ಕಲಬುರಗಿ | ಕೇಂದ್ರೀಯ ವಿವಿಯಲ್ಲಿ ಹೊಸದಾಗಿ 7 ಕೋರ್ಸ್‌ಗಳ ಪ್ರಾರಂಭ: ಪ್ರೊ.ಬಟ್ಟು ಸತ್ಯನಾರಾಯಣ

ಕಲಬುರಗಿ: ಸಮಕಾಲೀನ, ಕೌಶಲ್ಯ ಆಧಾರಿತ ಮತ್ತು ಆರೋಗ್ಯಕರ ಶಿಕ್ಷಣಕ್ಕೆ ಬದ್ಧವಾಗಿರುವ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದಲ್ಲಿ ಹೊಸದಾಗಿ 7 ಕೋರ್ಸ್‌ಗಳ ಪ್ರಾರಂಭಕ್ಕೆ ಕೇಂದ್ರ ಉನ್ನತ ಶಿಕ್ಷಣ ಸಚಿವಾಲಯ ಅನುಮತಿ ನೀಡಿದೆ ಎಂದು ಕರ್ನಾಟಕ ಕೇಂದ್ರಿಯ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಬಟ್ಟು ಸತ್ಯನಾರಾಯಣ ಹೇಳಿದ್ದಾರೆ.
ಗುರುವಾರ ಕರ್ನಾಟಕ ಕೇಂದ್ರಿಯ ವಿಶ್ವವಿದ್ಯಾಲಯದ ಅತಿಥಿಗೃಹದಲ್ಲಿ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಮಾಸ್ಟರ್ ಪ್ರೋಗ್ರಾಂ ಇನ್ ಲೈಬ್ರರಿ & ಇರ್ಫಾಮೇಷನ್ ಸೈನ್ಸ್, ಎಂಎಸ್ಸಿ ಸ್ಟ್ಯಾಟಿಸ್ಟಿಕ್ಸ್ & ಡಾಟಾ ಅನಾಲೆಟಿಕ್ಸ್, 5 ವರ್ಷಗಳ ಇಂಟಿಗ್ರೇಟೆಡ್ ಬಿಎ (ಎಲ್‌ಎಲ್‌ಬಿ), ಬಿ.ಟೆಕ್ (ಕಂಪ್ಯೂಟರ್ ಸೈನ್ಸ್ ಎಂಜಿನಿಯರಿಂಗ್), ಎಂಟೆಕ್ (ಆರ್ಟಿಫಿಶಿಯಲ್ ಇಂಟಲಿಜೆನ್ಸ್ & ಮಶೀನ್ ಲರ್ನಿಂಗ್), ಎಂಎಸ್ಸಿ (ಜೆನೆಟಿಕ್ಸ್ ಮತ್ತು ಜೀನೋಮಿಕ್ಸ್) ಹಾಗೂ ಎಂಎಸ್ಸಿ ಪ್ಲ್ಯಾಂಟ್ ಸೈನ್ಸ್ & ಎನಿಮಲ್ ಸೈನ್ಸ್ ವಿಭಾಗವನ್ನು ಹೊಸದಾಗಿ 29 ಜನ ಪ್ರಾಧ್ಯಾಪಕರ ವೃಂದ ಬಲದೊಂದಿಗೆ ತೆರೆಯಲು ಮಂಜೂರಾತಿ ಕೊಟ್ಟಿದೆ ಎಂದರು.
ಇದರಲ್ಲಿ ಈಗಾಗಲೇ ಐದು ವರ್ಷದ ಇಂಟಿಗ್ರೆಟೆಡ್ ಬಿ.ಎ. ಎಲ್.ಎಲ್.ಬಿ. ಮತ್ತು ಬಿ.ಟೆಕ್ (ಕಂಪ್ಯೂಟರ್ ಸೈನ್ಸ್ ಎಂಜಿನಿಯರಿಂಗ್) ಎರಡು ಕೋರ್ಸ್ ಪ್ರಾರಂಭಿಸಲಾಗಿದೆ. ಇನ್ನುಳಿದ ಕೋರ್ಸ್ ಶೀಘ್ರ ಕಾರ್ಯರಂಭ ಮಾಡಲಿವೆ ಎಂದ ಅವರು, ಈ ಹೊಸ ಕೋರ್ಸ್ ಗಳು ವಿವಿಯನ್ನು ಶ್ರೇಷ್ಠತಾ ಕೇಂದ್ರ ಮಾಡಲು ನೆರವಾಗಲಿವೆ ಎಂದರು.
