ಕಲಬುರಗಿ | 9 ರೈಲ್ವೆ ನೌಕರರಿಗೆ ʼವಿಶಿಷ್ಟ ರೈಲು ಸೇವಾ ಪುರಸ್ಕಾರʼ

ಕಲಬುರಗಿ : ಮುಂಬೈನ ಛತ್ರಪತಿ ಶಿವಾಜಿ ಮಹಾರಾಜ ಟರ್ಮಿನಸ್‌ನಲ್ಲಿರುವ ಕೇಂದ್ರ ರೈಲ್ವೆ ಆಡಿಯಟೋರಿಯಂನಲ್ಲಿ ನಡೆದ ಕೇಂದ್ರ ರೈಲ್ವೆ ಸೋಲಾಪುರ ವಿಭಾಗದ 70ನೇ ವಿಶಿಷ್ಟ ರೈಲು ಸೇವಾ ಪುರಸ್ಕಾರ–2025 ಸಮಾರಂಭದಲ್ಲಿ ಸೋಲಾಪುರ ರೈಲ್ವೆ ವಿಭಾಗವು ವರ್ಕ್ಸ್ ಎಫಿಷಿಯನ್ಸಿ ಶೀಲ್ಡ್ ಹಾಗೂ ಟ್ರಾಕ್ ಮಷಿನ್ ಶೀಲ್ಡ್ ಪ್ರಶಸ್ತಿಗಳನ್ನು ತನ್ನದಾಗಿಸಿಕೊಂಡಿದೆ.
ಈ ಸಂದರ್ಭದಲ್ಲಿ ಕೇಂದ್ರ ರೈಲ್ವೆ ಮಹಾಪ್ರಬಂಧಕ ವಿವೇಕ್ ಕುಮಾರ್ ಗುಪ್ತ ಅವರು ಸೋಲಾಪುರ ವಿಭಾಗದ 9 ಮಂದಿ ರೈಲ್ವೆ ನೌಕರರಿಗೆ “ವಿಶಿಷ್ಟ ರೈಲು ಸೇವಾ ಪುರಸ್ಕಾರ” ಪ್ರದಾನ ಮಾಡಿ ಮಾತನಾಡಿದರು. ಸಾರ್ವಜನಿಕರ ನಿರೀಕ್ಷೆಗಳಿಗೆ ತಕ್ಕಂತೆ ಸೇವೆ ಒದಗಿಸಲು ರೈಲ್ವೆ ಇಲಾಖೆ 2026ರಲ್ಲಿ 52 ವಾರಗಳಿಗೆ 52 ಸುಧಾರಣಾ ಯೋಜನೆಗಳನ್ನು ಜಾರಿಗೆ ತರಬೇಕು. ಜೊತೆಗೆ ಸುರಕ್ಷತೆಗಾಗಿ ಕೃತಕ ಬುದ್ಧಿಮತ್ತೆ (ಎಐ) ತಂತ್ರಜ್ಞಾನ ಬಳಕೆ, ನಿರ್ವಹಣಾ ಕ್ರಮಗಳ ಉನ್ನತಿ ಹಾಗೂ ಸಿಬ್ಬಂದಿ ತರಬೇತಿಗೆ ಹೆಚ್ಚಿನ ಒತ್ತು ನೀಡಬೇಕೆಂದು ಕರೆ ನೀಡಿದರು.
ವಿಭಾಗೀಯ ಹಿರಿಯ ಹಣಕಾಸು ವ್ಯವಸ್ಥಾಪಕ ಆದಿತ್ಯ ತ್ರಿಪಾಠಿ, ರೈಲು ಟಿಕೆಟ್ ಪರಿಶೀಲಕರಾದ ರಾಹುಲ್ ಸುಧಾಮ್ ಕಂಬ್ಳೆ, ಸಂತೋಷ ವಿತ್ತಲ್ ಕಟ್ಕರೆ, ಹಂದರ್ಗುಳೆ ವಿಶಾಲ್ ಸೂರ್ಯಕಾಂತ್, ಅಖಿಲ್ ಬಶೀರ್ ಶೇಖ್, ಮಹಬೂಬ್ ಕೆ. ನದಾಫ್, ಸಂಜೀವಕುಮಾರ್, ವೈಜನಾಥರಾವ್ ಅರ್ಧಪುರೇ, ವಿಜಯ ಸೂರ್ಯಭಾನ್ ಯಾದವ್, ರವೀಂದ್ರ ಶಂಕರ್ ರಾಥೋಡ್ ಸೇರಿದಂತೆ ವಿಭಾಗೀಯ ರೈಲ್ವೆ ವ್ಯವಸ್ಥಾಪಕ (ಡಿಆರ್‌ಎಂ) ಡಾ. ಸುಜೀತ್ ಮಿಶ್ರಾ ಅವರ ನೇತೃತ್ವದ ತಂಡವು ಪ್ರಶಸ್ತಿಗಳನ್ನು ಸ್ವೀಕರಿಸಿತು.
ಕಾರ್ಯಕ್ರಮದಲ್ಲಿ ಹೆಚ್ಚುವರಿ ಮಹಾಪ್ರಬಂಧಕರಾದ ಪ್ರತೀಕ್ ಗೋಸ್ವಾಮಿ, ಪಿ.ಪಿ. ಪಾಂಡೆ, ವಿವಿಧ ವಿಭಾಗಗಳ ಮುಖ್ಯಸ್ಥರು, ಡಿಆರ್‌ಎಂಗಳು, ಸೆಂಟ್ರಲ್ ರೈಲ್ವೆ ಮಹಿಳಾ ಕಲ್ಯಾಣ ಸಂಘದ ಪ್ರತಿನಿಧಿಗಳು ಹಾಗೂ ರೈಲ್ವೆ ಯೂನಿಯನ್ ಮುಖಂಡರು ಉಪಸ್ಥಿತರಿದ್ದರು.







