ಕಲಬುರಗಿ | ಕೆಕೆಆರ್ಡಿಬಿ ಮಂಡಳಿಯ 5,000 ಕೋಟಿ ರೂ. ಮೊತ್ತದ ಕ್ರಿಯಾ ಯೋಜನೆಗೆ ಒಪ್ಪಿಗೆ : ಶಾಸಕ ಡಾ.ಅಜಯ್ ಸಿಂಗ್
ʼʼಸಮಗ್ರ ಕಲ್ಯಾಣ ಕರ್ನಾಟಕದ ಅಭಿವೃದ್ಧಿಗೆ ಸರಕಾರ ಬದ್ಧ:

ಡಾ.ಅಜಯ್ ಧರ್ಮಸಿಂಗ್
ಕಲಬುರಗಿ: ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಯ ಪ್ರಸಕ್ತ 2025-26ನೇ ಸಾಲಿನ 5,000 ಕೋಟಿ ರೂ. ಮೊತ್ತದ ಮೈಕ್ರೋ ಮತ್ತು ಮ್ಯಾಕ್ರೋ ಕ್ರಿಯಾ ಯೋಜನೆಗೆ ರಾಜ್ಯಪಾಲರು ಇತ್ತೀಚೆಗೆ ಅನುಮೋದನೆ ನೀಡಿದ್ದು, ಇದೇ ಆರ್ಥಿಕ ವರ್ಷಾಂತ್ಯಕ್ಕೆ ಸಂಪೂರ್ಣವಾಗಿ ಅನುದಾನ ಖರ್ಚು ಮಾಡಲು ಸರ್ವ ಪ್ರಯತ್ನ ಮಾಡಲಾಗುವುದು ಎಂದು ಕೆ.ಕೆ.ಆರ್.ಡಿ.ಬಿ.ಮಂಡಳಿ ಅಧ್ಯಕ್ಷ, ಜೇವರ್ಗಿ ಶಾಸಕ ಡಾ.ಅಜಯ್ ಧರ್ಮಸಿಂಗ್ ಹೇಳಿದ್ದಾರೆ.
ಮಂಗಳವಾರ ಕೆ.ಕೆ.ಆರ್.ಡಿ.ಬಿ.ಮಂಡಳಿಯ ಕಚೇರಿಯಲ್ಲಿ ಸುದ್ದಿಗೋಷ್ಟಿ ಉದ್ದೇಶಿಸಿ ಮಾತನಾಡಿದ ಅವರು, ಪ್ರಸಕ್ತ ವರ್ಷ ರಾಜ್ಯಪಾಲರಿಂದ ಬೇಗನೆ ಕ್ರಿಯಾ ಯೋಜನೆಗೆ ಅನುಮೋದನೆ ನೀಡಿದ್ದು, ಸಂತಸ ತಂದಿದೆ. ಪ್ರದೇಶದ ಶಾಸಕರು ಬರುವ ಆ.15 ರೊಳಗೆ ಜಿಲ್ಲಾಧಿಕಾರಿಗಳ ಮೂಲಕ ಪ್ರಸ್ತಾವನೆ ಸಲ್ಲಿಸಿದಲ್ಲಿ ಇದೇ ವರ್ಷ ಸುಮಾರು 4,500 ಕೋಟಿ ರೂ. ಕ್ಕಿಂತ ಹೆಚ್ಚಿನ ಹಣ ಖರ್ಚು ಮಾಡುವ ಗುರಿ ಹೊಂದಲಾಗಿದೆ. ಈ ಭಾಗದ ಅಭಿವೃದ್ಧಿಗೆ ಸರ್ಕಾರ ಬದ್ಧವಾಗಿದೆ ಎಂದರು.
ಮಂಡಳಿಗೆ ನೀಡಿದ ಹಣ ಖರ್ಚು ಮಾಡಲ್ಲ ಎಂಬ ಆರೋಪ ಇದೆ. ಆದರೆ, ತಾವು ಅಧಿಕಾರ ವಹಿಸಿಕೊಂಡ ನಂತರ 2023-24ರಲ್ಲಿ ಡಿಸೆಂಬರ್ ಅಂತ್ಯಕ್ಕೆ ಕ್ರಿಯಾ ಯೋಜನೆಗೆ ಅನುಮೋದನೆ ದೊರೆತ ನಂತರ ಆ ವರ್ಷದಲ್ಲಿ ಮೊದಲ ಬಾರಿಗೆ 2,009 ಕೋಟಿ ರೂ. ಮತ್ತು 2024-25ರಲ್ಲಿ ಆಗಸ್ಟ್ ನಲ್ಲಿ ಕ್ರಿಯಾ ಅನುಮೋದನೆ ದೊರೆತ ನಂತರ ಕಳೆದ ಮಾರ್ಚ್ ಅಂತ್ಯಕ್ಕೆ 3,158 ಕೋಟಿ ರೂ. ಸೇರಿ ಕಳೆದ ಎರಡು ವರ್ಷದಲ್ಲಿ ದಾಖಲೆ ಪ್ರಮಾಣದಲ್ಲಿ 5,167 ಕೋಟಿ ರೂ. ಹಣ ಪ್ರದೇಶದ ಅಭಿವೃದ್ಧಿಗೆ ವಿನಿಯೋಗಿಸಲಾಗಿದೆ ಎಂದು ಮಾಹಿತಿ ನೀಡಿದರು.
ಕೈಗಾರಿಕೆ ಹಬ್ ಗಾಗಿ ಶ್ರಮ :
ಪ್ರಸಕ್ತ 2025-26ನೇ ಸಾಲಿನಲ್ಲಿ ಕಲಬುರಗಿ ಮತ್ತು ಯಾದಗಿರಿಯಲ್ಲಿ ಸಣ್ಣ ಕೈಗಾರಿಕೆ ಸ್ಥಾಪನೆಗೆ ಪ್ರೋತ್ಸಾಹಿಸಲು ಮಂಡಳಿ ಮತ್ತು ಸಣ್ಣ ಕೈಗಾರಿಕೆ ಇಲಾಖೆಯಿಂದ 200 ಕೋಟಿ ರೂ. ವೆಚ್ಚದಲ್ಲಿ ಇಂಡಸ್ಟ್ರಿ ಹಬ್ ಮಾಡಲಾಗುವುದು. ಕಲ್ಯಾಣ ಭಾಗದಲ್ಲಿ ತಾಪಮಾನ ಹೆಚ್ಚಿರುವುದರಿಂದ ಸಮತೋಲನ ಕಾಪಾಡುವ ನಿಟ್ಟಿನಲ್ಲಿ ಅರಣ್ಯ ಇಲಾಖೆಯ ಸಹಯೋಗದೊಂದಿಗೆ "ಅರಣ್ಯ ಆವಿಷ್ಕಾರ" ಯೋಜನೆಯಡಿ 100 ಕೋಟಿ ರೂ. ವೆಚ್ಚದಲ್ಲಿ ಅರಣ್ಯೀಕರಣ ಮಾಡಲಾಗುವುದು. ಪ್ರದೇಶದ ಗ್ರಾಮೀಣ ಭಾಗದಲ್ಲಿ ಸಮುದಾಯ ಶೌಚಾಲಯ ಸ್ಥಾಪಿಸಲಾಗುವುದು ಎಂದರು.
ಮಂಡಳಿಯಿಂದ ಎಸ್.ಸಿ.ಪಿ-ಟಿ.ಎಸ್.ಪಿ ಯೋಜನೆಯಡಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಸಮುದಾಯದ ಕಲ್ಯಾಣಕ್ಕೆ 1,500 ಕೋಟಿ ರೂ. ಹಣ ಮೀಸಲಿರಿಸಿದೆ. ಅಲ್ಪಸಂಖ್ಯಾತ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಸಹಯೊಗದೊಂದಿಗೆ ವಸತಿ ನಿಲಯ ಸ್ಥಾಪಿಸಲಾಗುತ್ತಿದೆ ಎಂದು ಪ್ರಸಕ್ತ ವರ್ಷದ ಮಂಡಳಿಯ ನೂತನ ಯೋಜನೆಗಳ ಕುರಿತು ಅಜಯ್ ಸಿಂಗ್ ಮಾಹಿತಿ ನೀಡಿದರು.