ನಾವೀನ್ಯತೆ ಮತ್ತು ಕೌಶಲ್ಯ ಅಭಿವೃದ್ಧಿಯನ್ನು ಉತ್ತೇಜಿಸಲು, ಸಿಯುಕೆನಲ್ಲಿ ಇನ್ಕ್ಯೂಬೇಷನ್ ಕೇಂದ್ರವನ್ನು ಸ್ಥಾಪಿಸಲಾಗಿದೆ. ಇದು ಯುವ ನಾವೀನ್ಯಕಾರರು ಮತ್ತು ಆವಿಷ್ಕಾರಕರ ಸೃಜನಶೀಲತೆಯನ್ನು ಹೆಚ್ಚಿಸುವ ಟಿಂಕರಿಂಗ್ ಪ್ರಯೋಗಾಲಯವನ್ನು ಹೊಂದಿದೆ. ಇದಲ್ಲದೆ ಇಂಡಸ್ಟ್ರಿಸೆಲ್ ಸ್ಥಾಪಿಸುವ ಮೂಲಕ ಕಂಪನಿಗಳ ಬೇಡಿಕೆ ಅನುಗುಣವಾಗಿ ಇಲ್ಲಿನ ವಿದ್ಯಾರ್ಥಿಗಳಿಗೆ ಕೌಶಲ್ಯ ಶಿಕ್ಷಣ ನೀಡಲಾಗುತ್ತಿದೆ ಎಂದ ಅವರು, ಕಲ್ಯಾಣ ಕರ್ನಾಟಕ ಪ್ರದೇಶದಲ್ಲಿ ಉದ್ಯಮಶೀಲತಾ ಅಭಿವೃದ್ಧಿ ಚಟುವಟಿಕೆಗಳನ್ನು ಉತ್ತೇಜಿಸಲು, ಸಿಯುಕೆ ವಾಧ್ವಾನಿ ಫೌಂಡೇಶನ್‌ನ ಸಹಯೋಗದೊಂದಿಗೆ ಉದ್ಯಮಶೀಲತೆಯ ಕುರಿತು ಸರ್ಟಿಫಿಕೇಟ್ ಕೋರ್ಸ್ ಆಯೋಜಿಸಲು ನಿರ್ಧರಿಸಿದೆ ಎಂದರು.
ರಾಷ್ಟ್ರೀಯ ಶಿಕ್ಷಣ ನೀತಿ-2020ನ್ನು ಅಳವಡಿಸಿಕೊಂಡಿರುವ ವಿವಿ ಸಂಶೋಧನೆ ಮತ್ತು ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡುತ್ತಿದೆ. ಪರಿಣಾಮ ಈ ವರ್ಷ ಸುಮಾರು 16 ಕೋಟಿ ರೂ. ಕ್ಕಿಂತ ಹೆಚ್ಚಿನ ಸಂಶೋಧನಾ ಅನುದಾನವನ್ನು ಪಡೆದಿದೆ. ವಿಶ್ವವಿದ್ಯಾನಿಲಯವು ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ಅನುಸಂಧಾನ ರಾಷ್ಟ್ರೀಯ ಸಂಶೋಧನಾ ಪ್ರತಿಷ್ಠಾನದ ಮೂಲಕ ಪಾಲುದಾರಿಕೆಗಳ ವೇಗವರ್ಧಿತ ಇನ್ನೋವೇಶನ್ ಮತ್ತು ಸಂಶೋಧನಾ ಕಾರ್ಯಕ್ರಮದಡಿಯಲ್ಲಿ 11.5 ಕೋಟಿ ರೂ. ಅನುದಾನ ಪಡೆದಿದೆ. ಆರೋಗ್ಯ ಮತ್ತು ವೈದ್ಯಕೀಯ ತಂತ್ರಜ್ಞಾನ ಕ್ಷೇತ್ರದಲ್ಲಿ ಸಂಶೋಧನೆ ಕೈಗೊಳ್ಳಲು ಹೈದರಾಬಾದ್ ಕೇಂದ್ರೀಯ ವಿವಿ ಯೊಂದಿಗೆ ಸಮಾಲೋಚನೆ ನಡೆಸಿದೆ. ವಿಶ್ವವಿದ್ಯಾಲಯದ ರಸಾಯನಶಾಸ್ತ್ರ ವಿಭಾಗವು ಫಿಸ್ಟ್ ಪ್ರೋಗ್ರಾಮ್‌ನಲ್ಲಿ 1.67 ಕೋಟಿ ರೂ.ಗಳ ಧನಸಹಾಯವನ್ನು ವೈಜ್ಞಾನಿಕ ಮೂಲಭೂತ ಸೌಕರ್ಯ ಅಭಿವೃದ್ಧಿಗಾಗಿ ಪಡೆದುಕೊಂಡಿದೆ. ಅದೇ ರೀತಿ ವಿಶ್ವೇಶ್ವರಯ್ಯ ರಿಸರ್ಚ್ ಸ್ಕೀಮ್‌ನಲ್ಲಿ 3 ಕೋಟಿ ರೂ. ಗಳ ಪ್ರಾಜೆಕ್ಟ್ ಗಳನ್ನು ಪಡೆದುಕೊಂಡಿದೆ. ವಿಶ್ವವಿದ್ಯಾಲಯದ ಆವರಣವನ್ನು ಸುಸ್ಥಿರ ಆವರಣವನ್ನಾಗಿ ಮಾಡಲು ಪಣತೊಟ್ಟಿದ್ದು, ಇದಕ್ಕಾಗಿ ಎನ್.ಬಿ.ಸಿ.ಸಿ ಎಂಬ ಸಂಸ್ಥೆಯು ತನ್ನ ಸಿ.ಎಸ್.ಆರ್.ನಿಧಿಯಡಿ 1.21 ಕೋಟಿ ರೂ. ಗಳನ್ನು ವಿ.ವಿ.ಗೆ ನೀಡಿದೆ. ಒಟ್ಟಾರೆ ವಿಶ್ವವಿದ್ಯಾಲಯದಲ್ಲಿ ಈಗ 30 ಸಂಶೋಧನಾ ಪ್ರಾಜೆಕ್ಟ್ ಗಳು ಚಾಲ್ತಿಯಲ್ಲಿವೆ ಎಂದು ಕುಲಪತಿಗಳು ತಿಳಿಸಿದರು.
ಅಪ್ರೆಂಟಿಸ್ ತರಬೇತಿಗೆ ಜು.29ರಂದು ಒಪ್ಪಂದಕ್ಕೆ ಸಹಿ :
ಉದ್ಯಮ-ಬಾಂಧವ್ಯವನ್ನು ಉತ್ತೇಜಿಸಲು, ವಿಶ್ವವಿದ್ಯಾನಿಲಯವು ಅಪ್ರೆಂಟಿಸ್‌ಶಿಪ್ ಆಧಾರಿತ ಪದವಿ ಕಾರ್ಯಕ್ರಮಗಳನ್ನು ಪ್ರಾರಂಭಿಸುತ್ತಿದೆ. ಇದೇ ಜು.29 ರಂದು ನವದೆಹಲಿಯಲ್ಲಿ ಚೆನ್ನೈನ ಅಪ್ರೆಂಟಿಸ್‌ಶಿಪ್ ತರಬೇತಿ ಮಂಡಳಿಯೊಂದಿಗೆ ಒಪ್ಪಂದಕ್ಕೆ ಸಹಿ ಹಾಕಲಿದ್ದೇವೆ ಎಂದು ಪ್ರೊ.ಬಟ್ಟು ಸತ್ಯನಾರಾಯಣ ತಿಳಿಸಿದರು.
ಸಿಯುಕೆ ಕ್ಯಾಂಪಸ್‌ನಲ್ಲಿಯೇ ಎಕ್ಸ್ ಲೆನ್ಸ್ ಸೆಂಟರ್ ಸ್ಥಾಪನೆ :
ಸಂಶೋಧನಾ ಪ್ರಯತ್ನ ಮತ್ತು ಬೆಳವಣಿಗೆಯ ತಂತ್ರವಾಗಿ ಕರ್ನಾಟಕದ ಕೇಂದ್ರಿಯ ವಿಶ್ವವಿದ್ಯಾಲಯವು ಬೆಂಗಳೂರಿನಲ್ಲಿ ಸ್ಥಾಪಿಸಲು ಉದ್ದೇಶಿಸಿದ ಹೈ ಫ್ರೀಕ್ವೆನ್ಸಿ ಎಲೆಕ್ಟ್ರಾನಿಕ್ಸ್ ನಲ್ಲಿ ಶ್ರೇಷ್ಠತೆಯ ಕೇಂದ್ರವನ್ನು ಕೈಬಿಟ್ಟಿದ್ದು, ಕಡಗಂಚಿಯ ಸಿಯುಕೆ ಆವರಣದಲ್ಲಿಯೇ ಈ ಶ್ರೇಷ್ಠತಾ ಕೇಂದ್ರ ತಲೆ ಎತ್ತಲಿದೆ. ದೇಶದ ರಕ್ಷಣಾ ಕಾರ್ಯತಂತ್ರಕ್ಕೆ ಪೂರಕವಾಗಿ ಮಾನವಶಕ್ತಿಯನ್ನು ತರಬೇತಿ ನೀಡುವ ಗುರಿಯನ್ನು ಈ ಕೇಂದ್ರ ಹೊಂದಿದೆ. ಈ ಕೇಂದ್ರದ ಅಡಿಯಲ್ಲಿ ಸಿಯುಕೆಯ ಚಟುವಟಿಕೆಗಳಿಗೆ ಇಸ್ರೋ ಮತ್ತು ಡಿಆರ್‌ಡಿಓ ಸಂಸ್ಥೆಗಳು ತನ್ನ ಬೆಂಬಲವನ್ನು ವ್ಯಕ್ತಪಡಿಸಿವೆ. ಕೀಸೈಟ್ ಟೆಕ್ನಾಲಜೀಸ್‌ನ ಸಹಭಾಗಿತ್ವದಲ್ಲಿ ಶೇ.50-50 ಅನುದಾನದಡಿ 2 ಕೋಟಿ ರೂ. ಕ್ಕಿಂತ ಹೆಚ್ಚಿನ ವೆಚ್ಚದಲ್ಲಿ ಈ ಕೇಂದ್ರ ಸ್ಥಾಪಿಸಲಾಗುತ್ತಿದೆ ಎಂದು ಕುಲಪತಿ ಪ್ರೊ.ಬಟ್ಟು ಸತ್ಯನಾರಾಯಣ ಹೇಳಿದರು.
ವಿಶ್ವವಿದ್ಯಾಲಯವು ಸುಮಾರು 60 ಕೋಟಿ ರೂ. ವೆಚ್ಚದಲ್ಲಿ ಸೋಫಿಸಿಕೇಟೆಡ್ ಇನ್ಸ್ಟರೂಮೆಂಟೇಶನ್ ಸೆಂಟರ್ ಪ್ರಾರಂಭಿಸಿದ್ದು, ಇದು ಉತ್ತರ ಕರ್ನಾಟಕದಲ್ಲಿಯೇ ಮೊದಲ ಕೇಂದ್ರವಾಗಿದೆ. ಐ.ಐ.ಎಸ್.ಸಿ. ಬಿಟ್ಟರೆ ಕಲಬುರಗಿ ಜಿಲ್ಲೆಯಲ್ಲಿ ಈ ಕೇಂದ್ರವಿದೆ. ಇಲ್ಲಿ 600 ಮೆಗಾ ಹಾರ್ಟ್ ಎನ್‌ಎಂಆರ್, ಹೈ ರೆಸುಲ್ಯೂಷನ್ ಮಾಸ್ ಸ್ಪೆಕ್ಟ್ರೋಮೀಟರ್, ಫಿಸಿಕಲ್ ಪ್ರಾಪರ್ಟಿ ಮೆಜರ್ಮೆಂಟ್ ಸಿಸ್ಟಮ್, ಇಂಡಕ್ಟೀವ್ಲಿ ಕಪಲ್ದ್ ಪ್ಲಾಸ್ಮಾ ಮಾಸ್ ಸ್ಪೆಕ್ಟ್ರೋಮೀಟರ್, ಫೀಲ್ಡ್ ಎಮಿಷನ್ ಸ್ಕ್ಯಾನಿಂಗ್ ಎಲೆಕ್ಟ್ರಾನ್ ಮೈಕ್ರೋಸ್ಕೋಪ್, ಸಿಂಗಲ್ ಕ್ರಿಸ್ಟಲ್ ಎಕ್ಸರೇ ಡಿಫ್ರ್ಯಾಕ್ಟೋಮೀಟರ್, ಪೌಡರ್ ಎಕ್ಸರೇ ಡಿಫ್ರ್ಯಾಕ್ಟೋಮೀಟರ್ ನಂತಹ ಅತ್ಯಾಧುನಿಕ ಉಪಕರಣಗಳು ಹೊಂದಿದೆ ಎಂದು ಹೇಳಿದರು.
