ಕಲಬುರಗಿ | ಅಕ್ಟೋಬರ್‌ನಲ್ಲಿ ವಿಭಾಗ ಮಟ್ಟದ 3ನೇ ದಾಸ ಸಾಹಿತ್ಯ ಸಮ್ಮೇಳನ : ರವಿಕುಮಾರ ಶಹಾಪುರಕರ್

ಕಲಬುರಗಿ : ಮಾನವ ಜನ್ಮದ ಕಲ್ಪನೆ, ಸಮಾನತೆ ಹಾಗೂ ಆಧ್ಯಾತ್ಮಿಕ ವಿಚಾರಗಳನ್ನು ಸಾರುವಂತಿರುವ ಕಲಬುರಗಿ ವಿಭಾಗ ಮಟ್ಟದ ಮೂರನೇ ದಾಸ ಸಾಹಿತ್ಯ ಸಮ್ಮೇಳನವನ್ನು ಕನ್ನಡ ಸಾಹಿತ್ಯ ಪರಿಷತ್ತು ದಕ್ಷಿಣ ವಲಯದ ವತಿಯಿಂದ ಅಕ್ಟೋಬರ್ ಮೊದಲ ವಾರದಲ್ಲಿ ನಗರದಲ್ಲಿ ನಡೆಸಲು ನಿರ್ಧರಿಸಲಾಗಿದೆ ಎಂದು ಕಸಾಪ ದಕ್ಷಿಣ ವಲಯದ ಅಧ್ಯಕ್ಷ ರವಿಕುಮಾರ ಶಹಾಪುರಕರ್ ತಿಳಿಸಿದರು.
ನಗರದ ಕನ್ನಡ ಭವನದಲ್ಲಿ ಪರಿಷತ್ ಪದಾಧಿಕಾರಿಗಳು ಹಾಗೂ ಪ್ರಮುಖರ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಈ ಸಮ್ಮೇಳನವನ್ನು ಅರ್ಥಪೂರ್ಣವಾಗಿ ಆಯೋಜಿಸಲು ಸಕಲ ಸಿದ್ಧತೆಗಳ ಕುರಿತು ಚರ್ಚಿಸಲಾಯಿತು.
ಈಗಾಗಲೇ ತಮ್ಮ ಘಟಕದಿಂದ ವಿಭಾಗ ಮಟ್ಟದ ಎರಡು ದಾಸ ಸಾಹಿತ್ಯ ಸಮ್ಮೇಳನಗಳು ಜರುಗಿವೆ. ಕಲ್ಯಾಣ ಕರ್ನಾಟಕ ಭಾಗವು ದಾಸರು, ಶರಣರು ಮತ್ತು ಸೂಫಿ ಸಂತರ ನೆಲವಿದು. ಇಲ್ಲಿ ಅನೇಕ ಜನ ದಾಸರು ಬಾಳಿ-ಬದುಕಿ ಹೋಗಿದ್ದಾರೆ. ದಾಸ ಸಾಹಿತ್ಯ ಮತ್ತು ಪರಂಪರೆ ಕುರಿತು ಚಿಂತನ-ಮಂಥನ ನಡೆಸುವಂಥ ಈಖ ಸಮ್ಮೇಳನ ಇನ್ನಷ್ಟು ಮೆರುಗು ಪಡೆಯಲಿದೆ. ಸಮ್ಮೇಳನದ ಪೂಶಸ್ವಿಗೆ ಪೂರಕವಾಗಿ ಸ್ವಾಗತ ಸಮಿತಿ ರಚನೆ, ಸಮ್ಮೇಳನಾಧ್ಯಕ್ಷರ ಆಯ್ಕೆ ಶೀಘ್ರದಲ್ಲೇ ನಡೆಸಲಾಗುವುದೆಂದು ತಿಳಿಸಿದರು.
ಕಸಾಪ ಜಿಲ್ಲಾಧ್ಯಕ್ಷ ವಿಜಯಕುಮಾರ ಪಾಟೀಲ ತೇಗಲತಿಪ್ಪಿ ಮಾತನಾಡಿದರು.
ಜಿಲ್ಲಾ ಕಸಾಪ ಕಾರ್ಯದರ್ಶಿ ಧರ್ಮಣ್ಣ ಎಚ್.ಧನ್ನಿ, ಕಸಾಪ ದಕ್ಷಿಣ ವಲಯದ ಕಾರ್ಯದರ್ಶಿಗಳಾದ ಮಲ್ಲಿನಾಥ ಸಂಗಶೆಟ್ಟಿ, ಮಂಜುನಾಥ ಕಂಬಾಳಿಮಠ, ಪ್ರಮುಖರಾದ ಶಿವಕುಮಾರ ಸಿ.ಎಚ್., ಮಧುಸೂಧನ್ ಚಿಂತನಪಳ್ಳಿ, ಸಂಗಣ್ಣ ಚೋರಗಸ್ತಿ, ವೆಂಕುಬಾಯಿ ರಜಪೂತ, ಜಯಶ್ರೀ ಯಾದಗೀರ, ಗಂಗಾಧರ ಬಂಗರಗಿ, ಸಂಗಪ್ಪ ಭೀಮಳ್ಳಿ, ರಾಜೇಂದ್ರ ಮಾಡಬೂಳ, ದಿನೇಶ ಮದಕರಿ, ಪ್ರಭವ ಪಟ್ಟಣಕರ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು







