Kalaburagi | ವೀರಮ್ಮ ಗಂಗಸಿರಿ ಕಾಲೇಜಿನ ಹಿಂದಿ ಸರ್ಟಿಫಿಕೇಟ್ ಕೋರ್ಸ್‌ಗೆ ಶೇ.99ರಷ್ಟು ಫಲಿತಾಂಶ

ಕಲಬುರಗಿ: ನಗರದ ಪ್ರತಿಷ್ಠಿತ ಶ್ರೀಮತಿ ವೀರಮ್ಮ ಗಂಗಸಿರಿ ಮಹಿಳಾ ಮಹಾವಿದ್ಯಾಲಯದ ಹಿಂದಿ ವಿಭಾಗವು ಹೊಸದಿಲ್ಲಿಯ ಕೇಂದ್ರೀಯ ಹಿಂದಿ ನಿರ್ದೇಶನಾಲಯದ ಸಹಯೋಗದಲ್ಲಿ ಆಯೋಜಿಸಿದ್ದ ಸರ್ಟಿಫಿಕೇಟ್ ಕೋರ್ಸ್ ಪರೀಕ್ಷೆಯಲ್ಲಿ ವಿದ್ಯಾರ್ಥಿಗಳು ಉತ್ತಮ ಸಾಧನೆ ಮಾಡಿದ್ದಾರೆ.
ಮಹಾವಿದ್ಯಾಲಯದ ಪರೀಕ್ಷಾ ಕೇಂದ್ರದಲ್ಲಿ ಪರೀಕ್ಷೆ ಬರೆದ ಒಟ್ಟು 102 ವಿದ್ಯಾರ್ಥಿಗಳ ಪೈಕಿ 101 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು, ಶೇ.99ರಷ್ಟು ಫಲಿತಾಂಶ ದಾಖಲಾಗಿದೆ. ಈ ಮೂಲಕ ಮಹಾವಿದ್ಯಾಲಯದ ಕೀರ್ತಿಗೆ ಮತ್ತೊಂದು ಗರಿ ಸೇರ್ಪಡೆಯಾಗಿದೆ.
ಉತ್ತೀರ್ಣರಾದ 101 ವಿದ್ಯಾರ್ಥಿಗಳ ಪೈಕಿ 53 ವಿದ್ಯಾರ್ಥಿಗಳು ಡಿಸ್ಟಿಂಕ್ಷನ್, 43 ವಿದ್ಯಾರ್ಥಿಗಳು ಪ್ರಥಮ ಶ್ರೇಣಿ, 4 ವಿದ್ಯಾರ್ಥಿಗಳು ದ್ವಿತೀಯ ಶ್ರೇಣಿ ಹಾಗೂ ಓರ್ವ ವಿದ್ಯಾರ್ಥಿ ತೃತೀಯ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ.
ವಿದ್ಯಾರ್ಥಿಗಳ ಈ ಸಾಧನೆಗೆ ಹೈದ್ರಾಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಶಶಿಲ್ ಜಿ. ನಮೋಶಿ, ಉಪಾಧ್ಯಕ್ಷ ರಾಜಾ ಬಿ. ಭೀಮಳ್ಳಿ, ಕಾರ್ಯದರ್ಶಿ ಉದಯಕುಮಾರ್ ಚಿಂಚೋಳಿ, ಜಂಟಿ ಕಾರ್ಯದರ್ಶಿ ಡಾ. ಕೈಲಾಸ್ ಪಾಟೀಲ್, ಕಾಲೇಜು ಅಭಿವೃದ್ಧಿ ಸಮಿತಿಯ ಸಂಚಾಲಕ ನಾಗಣ್ಣ ಘಂಟಿ, ಸದಸ್ಯರಾದ ಅರುಣ್ ಕುಮಾರ್ ಪಾಟೀಲ್ ಹಾಗೂ ಅನಿಲಕುಮಾರ್ ಮರಗೋಳ ಸೇರಿದಂತೆ ಆಡಳಿತ ಮಂಡಳಿಯ ಸದಸ್ಯರು, ಮಹಾವಿದ್ಯಾಲಯದ ಪ್ರಾಚಾರ್ಯ ಪ್ರೊ. ಆರ್.ಬಿ. ಕೊಂಡಾ, ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ ಮತ್ತು ವಿದ್ಯಾರ್ಥಿಗಳು ಅಭಿನಂದನೆ ಸಲ್ಲಿಸಿದ್ದಾರೆ ಎಂದು ಹಿಂದಿ ವಿಭಾಗದ ಮುಖ್ಯಸ್ಥ ಡಾ. ಪ್ರೇಮಚಂದ ಚವ್ಹಾಣ ತಿಳಿಸಿದ್ದಾರೆ.






