ಕಲಬುರಗಿ | ಸರಸ್ ಮೇಳದಲ್ಲಿ 96 ಲಕ್ಷ ರೂ. ಗಳ ವಹಿವಾಟು ನಡೆಸಿದ ಸ್ವ ಸಹಾಯ ಸಂಘಗಳು : ಕೃಷ್ಣ ಬಾಜಪೇಯ

ಕಲಬುರಗಿ : ಸರಸ್ ಮೇಳದಲ್ಲಿ 220 ಮಳಿಗೆಗಳಲ್ಲಿ ಸ್ವಸಹಾಯ ಸಂಘಗಳ ಸದಸ್ಯರು ತಮ್ಮ ಉತ್ಪನ್ನಗಳ ಮಾರಾಟ ಮಾಡಿ 96 ಲಕ್ಷ ರೂ. ಗಳ ವಹಿವಾಟು ನಡೆಸಿದ್ದಾರೆ ಎಂದು ಪ್ರಾದೇಶಿಕ ಆಯುಕ್ತ ಕೃಷ್ಣ ಬಾಜಪೇಯ ಹೇಳಿದರು.
ಕಲಬುರಗಿ ನಗರದ ಶ್ರೀ ಶರಣಬಸವೇಶ್ವರ ಜಾತ್ರಾ ಮೈದಾನದಲ್ಲಿ ಕಳೆದ ಫೆ.24 ರಿಂದ ಆರಂಭಗೊಂಡಿರುವ ಮಾ.5ರವರೆಗೆ ನಡೆಯುವ ರಾಷ್ಟ್ರಮಟ್ಟದ ಬೃಹತ್ ನಮ್ಮ ಸರಸ್ ಮೇಳ-2025 ಸಮಾರೋಪದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಹತ್ತು ದಿನದ ಕಾರ್ಯಕ್ರಮ ಯಶಸ್ವಿಯಾಗಿದ್ದು, ಜಿಲ್ಲಾಡಳಿತ ಮತ್ತು ಜಿಲ್ಲಾ ಪಂಚಾಯತ್ ಹಾಗೂ ಮಹಾನಗರ ಪಾಲಿಕೆ ಎಲ್ಲಾ ಅಧಿಕಾರಿಗಳ ಸಹಕಾರದಿಂದ ಕಲಬುರಗಿ ಜಿಲ್ಲೆಯಿಂದ ಹೊರ ರಾಜ್ಯಗಳಿಂದ ಎಲ್ಲ ಸ್ವಹಾಯ ಸಂಘಗಳು ಭಾಗವಹಿಸಿ ಯಶಸ್ವಿಯಾಯಿತು. ಇದಕ್ಕೆ ಶ್ರಮಿಸಿದ ಅಧಿಕಾರಿ ವರ್ಗಕ್ಕೆ ಧನ್ಯವಾದ ತಿಳಿಸಿದರು.
ಭಾರತ ದೇಶದಲ್ಲಿ ಅತಿ ಹೆಚ್ಚು ಜನಸಂಖ್ಯೆ ಇದ್ದು, ದೇಶವನ್ನು ಅಭಿವೃದ್ಧಿ ಪಥದಲ್ಲಿ ಮುನ್ನಡೆಸಬೇಕಾದರೆ ಉದ್ಯಮಶೀಲತೆಗೆ ಬಹಳ ಗೌರವ ಮಹತ್ವವಿದೆ. ಸ್ವಸಹಾಯ ಸಂಘಗಳ ಸದಸ್ಯರು ಸರಿಯಾದ ಕಾರ್ಯ ಯೋಜನೆಗಳ ಮೂಲಕ ವಸ್ತುಗಳ ಉತ್ಪಾದನೆ ಮಾಡಿ ಹೆಚ್ಚಿನ ಆದಾಯ ಗಳಿಸಿ ಸ್ವಾವಲಂಬನೆ ಜೀವನವನ್ನು ಸಾಗಿಸಬಹುದು ಎಂದರು.
ಕಲಬುರಗಿಯಲ್ಲಿ ಇನ್ಮುಂದೆ ಪ್ರತಿವರ್ಷ ಸರಸ್ ಮೇಳ ಆಯೋಜನೆ ಮಾಡುವ ಉದ್ದೇಶವಿದ್ದು, ಮುಂದಿನ ಸರಸ್‌ಮೇಳದಲ್ಲಿ 3 ಕೋಟಿ ರೂ. ವಹಿವಾಟು ನಡೆಸುವ ಗುರಿ ಹೊಂದಲಾಗಿದೆ ಎಂದು ಹೇಳಿದರು.
ಜಿಲ್ಲಾ ಪಂಚಾಯತ್ ಮುಖ್ಯಕಾರ್ಯನಿರ್ವಾಹಕ ಅಧಿಕಾರಿ ಭಂವರ ಸಿಂಗ್ ಮೀನಾ ಮಾತನಾಡಿ, ಕಲಬುರಗಿ ಜಿಲ್ಲೆಯ ಎಲ್ಲ ಸ್ವಸಹಾಯ ಸಂಘಗಳು ಸರಸ್ ಮೇಳದಲ್ಲಿ ಭಾಗವಹಿಸಿ ಸ್ವಸಹಾಯ ಸಂಘದ ಸದಸ್ಯರು ಹೆಚ್ಚಿನ ಆದಾಯಗಳಿಸಿದ್ದಾರೆ. ಕಲಬುರಗಿ ಜಿಲ್ಲೆಯಲ್ಲಿ ಮೊದಲ ಬಾರಿಗೆ ಸರಸ್ ಮೇಳ ಆಯೋಜನೆ ಮಾಡಿದ್ದು, ಕಲಬುರಗಿ ಜಿಲ್ಲೆಯ ತಾಲೂಕಿನ ಮತ್ತು ಹೊರ ರಾಜ್ಯಗಳಿಂದ ಸ್ವಸಹಾಯ ಸಂಘದ ಸದಸ್ಯರು ಸರಸ ಮೇಳದಲ್ಲಿ ಭಾಗವಹಿಸಿ ಯಶಸ್ವಿಗೊಳಿಸಿದ್ದಾರೆ ಎಂದರು.
ರಾಷ್ಟ್ರ ಮಟ್ಟದ ಕಾರ್ಯಕ್ರಮ ಯಶಸ್ವಿಗೊಳಿಸಲು ಜನವರಿಯಿಂದ ಕಾರ್ಯಕ್ರಮದ ಪೂರ್ವ ಸಿದ್ಧತೆ ಮಾಡಿಕೊಂಡಿದ್ದೇವು, ಸ್ವ ಸಹಾಯ ಸಂಘ ಸದಸ್ಯರಿಗೆ ಪ್ರತಿದಿನ ಮಧ್ಯಾಹ್ನ ಸಂಪನ್ಮೂಲ ವ್ಯಕ್ತಿಗಳಿಂದ ಕಾರ್ಯಾಗಾರ ಹಮ್ಮಿಕೊಂಡು ಅವರಿಗೆ ತಿಳುವಳಿಕೆ ನೀಡಲಾಯಿತು ಎಂದರು.
ಸ್ವ-ಸಹಾಯ ಸಂಘದ ಸದಸ್ಯರಿಗೂ ವಸತಿ ಮತ್ತು ಸಾರಿಗೆ ವ್ಯವಸ್ಥೆಗಳನ್ನು ಸಮರ್ಪಕವಾಗಿ ಮಾಡಲಾಗಿದೆ. ಗ್ರಾಮೀಣ ಮತ್ತು ನಗರ ಪ್ರದೇಶಗಳ ಮಹಿಳಾ ಸ್ವ-ಸಹಾಯ ಗುಂಪುಗಳು ತಯಾರಿಸುವ ಉತ್ಪನ್ನಗಳ ಪ್ರದರ್ಶನ ಹಾಗೂ ಮಾರಾಟಕ್ಕೆ ಒಂದು ಬೃಹತ್ ವೇದಿಕೆಯನ್ನು ಕಲಬುರಗಿಯಲ್ಲಿ ಕಲ್ಪಿಸಿದ್ದು, ಪ್ರತಿದಿನ ಬೆಳಗ್ಗೆ 10:30 ರಿಂದ ರಾತ್ರಿ 9:30 ಗಂಟೆವರೆಗೆ ಮಳಿಗೆಗಳು ತೆರೆಯಲಾಗಿತ್ತು ಎಂದರು.
ಮಹಾನಗರ ಪಾಲಿಕೆ ಆಯುಕ್ತ ಅವಿನಾಶ ಶಿಂಧೆ ಅವರು ಮಾತನಾಡಿದರು.
