ಕಲಬುರಗಿ| ಡಿ.14ರಂದು ಶರಣಬಸವ ವಿಶ್ವವಿದ್ಯಾಲಯದ 7ನೇ ಘಟಿಕೋತ್ಸವ

ಕಲಬುರಗಿ: ಶರಣಬಸವ ವಿಶ್ವವಿದ್ಯಾಲಯದ 7ನೇ ವಾರ್ಷಿಕ ಘಟಿಕೋತ್ಸವ ಡಿಸೆಂಬರ್ 14 ರಂದು ನಗರದ ಶ್ರೀ ಶರಣಬಸವೇಶ್ವರ ದೇವಾಲಯದ ಆವರಣದಲ್ಲಿರುವ ಪೂಜ್ಯ ಡಾ. ಶರಣಬಸವಪ್ಪ ಅಪ್ಪ ಅನುಭವ ಮಂಟಪದಲ್ಲಿ ಶರಣಬಸವೇಶ್ವರ ಸಂಸ್ಥಾನದ 9ನೇ ಪೀಠಾಧಿಪತಿಗಳಾದ ಪೂಜ್ಯ ದೊಡ್ಡಪ್ಪ ಅಪ್ಪಾಜಿಯವರ ದಿವ್ಯ ಸಾನಿಧ್ಯದಲ್ಲಿ ನಡೆಯಲಿದೆ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷರು ಹಾಗೂ ಶರಣಬಸವ ವಿಶ್ವವಿದ್ಯಾಲಯದ ಕುಲಾಧಿಪತಿಗಳಾದ ಮಾತೋಶ್ರೀ ಪೂಜ್ಯ ಡಾ. ದಾಕ್ಷಾಯಿಣಿ ಅವ್ವಾಜಿ ತಿಳಿಸಿದರು.
ನಗರದ ಶರಣಬಸವ ವಿಶ್ವವಿದ್ಯಾಲಯದ ಕಾನ್ಫರೆನ್ಸ್ ಹಾಲ್‍ನಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಮಾತೋಶ್ರೀ ಡಾ. ಅವ್ವಾಜಿ, ಧಾರವಾಡದ ಕೃಷಿ ವಿಜ್ಞಾನ ವಿಶ್ವವಿದ್ಯಾಲಯದ (ಯುಎಎಸ್) ಉಪಕುಲಪತಿ ಹಾಗೂ ಹಿರಿಯ ಕೃಷಿ ವಿಜ್ಞಾನಿ ಪ್ರೊ. ಪಿ. ಎಲ್. ಪಾಟೀಲ್ ಅವರು ಘಟಿಕೋತ್ಸವದಲ್ಲಿ ಭಾಷಣ ಮಾಡಲಿದ್ದಾರೆ. ಪದವಿಪೂರ್ವ, ಸ್ನಾತಕೋತ್ತರ, ಪಿಎಚ್‍ಡಿ ಪ್ರಶಸ್ತಿ ಪುರಸ್ಕೃತ ವಿದ್ಯಾರ್ಥಿಗಳಿಗೆ ಮತ್ತು ಡಿಪ್ಲೊಮಾ ಪದವಿ ಪಡೆದವರಿಗೆ ಚಿನ್ನದ ಪದಕಗಳು ಹಾಗೂ ಪ್ರಮಾಣಪತ್ರಗಳನ್ನು ಪ್ರದಾನ ಮಾಡಲು ಸಮ್ಮತಿಸಿದ್ದಾರೆ ಎಂದು ತಿಳಿಸಿದರು.
