ್ ಮೂಲಕ ಅನ್‌ರಿಸರ್ವ್ಡ್ ಟಿಕೆಟ್ ಬುಕ್ ಮಾಡುವ ಪ್ರಯಾಣಿಕರಿಗೆ ಶೇ.3 ರಿಯಾಯಿತಿ ನೀಡಲು ನಿರ್ಧರಿಸಲಾಗಿದೆ ಎಂದು ಸೋಲಾಪುರ ರೈಲ್ವೆ ವಿಭಾಗದ ಹಿರಿಯ ವಾಣಿಜ್ಯ ವ್ಯವಸ್ಥಾಪಕ ಯೋಗೇಶ್ ಪಾಟೀಲ್ ತಿಳಿಸಿದ್ದಾರೆ.
ರೈಲ್ವೆ ವ್ಯವಸ್ಥೆಯಲ್ಲಿ ಡಿಜಿಟಲ್ ಪಾವತಿಯನ್ನು ಉತ್ತೇಜಿಸುವ ಹಾಗೂ ಪ್ರಯಾಣಿಕರಿಗೆ ಸರಳ ಮತ್ತು ಪಾರದರ್ಶಕ ಟಿಕೆಟ್ ವ್ಯವಸ್ಥೆ ಕಲ್ಪಿಸುವ ನಿಟ್ಟಿನಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ. ಈ ಹಿಂದೆ ‘ರೈಲ್ವೆ ಒನ್’ ಆಪ್‌ನ ಆರ್–ವಾಲೆಟ್ (R-Wallet) ಮೂಲಕ ಹಣ ಪಾವತಿಸುವವರಿಗೆ ಮಾತ್ರ ಶೇ.3 ಕ್ಯಾಶ್‌ಬ್ಯಾಕ್ ನೀಡಲಾಗುತ್ತಿತ್ತು. ಆದರೆ, ಇನ್ನು ಮುಂದೆ ವಾಲೆಟ್ ಹೊರತುಪಡಿಸಿ ಆಪ್‌ನಲ್ಲಿ ಲಭ್ಯವಿರುವ ಯುಪಿಐ ಸೇರಿದಂತೆ ಇತರ ಯಾವುದೇ ಡಿಜಿಟಲ್ ಪಾವತಿ ವಿಧಾನಗಳನ್ನು ಬಳಸಿದರೂ ಶೇ.3ರಷ್ಟು ನೇರ ರಿಯಾಯಿತಿ ಸಿಗಲಿದೆ.
ಈ ವಿಶೇಷ ಡಿಜಿಟಲ್ ಪ್ರೋತ್ಸಾಹ ಯೋಜನೆಯು 2026ರ ಜ.14 ರಿಂದ ಜು.14 ರವರೆಗೆ ಜಾರಿಯಲ್ಲಿರುತ್ತದೆ. ಆರು ತಿಂಗಳ ಕಾಲ ಪ್ರಯಾಣಿಕರು ಈ ರಿಯಾಯಿತಿಯ ಪ್ರಯೋಜನ ಪಡೆಯಬಹುದಾಗಿದೆ ಎಂದು ವಿಭಾಗದ ಹಿರಿಯ ಸಾರ್ವಜನಿಕ ಸಂಪರ್ಕ ನಿರೀಕ್ಷಕ ಎಸ್. ವಿಕ್ರಮ್ ಎ.ಕೆ. ಪ್ರಕಟಣೆಯಲ್ಲಿ ಮಾಹಿತಿ ನೀಡಿದ್ದಾರೆ.