ಬೆಂಗಳೂರಿನ ಕೇಂದ್ರ ಕಚೇರಿ ಯೋಜನಾ ಅಧಿಕಾರಿ ರಾಘವಿ ನಾಯಕ ಪ್ರಸ್ತಾವಿಕವಾಗಿ ಮಾತನಾಡಿ, 20 ಲೈವ್ ಫುಡ್ ಸ್ಟಾಲ್ ಅಲ್ಲದೆ ನಮ್ಮ ಸರಸ್ ಮೇಳದಲ್ಲಿ ಒಂದೇ ಸೂರಿನಡಿ 230 ಮಳಿಗೆಗಳನ್ನು ಹಾಕಲಾಗಿದೆ. ಪ್ರಮುಖವಾಗಿ ಬಿದರಿ ಕಲೆ, ಚನ್ನಪಟ್ಟಣ ಗೊಂಬೆ, ಕಿನ್ನಾಳ ಆಟಿಕೆ, ಇಳಕಲ್ ಸೀರೆ, ಮೈಸೂರು ಇನ್ಲೇ, ಚಿಕ್ಕಬಳ್ಳಾಪುರ ಲೆದರ್ ಪಪ್ಪೆಟ್, ಲಂಬಾಣಿ ಕುಸುರಿ ಕಲೆ, ಖಾದಿ ಬಟ್ಟೆಗಳು, ಮಲೆನಾಡಿನ ಉಪ್ಪಿನಕಾಯಿ, ಹ್ಯಾಂಡ್ ಲೂಮ್ ಸೀರೆಗಳು, ಟೆರಿಕೋಟ್ ಆಭರಣಗಳು, ಹೋಂ ಮೇಡ್ ಸೌಂದರ್ಯ ವರ್ಧಕಗಳು, ಹರ್ಬಲ್ ಸೋಪ್ ಗಳು, ಸ್ಯಾನಿಟರಿ ನ್ಯಾಪ್ಕಿನ್ಸ್, ಸೆಣಬಿನ ಬ್ಯಾಗ್ ಗಳು ಹೀಗೆ ರಾಜ್ಯದ 30 ಜಿಲ್ಲೆಯ 200ಕ್ಕೂ ಹೆಚ್ಚು ಮಳಿಗೆಗಳಿವೆ. ಇನ್ನೂ 10 ಹೊರ ರಾಜ್ಯಗಳಿಂದ ಆಗಮಿಸಿರುವ ಮಹಿಳಾ ಸ್ವ-ಸಹಾಯ ಗುಂಪುಗಳು ಇಲ್ಲಿ ಮಳಿಗೆ ತೆರೆದಿರೋದು ಮತ್ತೊಂದು ವಿಶೇಷ ಎಂದರು.
ಇದೇ ಸಂದರ್ಭದಲ್ಲಿ ಕೋಲಾರ ಜಿಲ್ಲೆಯ ಶ್ರೀ ಕಾಳಿಕಾಂಬ ಸ್ವಸಹಾಯ ಗುಂಪು, ಬ್ರಾಂಡಿಂಗ್ ಮತ್ತು ಪ್ಯಾಕೇಜಿಂಗ್, ಚೆೆರಿ ಮಿಲೆಟ್ ಮಿಕ್ಸ್ಕ್ಸಿ, ಪ್ರಥಮ ಸ್ಥಾನ, ಚಿಕ್ಕಬಳ್ಳಾಪೂರ ಶ್ರೀ ಲಕ್ಷ್ಮಿ ಮಹಿಳಾ ಸ್ವ ಸಹಾಯ ಗುಂಪು, ತೊಕ್ಕುಗಳು ಹಾಗೂ ಜ್ಯಾಮ್ಗಳು ದ್ವಿತೀಯ ಸ್ಥಾನ, ತುಮಕೂರು, ಜ್ಞಾನಭಾರತಿ ಮಹಿಳಾ ಸ್ವ ಸಹಾಯ ಗುಂಪು ನೈಸರ್ಗಿಕ ಸೀಗೆಕಾಯಿ ಹಾಗೂ ಕೇಶ ಉತ್ಪನ್ನಗಳ ತೃತೀಯ ಸ್ಥಾನ ಪಡೆದರು.
ವೈಶಿಷ್ಟತೆಯುಳ್ಳ ಉತ್ಪನ್ನಗಳು, ಅಕ್ಕ ಫೂಡ್‌ಕೋರ್ಟ್ ಮಳಿಗೆಗಳು, ಸ್ವಸಹಾಯ ಗುಂಪಿನ ಮಳಿಗೆಗಳು, ಪ್ರಥಮ ದ್ವೀತಿಯ, ತೃತೀಯ ಸ್ಥಾನಗಳನ್ನು ಪ್ರಾದೇಶಿಕ ಆಯುಕ್ತ ಕೃಷ್ಣ ಭಾಜಪೇಯಿ ಪ್ರಶಸ್ತಿ ನೀಡಿ ಸನ್ಮಾನಿಸಿದರು.
ವೇದಿಕೆಯ ಮೇಲೆ ಜಿಲ್ಲಾ ಪಂಚಾಯತ್ ಯೋಜನಾ ನಿರ್ದೇಶಕ ಜಗದೇವಪ್ಪ ಜಿಲ್ಲಾ ಕೌಶಲ್ಯಾಭಿವೃದ್ಧಿ ಅಧಿಕಾರಿ ನಾಗುಭಾಯಿ ಸೇರಿದಂತೆ ವಿವಿಧ ಸ್ವ ಸಹಾಯಗಳ ಸದಸ್ಯರು ಸಾರ್ವಜನಿಕರು ವಿದ್ಯಾರ್ಥಿ, ವಿದ್ಯಾರ್ಥಿನಿಯರು ಭಾಗವಹಿಸಿದ್ದರು.