ಬೆಂಗಳೂರಿನ ಎಸ್‍ಎಪಿ ಇಂಡಿಯಾದ ಉನ್ನತ ಶಿಕ್ಷಣ ಕೌಶಲ್ಯ ವಿಭಾಗದ ಮುಖ್ಯಸ್ಥ ಫಿಲಿಪ್ ಸ್ಯಾಮ್ಯುಯೆಲ್ ಬಾಬು ಅವರು ಗೌರವ ಅಥಿತಿಗಳಾಗಿ ಪಾಲ್ಗೊಳ್ಳಲಿರುವರು. ವಿಶ್ವವಿದ್ಯಾಲಯದ ಉಪಕುಲಪತಿ ಪ್ರೊ. ಅನಿಲಕುಮಾರ್ ಬಿಡವೆ ಅವರು ಘಟಿಕೋತ್ಸವದಲ್ಲಿ ಸ್ವಾಗತ ಭಾಷಣ ಮಾಡಲಿದ್ದಾರೆ. ಕುಲಸಚಿವ ಡಾ. ಎಸ್. ಜಿ. ಡೊಳ್ಳೇಗೌಡರ್, ಕುಲಸಚಿವ ಮೌಲ್ಯಮಾಪನ ಡಾ. ಎಸ್. ಎಚ್. ಹೊನ್ನಳ್ಳಿ ಘಟಿಕೋತ್ಸವದ ಪ್ರಕ್ರಿಯೆಗಳನ್ನು ನಡೆಸಲಿದ್ದಾರೆ ಎಂದು ಡಾ. ಅವ್ವಾಜಿ ಹೇಳಿದರು.
ಪ್ರೊ. ಅನಿಲಕುಮಾರ್ ಬಿಡವೆ ಮತ್ತು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿಗಳಾದ ಬಸವರಾಜ ದೇಶಮುಖ ಅವರು ಮಾತನಾಡಿ ಆಫ್‍ಲೈನ್ ಮತ್ತು ಆನ್‍ಲೈನ್ ಎರಡರಲ್ಲೂ ಸಂಯೋಜಿತ ವಿಧಾನದಲ್ಲಿ ಘಟಿಕೋತ್ಸವ ನಡೆಯಲಿದೆ ಎಂದು ಹೇಳಿದರು.
ಘಟಿಕೋತ್ಸವದಲ್ಲಿ ಖಾಜಾ ಬಂದಾ ನವಾಜ್ ದರ್ಗಾದ ಸಜ್ಜದಾ ನಶೀನ್, ಸೈಯದ್ ಮುಹಮ್ಮದ್ ಅಲಿ ಅಲ್-ಹುಸೈನಿ, ಶ್ರೀ ಗುರು ಚೆನ್ನವೀರೇಶ್ವರ ವಿರಕ್ತಮಠದ ಪೀಠಾಧಿಪತಿಗಳಾದ ಪೂಜ್ಯ ಶ್ರೀ ಗುರುಪಾದಲಿಂಗ ಮಹಾಶಿವಯೋಗಿಗಳು, ಮುತ್ಯಾನ್ ಬಬಲಾದ ಹಾಗೂ ಹೈದರಾಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆಯ ಅಧ್ಯಕ್ಷರೂ ಆಗಿರುವ ವಿಧಾನ ಪರಿಷತ್ ಸದಸ್ಯ ಶಶೀಲ್ ನಮೋಶಿ ಅವರನ್ನು ಈ ಬಾರಿಯ ಗೌರವ ಡಾಕ್ಟರೇಟ್ ಪದವಿಗೆ ಆಯ್ಕೆ ಮಾಡಲಾಗಿದೆ ಎಂದು ಡಾ.ಅವ್ವಾಜಿ ವಿವರಿಸಿದರು.
ಹಿರಿಯ ಕೃಷಿ ವಿಜ್ಞಾನಿ, ಧಾರವಾಡದ ಕೃಷಿ ವಿಜ್ಞಾನ ವಿಶ್ವವಿದ್ಯಾಲಯದ (ಯುಎಎಸ್) ಉಪಕುಲಪತಿ ಪ್ರೊ. ಪಿ. ಎಲ್. ಪಾಟೀಲ್ 7ನೇ ಘಟಿಕೋತ್ಸವ ಭಾಷಣ ಮಾಡಲಿದ್ದಾರೆ ಎಂದು ಹೇಳಿದರು.
