ಕಲಬುರಗಿ | ಕಾಯ್ದೆ ಉಲ್ಲಂಘಿಸಿದ 59 ಖಾಸಗಿ ಕ್ಲಿನಿಕ್‌ಗೆ 5.05 ಲಕ್ಷ ರೂ. ದಂಡ

ಕಲಬುರಗಿ : ಕರ್ನಾಟಕ ಖಾಸಗಿ ವೈದ್ಯಕೀಯ ಸಂಸ್ಥೆಗಳ ಕಾಯ್ದೆ-2007ರ ಉಲ್ಲಂಘನೆ ಆರೋಪದ ಮೇರೆಗೆ ಜಿಲ್ಲೆಯ ವಿದ್ಯಾರ್ಹತೆ ಇಲ್ಲದ ಮತ್ತು ಅಡ್ಡ ಅಭ್ಯಾಸ ಹೊಂದಿದ್ದ 59 ಜನರಿಗೆ 5,05,000 ರೂ. ದಂಡ ವಿಧಿಸಿ ಜಿಲ್ಲಾಧಿಕಾರಿ ಬಿ.ಫೌಝಿಯಾ ತರನ್ನುಮ್ ನೇತೃತ್ವದಲ್ಲಿ ಬುಧವಾರ ನಡೆದ ಸಭೆಯಲ್ಲಿ ನಿರ್ಧರಿಸಲಾಗಿದೆ.
ಕೆ.ಪಿ.ಎಮ್.ಇ ಕಾಯ್ದೆ ಅಡಿಯ ಕುಂದು ಕೊರತೆ ಅಹವಾಲು ಪ್ರಾಧಿಕಾರ ಸಭೆಯಲ್ಲಿ ಆರೋಗ್ಯ ಇಲಾಖೆಯ ಅಧಿಕಾರಿಗಳು ಕಾಲ-ಕಾಲಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಕಾಯ್ದೆ ಉಲ್ಲಂಘನೆ ಮೇರೆಗೆ ಇಲಾಖಾವಾರು ದಾಖಲಿಸಿದ ಪ್ರಕರಣಗಳ ವಿಚಾರಣೆ ನಡೆಸಿದ ಜಿಲ್ಲಾಧಿಕಾರಿಗಳು, ಆಸ್ಪತ್ರೆ, ಕ್ಲಿನಿಕ್, ಮಾಲಕರು, ವ್ಯಸ್ಥಾಪಕರಿಗೆ ದಂಡ ವಿಧಿಸಿ ಆದೇಶಿಸಿದ್ದಾರೆ.
ಇನ್ನು ಜಿಲ್ಲೆಯ ಸಹಾಯಕ ಆಯುಕ್ತರು, ತಾಲೂಕಿನ ತಹಶೀಲ್ದಾರರು, ತಾಲೂಕು ಪಂಚಾಯತ್ ಇ.ಓ, ಆರೋಗ್ಯ ಇಲಾಖೆಯ ಕಾರ್ಯಾಕ್ರಮ ಅನುಷ್ಠಾನಾಧಿಕಾರಿಗಳು, ತಾಲೂಕು ಆರೋಗ್ಯಾಧಿಕಾರಿಗಳು, ಜಿಲ್ಲಾ ಆಯುಷ್ ಅಧಿಕಾರಿಗಳು, ಆರಕ್ಷಕ ನಿರೀಕ್ಷಕರೆಲ್ಲರು ಸೇರಿ ನಿರಂತರ ನಕಲಿ ವೈದ್ಯರ ಆಸ್ಪತ್ರೆ, ಕ್ಲಿನಿಕ್ ಮೇಲೆ ದಾಳಿ ಮಾಡುವಂತೆ ಸೂಚಿಸಿದರು.
ಈ ಹಿಂದೆ ನಡೆದ ಸಭೆಯಲ್ಲಿ ವಿಧಿಸಿದ ದಂಡದ ಮೊತ್ತವನ್ನು ಇದೂವರೆಗೆ ಜಮೆ ಮಾಡದ ನಕಲಿ, ವಿದ್ಯಾಹರ್ತೆ ಇಲ್ಲದ ಮತ್ತು ಕೆ.ಪಿ.ಎಮ್.ಇ ಕಾಯ್ದೆ ಉಲ್ಲಂಘನೆ ಮಾಡಿರುವ ಆಸ್ಪತ್ರೆ, ಕ್ಲಿನಿಕ್, ಮಾಲಕರು, ವ್ಯಸ್ಥಾಪಕರ ವಿರುದ್ದ ಕೆ.ಎಲ್.ಆರ್. ಕಾಯ್ದೆಯಡಿ ಆಸ್ತಿ ಜಪ್ತಿ ಮಾಡಿ ನ್ಯಾಯಾಲಯದಲ್ಲಿ ದಾವೆ ಹೂಡುವಂತೆ ಸಂಬಂಧಪಟ್ಟ ತಾಲೂಕಿನ ತಹಶೀಲ್ದಾರರಿಗೆ ಡಿ.ಸಿ. ಸೂಚನೆ ನೀಡಿದರು.
ಸಭೆಯಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ಶರಣಬಸಪ್ಪ ಕ್ಯಾತನಾಳ, ಕಲಬುರಗಿ ತಹಶೀಲ್ದಾರ ಕೆ.ಆನಂದಶೀಲ್, ಆರೋಗ್ಯ ಇಲಾಖೆಯ ಕಾರ್ಯಕ್ರಮ ಅನುಷ್ಠಾನಾಧಿಕಾರಿಗಳು, ತಾಲೂಕಾ ಆರೋಗ್ಯಾಧಿಕಾರಿಗಳು ಇದ್ದರು.