ಸಕಲ ಮೂಲಸೌಕರ್ಯಗಳಿದಲ್ಲಿ ಮಾತ್ರ ಗುಣಮಟ್ಟದ ಶಿಕ್ಷಣ ನೀಡಲು ಸಾಧ್ಯ. ಇದನ್ನರಿತ ಕೇಂದ್ರ ಸರ್ಕಾರವು ವಿಶ್ವವಿದ್ಯಾಲಯದಲ್ಲಿ ಭೌತಶಾಸ್ತ್ರ, ರಸಾಯನಶಾಸ್ತ್ರ, ಗಣಿತ ಶಾಸ್ತ್ರ, ಜೀವಶಾಸ್ತ್ರ ಹಾಗೂ ಗಣಕ ಶಾಸ್ತ್ರ ವಿಭಾಗಗಳ ಕಟ್ಟಡಗಳ ನಿರ್ಮಾಣಕ್ಕೆ, ಸಿಬ್ಬಂದಿಗಳ ವಸತಿ ಗೃಹ ಹಾಗೂ ಬಾಲಕ-ಬಾಲಕೀಯರಿಗೆ ತಲಾ 500 ಹಾಸಿಗೆಗಳ ವಿದ್ಯಾರ್ಥಿಗಳ ವಸತಿಗೃಹ ನಿರ್ಮಾಣಕ್ಕಾಗಿ ಇತ್ತೀಚೆಗೆ 201.86 ಕೋಟಿ ರೂ. ಗಳನ್ನು ಬಿಡುಗಡೆ ಮಾಡಿದೆ. ಆಗಸ್ಟ್ ನೊಳಗೆ ಭೂಮಿ ಪೂಜೆ ನೆರವೇರಿಸಿ ಮುಂದಿನ 2 ವರ್ಷದಲ್ಲಿ ಇದೆಲ್ಲವನ್ನು ಪೂರ್ಣಗೊಳಿಸುವ ಗುರಿ ಹೊಂದಲಾಗಿದೆ. ವಿ.ವಿ.ಯಲ್ಲಿ 175 ಖಾಯಂ ಪ್ರಾಧ್ಯಾಪಕರಿದ್ದು, ಹೊಸದಾಗಿ ಮಂಜೂರಾದ 29 ಮತ್ತು ಬಾಕಿ ಉಳಿದ 34 ಪ್ರಾಧ್ಯಾಪಕರನ್ನು ಶೀಘ್ರವೆ ಭರ್ತಿ ಮಾಡಿಕೊಳ್ಳಲಾಗುವುದು ಎಂದರು.
ಸುದ್ದಿಗೋಷ್ಠಿಯಲ್ಲಿ ವಿಶ್ವವಿದ್ಯಾಲಯದ ಕುಲಸಚಿವ(ಪ್ರಭಾರ) ಪ್ರೊ.ಚನ್ನವೀರ ಆರ್.ಎಂ., ಹಣಕಾಸು ಅಧಿಕಾರಿ ರಾಮಾದುರೈ, ಸಾರ್ವಜನಿಕ ಸಂಪರ್ಕ ಅಧಿಕಾರಿ ಡಾ. ಗಣಪತಿ ಬಿ. ಸಿನ್ನೂರ್, ಸಹಾಯಕ ಸಾರ್ವಜನಿಕ ಸಂಪರ್ಕ ಅಧಿಕಾರಿ ಡಾ.ಪ್ರಕಾಶ್ ಬಾಳಿಕಾಯಿ, ಕನ್ನಡ ವಿಭಾಗದ ವಿಕ್ರಮ್ ವಿಸಾಜಿ ಸೇರಿದಂತೆ ಎಲ್ಲಾ ನಿಕಾಯಗಳ ಡೀನರು, ಮುಖ್ಯಸ್ಥರು ಉಪಸ್ಥಿತರಿದ್ದರು.