ಲಿಂಗೈಕ್ಯ ಪೂಜ್ಯ ಡಾ. ಶರಣಬಸವಪ್ಪ ಅಪ್ಪಾಜಿ ಅವರ ಹೆಸರಿನಲ್ಲಿ ಈ ವರ್ಷದಿಂದ ವಿಶ್ವವಿದ್ಯಾಲಯದ ಪುರುಷ ಮತ್ತು ಮಹಿಳಾ ಟಾಪರ್‌ಗಳಿಗೆ ತಲಾ 21,000 ರೂ.ಗಳ ಎರಡು ನಗದು ಪ್ರಶಸ್ತಿಗಳನ್ನು ಮತ್ತು ಪ್ರಮಾಣಪತ್ರವನ್ನು ನೀಡಲು ತೀರ್ಮಾನಿಸಿದ್ದೇವೆ ಎಂದು ಹೇಳಿದರು.
ಒಟ್ಟು 199 ಪ್ರತಿಭಾನ್ವಿತ ವಿದ್ಯಾರ್ಥಿಗಳು ತಮ್ಮ ಪದವಿಪೂರ್ವ ಮತ್ತು ಸ್ನಾತಕೋತ್ತರ ಕೋರ್ಸ್‍ಗಳಲ್ಲಿ ರ್ಯಾಂಕ್ ಪಡೆದಿದ್ದಾರೆ ಮತ್ತು ಅವರಲ್ಲಿ 45 ವಿದ್ಯಾರ್ಥಿಗಳು ಚಿನ್ನದ ಪದಕಗಳನ್ನು ಪಡೆದಿದ್ದಾರೆ ಎಂದು ಹೇಳಿದರು. ಇದಲ್ಲದೆ, ನಮ್ಮ ವಿದ್ಯಾರ್ಥಿಗಳು ವಿವಿಧ ವ್ಯಕ್ತಿಗಳ ಹೆಸರಿನಲ್ಲಿ ಸ್ಥಾಪಿಸಲಾದ ನಗದು ಬಹುಮಾನಗಳನ್ನು ಗೆದ್ದಿದ್ದಾರೆ. ಘಟಿಕೋತ್ಸವದಲ್ಲಿ ಪಿಎಚ್‍ಡಿ ಪದವಿ ಪಡೆದ 21 ಪ್ರತಿಭಾನ್ವಿತ ವಿದ್ವಾಂಸರನ್ನು ಅಭಿನಂದಿಸಲಾಗುವುದು ಎಂದು ತಿಳಿಸಿದರು.
ಘಟಿಕೋತ್ಸವದಲ್ಲಿ ಸ್ನಾತಕೋತ್ತರ ಮತ್ತು ಪದವಿಪೂರ್ವ ವಿದ್ಯಾರ್ಥಿಗಳು ಸೇರಿದಂತೆ ಒಟ್ಟು 1919 ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಲಾಗುವುದು ಎಂದು ಉಪಕುಲಪತಿ ಪ್ರೊ. ಅನಿಲಕುಮಾರ್ ಬಿಡವೆ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಬಸವರಾಜ ದೇಶಮುಖ್, ವಿಶ್ವವಿದ್ಯಾಲಯದ ಉಪಕುಲಪತಿ ಪ್ರೊ. ಅನಿಲಕುಮಾರ್ ಬಿಡವೆ, ವಿವಿಯ ಕುಲಸಚಿವ ಡಾ. ಎಸ್. ಜಿ. ಡೊಳ್ಳೇಗೌಡರ್, ನಿರ್ದೇಶಕರಾದ ಪ್ರೊ. ವಿ. ಡಿ. ಮೈತ್ರಿ ಮತ್ತು ಡೀನ್ ಡಾ. ಲಕ್ಷ್ಮಿ ಪಾಟೀಲ್ ಮಾಕಾ, ಟಿ.ವಿ ಶಿವಾನಂದನ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.







