ಕಲಬುರಗಿ| ಪ್ರತಿ ಟನ್ ಕಬ್ಬಿಗೆ 5,500ರೂ. ನೀಡಲು ಸುಭಾಷ್ ಆರ್ ಗುತ್ತೇದಾರ ಆಗ್ರಹ

ಕಲಬುರಗಿ: ಕಬ್ಬು ಬೆಳೆಗಾರರು ಪ್ರಸಕ್ತ ಸಾಲಿನಲ್ಲಿ ಎದುರಿಸುತ್ತಿರುವ ಕೃಷಿ ವೆಚ್ಚದ ಹೆಚ್ಚಳ, ಕಾರ್ಮಿಕರ ಕೂಲಿ, ಗೊಬ್ಬರ, ಕೀಟನಾಶಕ ಹಾಗೂ ಸಾಗಾಣಿಕೆ ವೆಚ್ಚಗಳನ್ನು ಪರಿಗಣಿಸಿ, ಸಕ್ಕರೆ ಕಾರ್ಖಾನೆಗಳು ಪ್ರತಿ ಟನ್ ಕಬ್ಬಿಗೆ 5500 ದರ ನೀಡಬೇಕು ಎಂದು ಆಳಂದ ಕ್ಷೇತ್ರದ ಮಾಜಿ ಶಾಸಕ ಸುಭಾಷ್ ಆರ್. ಗುತ್ತೇದಾರ ಆಗ್ರಹಿಸಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಕಬ್ಬು ಬೆಳೆಯಲು ರೈತರು ವರ್ಷವಿಡೀ ಶ್ರಮಿಸುತ್ತಿದ್ದು, ಮಳೆ ಕೊರತೆ, ನೀರಾವರಿ ಸಮಸ್ಯೆ ಹಾಗೂ ಹೆಚ್ಚುತ್ತಿರುವ ಉತ್ಪಾದನಾ ವೆಚ್ಚಗಳಿಂದ ಸಂಕಷ್ಟಕ್ಕೆ ಸಿಲುಕಿದ್ದಾರೆ. ಇಂತಹ ಸಂದರ್ಭದಲ್ಲಿ ರೈತರಿಗೆ ನ್ಯಾಯಯುತ ಬೆಲೆ ದೊರೆಯದಿದ್ದರೆ, ಕೃಷಿ ಚಟುವಟಿಕೆಗಳನ್ನು ಮುಂದುವರಿಸುವುದು ಕಷ್ಟವಾಗಲಿದೆ ಎಂದು ಅವರು ಕಳವಳ ವ್ಯಕ್ತಪಡಿಸಿದ್ದಾರೆ.
ಸಕ್ಕರೆ ಕಾರ್ಖಾನೆಗಳು ಕಬ್ಬು ಬೆಳೆಗಾರರ ಹಿತಾಸಕ್ತಿಯನ್ನು ಗಮನದಲ್ಲಿಟ್ಟುಕೊಂಡು ಪ್ರತಿ ಟನ್ ಕಬ್ಬಿಗೆ 5,500 ದರ ನೀಡಲು ಮುಂದಾಗಬೇಕು. ರೈತರ ಶ್ರಮಕ್ಕೆ ತಕ್ಕ ಪ್ರತಿಫಲ ದೊರೆತಾಗ ಮಾತ್ರ ಅವರ ಕುಟುಂಬಗಳ ಆರ್ಥಿಕ ಸ್ಥಿತಿ ಸುಧಾರಿಸಲು ಸಾಧ್ಯವಾಗುತ್ತದೆ. ರೈತರು ಬೆಳೆದ ಕಬ್ಬಿಗೆ ಸೂಕ್ತ ಬೆಲೆ ನೀಡುವುದು ಕಾರ್ಖಾನೆಗಳ ಜವಾಬ್ದಾರಿಯಾಗಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಸಂಬಂಧಪಟ್ಟ ಸರ್ಕಾರ ಹಾಗೂ ಸಕ್ಕರೆ ಕಾರ್ಖಾನೆಗಳ ಆಡಳಿತ ಮಂಡಳಿಗಳು ರೈತರ ಬೇಡಿಕೆಯನ್ನು ಗಂಭೀರವಾಗಿ ಪರಿಗಣಿಸಿ, ಕಬ್ಬು ಬೆಳೆಗಾರರಿಗೆ ನ್ಯಾಯ ಒದಗಿಸಲು ಅಗತ್ಯ ಕ್ರಮ ಕೈಗೊಳ್ಳಬೇಕು. ರೈತರ ಹಿತ ರಕ್ಷಣೆಗಾಗಿ ಸರ್ಕಾರ ತಕ್ಷಣ ಮಧ್ಯಪ್ರವೇಶಿಸಿ, ಪ್ರತಿ ಟನ್ ಕಬ್ಬಿಗೆ 5,500 ದರ ದೊರೆಯುವಂತೆ ಕ್ರಮ ಕೈಗೊಳ್ಳಬೇಕು ಎಂದು ಮಾಜಿ ಶಾಸಕ ಸುಭಾಷ್ ಆರ್. ಗುತ್ತೇದಾರ ಒತ್ತಾಯಿಸಿದ್ದಾರೆ.