ಪ್ರದೇಶದಲ್ಲಿ ಗ್ರಾಮೀಣ ರಸ್ತೆ ಸುಧಾರಣೆಗೆ ಕಳೆದ ವರ್ಷ ಕಲ್ಯಾಣ ಪಥ ಯೋಜನೆಗೆ ಚಾಲನೆ ನೀಡಲಾಗಿದ್ದು, ಈ ವರ್ಷ ಸಹ ಯೋಜನೆ ಮುಂದುವರಿಕೆಗೆ 300 ಕೋಟಿ ರೂ. ಮಂಡಳಿಯಿಂದ ನೀಡಲಾಗುವುದು.
ಪ್ರತಿ ಜಿಲ್ಲೆಯಲ್ಲಿ ಡೈಲಾಸಿಸ್ ಘಟಕ ಸ್ಥಾಪಿಸಲಾಗುವುದು. ಅಕ್ಷರ ಆವಿಷ್ಕಾರ ಯೋಜನೆಯಡಿ 50 ಕೆ.ಪಿ.ಎಸ್.ಪಬ್ಲಿಕ್ ಶಾಲೆ ಮಂಡಳಿಯಿಂದ ಸ್ಥಾಪಿಸಲಾಗುತ್ತಿದ್ದು, ಸುಮಾರು 150 ಶಾಲೆ ಶಿಕ್ಷಣ ಇಲಾಖೆಯಿಂದ ತೆರೆಯುವ ಆಶಾಭಾವನೆ ಹೊಂದಿದ್ದೇವೆ. ಇದರಿಂದ ಗ್ರಾಮೀಣ ಭಾಗದ ನಮ್ಮ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಒದಗಿಸಲು ಸಹಕಾರಿಯಾಗಲಿದೆ ಎಂದರು.
ರೈತರ ಕಲ್ಯಾಣಕ್ಕೆ ಒತ್ತು:
ಪ್ರಸ್ತುತ ವರ್ಷದಲ್ಲಿ ರೈತರ ಕಲ್ಯಾಣ ನಿಟ್ಟಿನಲ್ಲಿ ಸಣ್ಣ ನೀರಾವರಿ ಇಲಾಖೆ ಸಹಯೋಗದೊಂದಿಗೆ "ಜಲ ಭಾಗ್ಯ" ಯೋಜನೆ ಜಾರಿಗೊಳಿಸಲಾಗುತ್ತಿದೆ. ಮಂಡಳಿ ಮತ್ತು ಇಲಾಖೆ ಈ ವರ್ಷ ತಲಾ 100 ಕೋಟಿ ರೂ. ಖರ್ಚು ಮಾಡಲಾಗುತ್ತದೆ. ಪ್ರದೇಶದಾದ್ಯಂತ 7 ಜಿಲ್ಲೆಗಳ 40 ಕ್ಷೇತ್ರದಾದ್ಯಂತ ಪಕ್ಷಬೇಧ ಹೊರತುಪಡಿಸಿ ಎರಡು ವರ್ಷದಲ್ಲಿ ಒಟ್ಟಾರೆ 400 ಕೋಟಿ ರೂ. ಅನುದಾನ ಖರ್ಚು ಮಾಡಲಾಗುವುದು. ಇದಲ್ಲದೆ ಪ್ರತಿ ಕ್ಷೇತ್ರದಲ್ಲಿ ತಲಾ 1.50 ಕೋಟಿ ರೂ. ವೆಚ್ಚದಲ್ಲಿ ರೈತರ ಗೋದಾಮು ಸಹ ನಿರ್ಮಿಸಲಾಗುತ್ತಿದೆ ಎಂದರು.







